ಪಾಂಡವಪುರ: ಕಾನೂನು ಪಾಲನೆ ಮಾಡಬೇಕಾದ ಅಧಿಕಾರಿಗಳೇ ಕಾನೂನು ನಿಯಮ ಉಲ್ಲಂಘನೆ ಮಾಡಿ ವರ್ಗಾವಣೆಗೊಂಡ ತಹಶೀಲ್ದಾರ್ ಅವರಿಗೆ ಮದುವೆ ಸಮಾರಂಭದಂತೆ ಕಾರ್ಯಕ್ರಮ ಆಯೋಜಿಸಿ, ಅದ್ಧೂರಿ ಅದ್ಧೂರಿ ಮೆರವಣಿಗೆ, ಪಟಾಕಿ ಸಿಡಿಸಿ, ನೃತ್ಯ ಮಾಡುವ ಮೂಲಕ ತಾಲೂಕು ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಬೀಳ್ಕೋಡುಗೆ ನೀಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪಾಂಡವಪುರದಲ್ಲಿ ಎರಡು ವರ್ಷಗಳ ಕಾಲ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಪ್ರಮೋದ್ ಎಲ್.ಪಾಟೀಲ್ ಅವರಿಗೆ ಬೀಳ್ಕೊಡುಗೆ ನೀಡಲು ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಶುಕ್ರವಾರ ರಾತ್ರಿ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಅದ್ದೂರಿ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿದೆ.
ಸರ್ಕಾರಿ ಕಚೇರಿಯಾದ ತಾಲೂಕು ಆಡಳಿತ ಸೌಧದ ಆವರಣದೊಳಗೆ ಮದುವೆ ಸಂಭ್ರಮದ ಮಾದರಿಯಲ್ಲಿ ಆಚರಣೆ ಮಾಡಿದ್ದು, ಅಲ್ಲದೆ ಕಚೇರಿಯ ಒಳಗಡೆಯೇ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಡ್ರೋಣ್ ಕ್ಯಾಮರಾ ಬಳಕೆ ಮಾಡಿ ವಿಡಿಯೋ ಚಿತ್ರೀಕರಣ ಮಾಡುವ ಜತೆಗೆ ವರ್ಗಾವಣೆಗೊಂಡ ಅಧಿಕಾರಿಗೆ ಪುಷ್ಪಾರ್ಚನೆ ಮಾಡಿದ ಘಟನೆ ಇದೀಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ರಾತ್ರಿ ನಡೆದ ಬೀಳ್ಕೋಡುಗೆ ಸಂಭ್ರಮದ ಕಾರ್ಯಕ್ರಮದಲ್ಲಿ ಬೀಳ್ಕೋಡುಗೆ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಸ್.ಎಲ್.ನಯನ, ಸರ್ಕಲ್ ಇನ್ ಸ್ಪೆಕ್ಟರ್ಗಳಾದ ಕೆ.ಪ್ರಭಾಕರ್, ಸುಮಾರಾಣಿ, ಶಿರಸ್ತೇದಾರ್ ವರುಣ್ ಸೇರಿದಂತೆ ವಿಎಗಳು ಸೇರಿದಂತೆ ತಾಲೂಕು ಕಚೇರಿಯ ಬಹುತೇಕ ಅಧಿಕಾರಿಗಳು ಭಾಗವಹಿಸಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಮದುವೆ ಸಮಾರಂಭದಂತೆ ರೀತಿಯಲ್ಲಿ ಕಾರ್ಯಕ್ರಮ ಆಚರಿಸಿ ವರ್ಗಾವಣೆಗೊಂಡ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ದಂಪತಿಯನ್ನು ಹೂ ಹಾಸಿನ ಮೇಲೆ ಕರೆದುಕೊಂಡು ಬರುವಾಗ ಸುತ್ತಲು ಹೂಕುಂದಗಳ ಪಟಾಕಿ ಹಚ್ಚಿ, ಆಕಾಶದೆತ್ತರದಲ್ಲೂ ಸಿಡಿಯುವ ಪಟಾಕಿ ಸಿಡಿದ್ದಾರೆ. ಅಲ್ಲದೆ ಕಾರ್ಯಕ್ರಮದ ಸಂಪೂರ್ಣ ಚಿತ್ರೀಕರಣವನ್ನು ಡ್ರೋನ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಹೀಗೆಲ್ಲಾ ಸರ್ಕಾರಿ ಕಚೇರಿಯಲ್ಲಿ ದರ್ಬಾರ್ ಮಾಡುವ ಮೂಲಕ ಬೀಳ್ಕೋಡುಗೆ ಸಮಾರಂಭ ಆಚರಣೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕು ಕಚೇರಿಯಲ್ಲಿ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ. ರೈತರು ಹಾಗೂ ಬಡವರ ಕೆಲಸಗಳು ವಿಳಂಬವಾಗುತ್ತಿವೆ. ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ. ಅಲ್ಲದೆ, ಲಂಚವಿಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ ಶುಕ್ರವಾರ ರಾತ್ರಿ ಅದ್ಧೂರಿ ಬಿಳ್ಕೋಡುಗೆ ಸಮಾರಂಭದ ಖರ್ಚು-ವೆಚ್ಚಗಳು ಯಾರು ಭರಿಸಿದ್ದಾರೆ. ಕಾರ್ಯಕ್ರಮ ಆಯೋಜನೆ ಯಾರದ್ದು. ಇಷ್ಟೊಂದು ಆಡಂಬರದ ಬೀಳ್ಕೋಡುಗೆ ಸಮಾರಂಭ ಅಗತ್ಯವಿತ್ತೇ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಅಲ್ಲದೆ, ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿ ಇದಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.