ಭುವನೇಶ್ವರ: ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆ ವೇಳೆ ರಥದಿಂದ ಗುಂಡಿಚಾ ದೇವಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾಗ ಕೆಲವು ಸೇವಕರ ಮೇಲೆ ಬಲಭದ್ರ ದೇವರ ವಿಗ್ರಹ ಬಿದ್ದ ಬಗ್ಗೆ ತನಿಖೆ ಮಾಡಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ‘ಪಹಂಡಿ’ ಆಚರಣೆಯ ಸಂದರ್ಭ ಘಟನೆ ನಡೆದಿದ್ದು ಈ ಬಗ್ಗೆ ಸಮಿತಿಯು ಕಳವಳ ವ್ಯಕ್ತಪಡಿಸಿದೆ.ಘಟನೆಯ ಬಗ್ಗೆ ವಿವರವಾದ ಚರ್ಚೆಯನ್ನೂ ನಡೆಸಿದೆ ಎಂದು ಪುರಿಯ ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತದ (SJTA) ಮುಖ್ಯ ಆಡಳಿತಾಧಿಕಾರಿ ವಿ ವಿ ಯಾದವ್ ಹೇಳಿದ್ದಾರೆ.
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM), ಎಸ್‌ಜೆಟಿಎ ನಿರ್ವಾಹಕರು (development)ಮತ್ತು ಡಿಎಸ್‌ಪಿ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯು ‘ನೀಲಾದ್ರಿ ಬಿಜೆ’ (ಭಗವಾನ್ ಜಗನ್ನಾಥ, ಬಾಲಭದ್ರ ಮತ್ತು ಸುಭದ್ರಾ ಹಿಂತಿರುಗುವ ಕ್ರಮ) ‘ ಮುಗಿದ ನಂತರ 10 ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸುತ್ತದೆ ಎಂದು ಹೇಳಿದ್ದಾರೆ.
ಸಮಿತಿಯು ಲಭ್ಯವಿರುವ ವೀಡಿಯೋ ತುಣುಕನ್ನು ಪರಿಶೀಲಿಸುತ್ತದೆ ಮತ್ತು ಘಟನೆಗೆ ಕಾರಣವಾದ ಇತರ ಅಂಶಗಳೊಂದಿಗೆ ಗೊತ್ತುಪಡಿಸಿದ ಸೇವಕರು ಇದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತದೆ ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದರು.
ರಾತ್ರಿ 9 ಗಂಟೆಯ ವೇಳೆಗೆ ಧಾರ್ಮಿಕ ವಿಧಿಗಳು ನಡೆಯುತ್ತಿದ್ದ ವೇಳೆ ಬಲಭದ್ರ ದೇವರ ವಿಗ್ರಹ ಬಿದ್ದ ಪರಿಣಾಮ 12 ಮಂದಿ ಭಕ್ತರು ಗಾಯಗೊಂಡಿದ್ದರು. ಆ ಪೈಕಿ ಒಬ್ಬರನ್ನು ಮಾತ್ರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ವಿಗ್ರಹ ಬಿದ್ದ ವಿಚಾರ ಕೋಟ್ಯಂತರ ಭಕ್ತರ ಭಾವನೆಗಳಿಗೆ ಮಾವು ಉಂಟು ಮಾಡಿದೆ ಎಂದು ಕಾಂಗ್ರೆಸ್ ಮತ್ತು ಬಿಜು ಜನತಾ ದಳ ಆಡಳಿತಾರೂಢ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದೆ.