ಲಗಾನ್, ಸ್ವದೇಶ್, ಜೋಧಾ ಅಕ್ಬರ್ ಚಿತ್ರಗಳ ಮೂಲಕ ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನಿರ್ದೇಶಕ ಅಶುತೋಷ್ ಗೋವರಿಕರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐತಿಹಾಸಿಕ ಹಿನ್ನಲೆಯಿರುವ ಹೊಸ ಚಿತ್ರ ‘ಪಾಣಿಪತ್’ನ ಟ್ರೈಲರ್ ಬಿಡುಗಡೆಗೊಂಡಿದೆ. ‘ದಿ ಗ್ರೇಟ್ ಬಿಟ್ರೇಯಲ್’ (ಒಂದು ಮಹಾ ಮೋಸದ ಕಥೆ) ಎಂಬ ಟ್ಯಾಗ್ ಲೈನ್ ಕೂಡಾ ಈ ಚಿತ್ರಕ್ಕಿದೆ.
ಅರ್ಜುನ್ ಕಪೂರ್, ಸಂಜಯ್ ದತ್, ಕೃತಿ ಸನೋನ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಮರಾಠ ಯೋಧ ಸದಾಶಿವ್ ರಾವ್ ಭಾವು ಮತ್ತು ಅಫ್ಘಾನ್ ದೊರೆ ದುರ್ರಾನಿ ಸಾಮ್ರಾಟ ಅಹಮ್ಮದ್ ಶಾ ಅಬ್ದಾಲಿ ನಡುವೆ 1761ರಲ್ಲಿ ನಡೆದ ಮೂರನೇ ಪಾಣಿಪತ್ ಕದನದ ಹಿನ್ನಲೆಯಲ್ಲಿ ತಯಾರಾಗಿದೆ. ಚಿತ್ರದ ಟ್ರೈಲರ್ ನಲ್ಲಿ ಈ ಯುದ್ಧದ ಸನ್ನಿವೇಶಗಳನ್ನೇ ಹೈಲೈಟ್ ಮಾಡಲಾಗಿರುವುದು ವಿಶೇಷ.
ಈ ಐತಿಹಾಸಿಕ ಮಹತ್ವದ ಚಿತ್ರದಲ್ಲಿ ನಟ ಅರ್ಜುನ್ ಕಪೂರ್ ಮರಾಠ ಯೋಧ ಸದಾಶಿವ್ ರಾವ್ ಭಾವು ಪಾತ್ರವನ್ನು ನಿಭಾಯಿಸಿದ್ದಾರೆ ಕೃತಿ ಸನೋನ್ ಸದಾಶಿವ್ ರಾವ್ ಪತ್ನಿ ಪಾರ್ವತಿ ಬಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನು ಹಿರಿಯ ನಟ ಸಂಜಯ್ ದತ್ ಈ ಚಿತ್ರದಲ್ಲಿ ಅಫ್ಘಾನ್ ದೊರೆ ಅಹಮ್ಮದ್ ಶಾ ಅಬ್ದಾಲಿ ಪಾತ್ರವನ್ನು ನಿರ್ವಹಿಸಿರುವುದು ವಿಶೇಷ.
ಕೃತಿ ಸನೋನ್ ಹಿನ್ನಲೆ ಧ್ವನಿಯೊಂದಿಗೆ ಈ ಟ್ರೈಲರ್ ಪ್ರಾರಂಭಗೊಳ್ಳುತ್ತದೆ.
‘ಮರಾಠ ಯೋಧರ ಧರ್ಮ ಮತ್ತು ಕರ್ಮ ಎರಡೂ ಅವರ ವೀರತ್ವವೇ ಆಗಿದೆ’ ಎಂಬ ಮಾತಿನೊಂದಿಗೆ ಟ್ರೈಲರ್ ಪ್ರಾರಂಭಗೊಳ್ಳುತ್ತದೆ.
ಇನ್ನು
ಅಫ್ಘಾನ್ ದೊರೆ ಅಹಮ್ಮದ್ ಶಾ ಅಬ್ದಾಲಿ ಪ್ರತೀ ಸಲ ಭಾರತದ ಮೇಲೆ ದಂಡೆತ್ತಿ ಬಂದಾಗಲೂ ಯಮುನಾ ನದಿಯ ನೀರು ಏಳು ದಿನಗಳವರೆಗೆ ಕೆಂಪಾಗಿ ಹರಿಯುತ್ತಿತ್ತು, ಎಂದು ಹೇಳುವ ಮೂಲಕ ಆತನ ಮತ್ತು ಆತನ ಸೈನ್ಯದ ಕ್ರೌರ್ಯದ ಪರಿಚಯವನ್ನು ಒಂದೇ ವಾಕ್ಯದಲ್ಲಿ ಇಲ್ಲಿ ಮಾಡಿಕೊಡಲಾಗಿದೆ.
ಪಾಣಿಪತ್ ಟ್ರೈಲರ್ ನೋಡಿದಾಗ ಪಕ್ಕನೇ ನಮಗೆ ಸಂಜಯ್ ಲೀಲಾ ಬನ್ಸಾಲಿಯವರ ‘ಬಾಜಿರಾವ್ ಮಸ್ತಾನಿ’ ಮತ್ತು ‘ಪದ್ಮಾವತಿ’ ಚಿತ್ರಗಳು ಹಾಗೇ ಕಣ್ಣಮುಂದೆ ಸುಳಿದುಹೋಗುತ್ತವೆ.
ಒಟ್ಟಿನಲ್ಲಿ ಡಿಸೆಂಬರ್ 06ರಂದು ತೆರೆಗೆ ಅಪ್ಪಳಿಸಲಿರುವ ‘ಪಾಣಿಪತ್’ ಚಿತ್ರ ಆಶುತೋಷ್ ಅವರ ನಿರ್ದೇಶನ ಕೌಶಲಕ್ಕೊಂದು ಸವಾಲಾಗಿದ್ದು ಪ್ರೇಕ್ಷಕರು ಈ ಐತಿಹಾಸಿಕ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.