Advertisement

Pandit Venkatesh Kumar; ಕರಾವಳಿಗರ ಪ್ರೀತಿ, ಮನ್ನಣೆಯನ್ನೆಂದೂ ಮರೆಯಲಾರೆ

11:02 AM Dec 15, 2024 | Team Udayavani |

“ನನಗೆ ಕರಾವಳಿ ಎಂದರೆ ಹೆಮ್ಮೆ, ಇಲ್ಲಿ ಹಿಂದಿನಿಂದಲೂ ಕರ್ನಾಟಕ ಸಂಗೀತದ ಪ್ರಭಾವ ಜಾಸ್ತಿ. ಭರತನಾಟ್ಯ ಇರಬಹುದು, ಶಾಸ್ತ್ರೀಯ ಗಾಯನ ಇರಬಹುದು. ಯಕ್ಷಗಾನವಂತೂ ಇಲ್ಲಿ ಹಾಸುಹೊಕ್ಕು. ಆದರೆ ಎಲ್ಲವೂ ಸಂಗೀತವೇ ಎನ್ನುವುದು ಮುಖ್ಯ. ಅದರಲ್ಲೂ ನನಗಂತೂ ಇಲ್ಲಿನ ಜನರು ಬಹಳ ಮನ್ನಣೆ ನೀಡಿದ್ದಾರೆ, ಅಷ್ಟೇ ಅಲ್ಲ ನನ್ನ ಕಛೇರಿಗಳಿಗೆ ಬಂದು ಸಂಗೀತವನ್ನು ಮನದುಂಬಿ ಆಸ್ವಾದಿಸಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ.’

Advertisement

ಇದು ಹಿಂದುಸ್ಥಾನಿ ಸಂಗೀತದಲ್ಲಿ ದೇಶದ ಅಗ್ರಗಣ್ಯ ಗಾಯಕರಲ್ಲೊಬ್ಬರಾದ ಧಾರವಾಡದ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರ ನುಡಿ. 30ನೇ ವರ್ಷದ ಆಳ್ವಾಸ್‌ ವಿರಾಸತ್‌ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರು “ಉದಯವಾಣಿ’ ಜತೆಗೆ ತಮ್ಮ ಒಂದಿಷ್ಟು ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು.

ಕರಾವಳಿಯಲ್ಲಿ ನಿಮ್ಮ ಗಾಯನದ ಬಗ್ಗೆ ಜನರ ಸ್ಪಂದನೆ ಹೇಗಿದೆ?
ಉತ್ತರಾದಿ, ದಕ್ಷಿಣಾದಿ ಬೇರೆ ಶೈಲಿಗಳಿರಬಹುದು, ಎಲ್ಲದಕ್ಕೂ ಲಯ ಬೇಕು, ಸ್ವರ ಬೇಕು, ಕರಾವಳಿ ಎನ್ನುವುದು ಸಾಂಸ್ಕೃತಿಕವಾಗಿ ಬಹಳಷ್ಟು ಪ್ರಬುದ್ಧವಾಗಿ ಬೆಳೆದ ಪ್ರದೇಶ. ಭೀಮಸೇನ್‌ ಜೋಶಿ ಅವರನ್ನು ಉತ್ತರ ಕರ್ನಾಟಕಕ್ಕಿಂತಲೂ ಮೊದಲು ಪರಿಚಯಿಸಿ ಜನಪ್ರಿಯತೆಗೆ ಕಾರಣಕರ್ತರಾದವರು ಕರಾವಳಿಗರು. ಇಲ್ಲಿನ ಜನರು ಸುಸಂಸ್ಕೃತರು, ಸಾಹಿತ್ಯ, ಯಕ್ಷಗಾನ, ಭರತನಾಟ್ಯ ಇತ್ಯಾದಿ ಮೂಲಕ ಸಂಸ್ಕೃತಿಯನ್ನು ಮನಸ್ಸಿಗೆ ಒಲಿಸಿಕೊಂಡವರು. ಕಲಾವಿದರು ಯಾವುದೇ ಶೈಲಿ ಇದ್ದರೂ ಗೌರವಿಸಿ ಸಂತಸ ಪಡುವವರೆನ್ನುವುದು ನನಗೆ ಇಷ್ಟ.

ಹೇಗೆ ನೀವು ಈಗಿನ ಸ್ಥಾನಮಾನ ಗಳಿಸಿಕೊಂಡಿರಿ, ಇಷ್ಟವಾದ ಕಛೇರಿಗಳು ಯಾವೆಲ್ಲ?
ನಾನು ಗದಗದ ಪುಟ್ಟರಾಜ ಗವಾಯಿ ಅವರ ಆಶ್ರಮದಲ್ಲಿ 12 ವರ್ಷ ಸೇವೆ ಮಾಡಿಕೊಂಡು ಸಂಗೀತ ಕಲಿತೆ. ಅಲ್ಲಿ ದಿನದ 24 ಗಂಟೆ ಸಂಗೀತ, ಗುರುಸೇವೆ ಮಾಡುತ್ತಾ ಕಲಿತ ಪರಂಪರೆ ನನ್ನದು. ಚಿಕ್ಕವನಿದ್ದಾಗ 12 ವರ್ಷ ಕಲಿತು ಗುರುಗಳ ಆಶೀರ್ವಾದದೊಂದಿಗೆ ಹೊರಗೆ ಬಂದೆ. ಆಗ ಸಂಗೀತಕ್ಕೆ ಉತ್ತೇಜನ ಬಹಳ ಕಡಿಮೆ ಇತ್ತು. 7-8 ವರ್ಷ ಖಾಸಗಿಯಾಗಿ ಉದ್ಯೋಗ ಮಾಡಿಕೊಂಡು ಬಂದೆ. ಬಳಿಕ ಧಾರವಾಡ ವಿ.ವಿ.ಯಲ್ಲಿ ಉದ್ಯೋಗವಾಯಿತು. ಗುರುಗಳ ಕೃಪಾಶೀ ರ್ವಾದದಿಂದ ಆರ್ಥಿಕ ಸ್ಥಿತಿ ಸುಧಾರಿಸಿತು. ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಚೆನ್ನೈ, ಬಿಹಾರ, ದಿಲ್ಲಿ ಮುಂತಾ ದೆಡೆ ಗಳಲ್ಲೆಲ್ಲ ಅಡ್ಡಾಡಿದೆ. ಪುಣೆಯ ಸವಾಯಿ ಗಂಧರ್ವ ಸಮ್ಮೇಳನ, ಕಲ್ಕತ್ತಾ ಐಟಿಸಿ ಸಮ್ಮೇಳನ, ಚೆನ್ನೈ, ದಿಲ್ಲಿಯ ಗಂಧರ್ವ ಹಾಲ್‌ನ ಸಂಗೀತ ಸಭಾಗಳಲ್ಲಿ ಸಿಕ್ಕಿದ ಸ್ಪಂದನೆ ಬಹಳ ದೊಡ್ಡದು. 10-15ಸಾವಿರ ಶ್ರೋತೃಗಳು, ಸಂಜೆಯಿಂದ ಬೆಳಗ್ಗೆವ ರೆಗೆ ಕುಳಿತು ಕೇಳುವುದನ್ನು ನೋಡುವುದೇ ಆನಂದ.

ಈಗ ಸಂಗೀತ, ಲಲಿತ ಕಲೆಗೆ ಪ್ರೋತ್ಸಾಹ ಸಮಾಜದಲ್ಲಿ ಹೇಗಿದೆ?
ಈಗ ಬಹಳ ವ್ಯತ್ಯಾಸ ಆಗಿದೆ. ಆಗ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ನಿವೃತ್ತರು, ವಯಸ್ಸಾದವರು, ಅಂತಹ ಸಂಸ್ಕಾರ ಇದ್ದವರು ಮಾತ್ರ ಬರುತ್ತಿದ್ದರು. ಆದರೆ ಈಗ ನೋಡಿದರೆ ಪ್ರೇಕ್ಷಕರಲ್ಲಿ ಶೇ.50ರಷ್ಟು ಯುವಜನರೇ ಇರುತ್ತಾರೆ. ಅವರು ಸಂಗೀತ ಕೇಳಲು ಕೂರುವುದೇ ಖುಷಿ. ಮುಂದೆ ಸಂಗೀತ ಪರಂಪರೆ ಬೆಳೆಸಿಕೊಂಡು ಹೋಗುವವರು ಅವರೇ.

Advertisement

ಸ್ಮಾರ್ಟ್‌ಫೋನ್‌ ಭರಾಟೆ ನಡುವೆ ಸಂಗೀತಕ್ಕೆ ಸವಾಲುಗಳಿವೆಯೇ?
ಮೊಬೈಲ್‌ ಬೇಕು, ಅದು ಆವಶ್ಯಕ, ಆಯಾ ಕಾಲದೊಳಗೆ ಅಂತಹ ಬೆಳವಣಿಗೆ ಸಹಜ. ಆದರೆ ಮೊಬೈಲ್‌ನ ಬೆನ್ನು ಹತ್ತಲಾಗದು, ಅದರಿಂದ ಪಾಠ, ಕಲಿಕೆ ಅಸಾಧ್ಯ, ಹಾಗೆ ಮಾಡಿದರೆ ಅದು ಶೋಕಿ ಆಗಬಹುದು. ಗುರುಗಳ ಮುಂದೆ ಕುಳಿತು ಪಾಠ ಹೇಳಿಸಿ ಕೊಳ್ಳಬೇಕು, ಆನ್‌ಲೈನ್‌ನಲ್ಲಿ ಕಲಿತರೆ ಅದು ಅಸಮಂಜಸವಾಗಬಹುದು. ಮೊಬೈಲ್‌ನಿಂದ ಅನುಕೂಲತೆ ಇದೆ ಆದರೆ ಅದರ ಬಳಕೆ ನಮ್ಮ ಕೈಲಿದೆ. ಅದು ಅನನುಕೂಲತೆ ಆಗಬಾರದು.

ನಮ್ಮಲ್ಲಿ ಈಗ ಸಂಗೀತದ ಸನ್ನಿವೇಶ ಹೇಗಿದೆ?
ಈಗ ಸಂಗೀತ ಕಲಿಯುವವರು ಬಹಳ ಹೆಚ್ಚಾಗಿ ದ್ದಾರೆ. ಆದರೆ ಮೊದಲಿನಂತೆ ಜ್ಞಾನವಂತ ಗುರುಗಳ ಸಂಖ್ಯೆ ಕಡಿಮೆ. ಈ ವಿಚಾರದಲ್ಲಿ ಜ್ಞಾನ ಬೇಕು. ಆದರೂ ಭಗವಂತನ ಕೃಪೆಯಿಂದ ಮುಂದೆ ಅಂತಹ ವರು ತಯಾರಾಗಬಹುದು ಎನ್ನುವುದು ನಿರೀಕ್ಷೆ. ಯಾಕೆಂದರೆ ಯಾವುದೂ ನಿಲ್ಲುವುದಿಲ್ಲ, ಸ್ವಲ್ಪಸಮಯ ಬೇಕಾಗಬಹುದು. ಸಂಗೀತಕ್ಕೆ ಪ್ರೋತ್ಸಾಹ, ಸಂಭಾವನೆ, ಗೌರವ ಎಲ್ಲವೂ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆ. ಹಿಂದೆ ಸಂಗೀತ ಕಲಿತರೆ ಆದಾಯಕ್ಕೇನು ಮಾಡುವುದು ಎನ್ನುವ ಚಿಂತೆ ಇತ್ತು. ಈಗ ಹಾಗಲ್ಲ, ಸಂಗೀತವನ್ನು ಕಲಿತು ಬೇರೆ ಉದ್ಯೋಗ ಮಾಡುತ್ತಾರೆ, ಆದರೆ ಅದು ವೃತ್ತಿ, ಆದರೆ ಪ್ರವೃತ್ತಿಯಾಗಿ ಸಂಗೀತವನ್ನು ನೆಚ್ಚಿಕೊಳ್ಳುತ್ತಾರೆ, ಇದು ಮುಖ್ಯ.

ಉಡುಪಿಯಲ್ಲಿ ಶಿಕ್ಷಕರಾಗಿದ್ದ ನೆನಪುಗಳ ಬಗ್ಗೆ ತಿಳಿಸಿ.
ಉಡುಪಿಯಲ್ಲಿ ಟಿಎಂಎ ಪೈಯವರ ಸಂಸ್ಥೆ ಮುಕುಂದ ಕೃಪಾದಲ್ಲಿ ಒಂದೂವರೆ ವರ್ಷ ಕಲಿಸಿದ್ದೇನೆ, ಮಾಧವ ಭಟ್‌ ಎನ್ನುವವರು ಪ್ರಾಂಶುಪಾಲರಾಗಿದ್ದರು, ಅಲ್ಲಿ ನಾನು ಕಲಿಸಿದ್ದೇನೆ ಎನ್ನುವುದಕ್ಕಿಂತಲೂ ನಾನು ಬಹಳ ಕಲಿತಿದ್ದೇನೆ. ಸಂಗೀತ ಕಲಿಸುವ ಬಗ್ಗೆ ಬಹಳಷ್ಟು ಸಲಹೆ ಅಲ್ಲಿನ ಶಿಕ್ಷಕರಿಂದ ಸಿಕ್ಕಿದ್ದು, ನನಗೆ ಮುಂದೆ ಬಹಳ ಸಹಕಾರಿಯಾಯಿತು.

ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.