Advertisement

ಪಾಂಡವಪುರ: ಅಭಿವೃದ್ಧಿಗೆ ಕ್ರಮ

11:35 AM Jan 03, 2019 | Team Udayavani |

ಪಾಂಡವಪುರ: ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಬಂಧ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರ ಜತೆ ಸಭೆ ನಡೆಸಿದರು. ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಪಟ್ಟಣದ ಅಭಿವೃದ್ಧಿಗೆ ತುರ್ತಾಗಿ ಆಗಬೇಕಿರುವ ಕೆಲಸಗಳಿಗೆ ಮೊದಲು ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿದರು.

Advertisement

ಪಟ್ಟಣದಲ್ಲಿ ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯಿಂದ ಸಮಸ್ಯೆ ದ್ವಿಗುಣಗೊಂಡಿದ್ದು, ಸಮಸ್ಯೆ ಬಗೆಹರಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಪಟ್ಟಣದ ರಸ್ತೆಗಳ ಅಭಿವೃದ್ಧಿಗಾಗಿ 25 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಈಗಾಗಲೇ 14 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.

ಪುರಸಭೆ ಮುಂಭಾಗದ ಅಂಗಡಿ ಮಳಿಗೆ ತೆರವುಗೊಳಿಸಿ, ಕಟ್ಟಡವನ್ನು ಮೂರು ಹಂತಸ್ತಿಗೆ ಏರಿಸ ಬೇಕು. ಇದಕ್ಕಾಗಿ ಅಧಿಕಾರಿಗಳು ಸದ್ಯ ಕಟ್ಟಡದಲ್ಲಿರುವ ಅಂಗಡಿಗಳನ್ನು ತೆರವು ಮಾಡಿ, ಕಟ್ಟಡ ನಿರ್ಮಾಣದ ಬಳಿಕ ಮಳಿಗೆಗಳನ್ನು ಅವರಿಗೇ ನೀಡಿ ಎಂದು ಸೂಚಿಸಿದರು.

ಪೌರಕಾರ್ಮಿಕರ ದೂರು: ಕಳೆದ 7 ತಿಂಗಳಿಂದ ಪೌರ ಕಾರ್ಮಿಕರು, ನೀರುಗಂಟಿಗಳಿಗೆ ಸಂಬಳವನ್ನೇ ಕೊಟ್ಟಿಲ್ಲ. ಜತೆಗೆ ಪೌರಕಾರ್ಮಿಕರಿಗೆ ಪುರಸಭೆಯಿಂದ ಬೆಳಗ್ಗಿನ ತಿಂಡಿಕೊಡಬೇಕು ಎಂದು ನಿಯಮವಿದೆ. ಆದರೂ ಇದುವರೆಗೂ ತಮಗೆ ತಿಂಡಿ ಕೊಟ್ಟಿಲ್ಲ. ಕೆಲವು ಸದಸ್ಯರ ರಾಜಕೀಯ ಒತ್ತಡದಿಂದ ಪೌರಕಾರ್ಮಿಕ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಕಚೇರಿ ಕೆಲಸಕ್ಕೆ ಬಳಕೆ ಮಾಡಿಕೊಂಡು ಇದೀಗ ಕಾಯಂ ನೇಮಕಾತಿ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಕೆಲ ಪೌರಕಾರ್ಮಿಕರು ಸಚಿವರಿಗೆ ದೂರು ನೀಡಿದರು.

ಸಮಸ್ಯೆ ಬಗೆಹರಿಸಿ: ಈ ಇಬ್ಬರು ಮಹಿಳೆಯರು ಒಂದೇ ಒಂದು ದಿನ ಪೌರಕಾರ್ಮಿಕರ ಕೆಲಸ ಮಾಡಿಲ್ಲ. ಅಂತವರನ್ನು ಅಧಿಕಾರಿಗಳು ಕಾಯಂ ಮಾಡಿ ಕೊಳ್ಳಲು ಹೊರಟಿದ್ದಾರೆ ಎಂದು ಅಳಲು ತೊಡಗಿಸಿ ಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತ್ವರಿತವಾಗಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. 

Advertisement

ಸಭೆಯಲ್ಲಿ ನಗರಾಭಿವೃದ್ಧಿ ಯೋಜನಾಧಿಕಾರಿ ನರಸಿಂಹಮೂರ್ತಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಾಹಕ ಎಂಜಿನಿಯರ್‌ ಚಾಮರಾಜೇಗೌಡ, ಉಪವಿಭಾಗಾಧಿಕಾರಿ ವಿ.ಆರ್‌.ಶೈಲಜಾ, ತಹಶೀಲ್ದಾರ್‌ ಎಂ.ವಿ.ರೂಪಾ, ಸೆಸ್ಕ್ ನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ: ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಪರಿಶೀಲನೆ ನಡೆಸಿದರು. ಆಸ್ಪತ್ರೆ ಆವರಣದಲ್ಲಿಯೇ ಹೆರಿಗೆ ಮತ್ತು ಮಕ್ಕಳ (ಎಂಸಿಎಚ್‌) ಆಸ್ಪತ್ರೆ ನಿರ್ಮಾಣ, ವೈದ್ಯರು ಹಾಗೂ ಗ್ರೂಪ್‌ ಡಿ ನೌಕರರ ವಸತಿ ಗೃಹಗಳು ಶಿಥಿಲಗೊಂಡಿದ್ದು, ಪ್ಲಾಟ್‌ ಮಾದರಿಯಲ್ಲಿ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಲಾಗುವುದು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹ ಹೊಸದಾಗಿ ನಿರ್ಮಿಸಿಕೊಡಲಾಗುವುದು.

ಜತೆಗೆ ಆಸ್ಪತ್ರೆಯಲ್ಲಿ ಕೊರತೆ ಇರುವ ಸ್ಟಾಪ್‌ ನರ್ಸ್‌ ಗಳ ಭರ್ತಿಗೆ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಪ್ರಸ್ತಾವನೆ ಸಿದ್ಧಮಾಡಿ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next