ಸೊಲ್ಲಾಪುರ: ಆಷಾಢ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಸೇರಿ ದೇಶದ ವಿವಿಧೆಡೆಯಿಂದ ಬಂದಿರುವ ಸುಮಾರು 12 ಲಕ್ಷ ವಾರಕರಿಗಳು (ಭಕ್ತರು) ಸೋಮವಾರ ಪಂಢರಾಪುರ ವಿಠ್ಠಲನ ದರ್ಶನ ಪಡೆದರು.
ಸೋಮವಾರ ಬೆಳಗಿನ ಜಾವ 2:30ಕ್ಕೆ ಸರ್ಕಾದ ವತಿಯಿಂದ ಮಹಾಪೂಜೆಯನ್ನು ಹಿಂಗೋಲಿಯ ಅನಿಲ ಮತ್ತು ವರ್ಷಾ ಜಾಧವ
ವಾರಕರಿಗಳು ನೆರವೇರಿಸಿದರು. ನಂತರ ವಿಠ್ಠಲನ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇಲ್ಲಿನ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿದ ವಾರಕರಿಗಳು ಸರದಿಯಲ್ಲಿ ನಿಂತು ಜಪಿಸುತ್ತಿದ್ದ ವಿಠuಲನ ನಾಮಸ್ಮರಣೆ ಮುಗಿಲು ಮುಟ್ಟಿತ್ತು. ಲಕ್ಷಾಂತರ ವಾರಕರಿಗಳು ಪಾದಯಾತ್ರೆ ಮೂಲಕ ಆಗಮಿಸಿ ವಿಠ್ಠಲನ ದರ್ಶನ ಪಡೆದರು. ಸುಮಾರು ಎಂಟು ಕಿ.ಮೀ.ವರೆಗೆ ಭಕ್ತರ ಸಾಲು ಹರಡಿತ್ತು. ಪಂಢರಾಪುರ ಜಾತ್ರಾ ಮಹೋತ್ಸವಕ್ಕೆ 15 ದಿನಗಳಿಂದ ಆಳಂದಿಯಿಂದ ಹೊರಟಿದ್ದ ಸಂತ ಜ್ಞಾನೇಶ್ವರ ಮಹಾರಾಜ, ಶೇಗಾಂವ ಸಂತ ಗಜಾನನ ಮಹಾರಾಜ ಹಾಗೂ ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ಪಂಢರಾಪುರಕ್ಕೆ ಆಗಮಿಸಿತ್ತು. ಪಲ್ಲಕ್ಕಿಯೊಂದಿಗೆ ಲಕ್ಷಾಂತರ ವಾರಕರಿಗಳು ಆಗಮಿಸಿದ್ದರು.
ಆಷಾಢ ಏಕಾದಶಿ ನಿಮಿತ್ತ ಪರರಾಜ್ಯಗಳಿಂದ ಬರುವ ಭಕ್ತರಿಗಾಗಿ ವಸತಿಗೃಹ, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಹೀಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್‌ಗಳನ್ನು ಒದಗಿಸಿತ್ತು. ವಾರಕರಿಗಳ ಆರೋಗ್ಯ ಸೇವೆಗೆ ಸುಮಾರು 60 ವೈದ್ಯರು, 20 ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಪರಿಸರದಲ್ಲಿ ಸುಮಾರು ಆರು ಸಾವಿರ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಸಿಎಂ ಬಾರದ್ದಕ್ಕೆ ಪೂಜೆ ಸಲ್ಲಿಸಿದ ದಂಪತಿ
ಸೊಲ್ಲಾಪುರ: ಆಷಾಢ ಏಕಾದಶಿ ಅಂಗವಾಗಿ ಪಂಢರಾಪುರ ವಿಠ್ಠಲ-ರುಕ್ಮಿಣಿ ಸರ್ಕಾರಿ ಮಹಾಪೂಜೆಗೆ ಮುಖ್ಯಮಂತ್ರಿ ದೇವೇಂದ್ರ ಫಢ°ವಿಸ್ ಬಾರದಿರುವುದರಿಂದ ಹಿಂಗೋಲಿಯ ಅನಿಲ ಮತ್ತು ವರ್ಷಾ ಜಾಧವ ದಂಪತಿಗೆ ಸರ್ಕಾರಿ ಪೂಜೆ ಸಲ್ಲಿಸುವ ಅವಕಾಶ ದೊರೆಯಿತು.
ಮಹಾಪೂಜೆ ನೆರವೇರಿಸಿದ ನಂತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಮಳೆಯಾಗಲಿ, ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಲಿ ಹಾಗೂ ಮಹಾರಾಷ್ಟ್ರ ಸುಜಲಾಂ, ಸುಫಲಾಂ ಆಗಲಿ ಎಂದು ವಿಠ್ಠಲನಲ್ಲಿ ಪಾರ್ಥಿಸಿದರು. ಸರ್ಕಾರಿ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿನ ಭಾಗ್ಯದ ದಿನವಾಗಿದೆ ಎಂದರು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮರಾಠಾ ಸಮಾಜ ಕೈಗೊಂಡ ಆಂದೋಲನದಿಂದ ಸಿಎಂ ದೇವೇಂದ್ರ ಫಡ್ನವಿಸ್ ಪಂಢರಾಪುರಕ್ಕೆ ಬರಲು ಹಿಂದೇಟು ಹಾಕಿದರು. ಸರ್ಕಾರಿ ಪೂಜೆಗೆ ಆಗಮಿಸದೇ ಮುಂಬೈನ ಮುಖ್ಯಮಂತ್ರಿಗಳ ನಿವಾಸ ವರ್ಷಾಬಂಗಲೆಯಲ್ಲಿ ಪತ್ನಿಯೊಂದಿಗೆ ಪೂಜೆ ಸಲ್ಲಿಸಿದರು.