ಮಂಗಳೂರು: ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಶನಿವಾರ 30ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ “ರಾಜ್‌ಕುಮಾರ್’ ಹೆಸರಿನ ನತದೃಷ್ಟ ಖಾಸಗಿ ಬಸ್ ಮಂಗಳೂರು ಮೂಲದ್ದಾಗಿದ್ದು, ಬರೋಬ್ಬರಿ 18 ವರ್ಷಗಳಷ್ಟು ಹಳೆಯದು!
ಈ ಬಸ್ಸಿನ ಮೊದಲ ರಿಜಿಸ್ಟ್ರೇಶನ್ 2001ರಲ್ಲಿ ಶಂಕರ ವಿಠಲ ಕಂಪೆನಿಯ ಹೆಸರಿನಲ್ಲಿ ಆಗಿದ್ದು, ಆ ಬಳಿಕ ಮಂಗಳೂರಿನಲ್ಲಿ ಈ ಬಸ್ 8 ಮಂದಿ ಮಾಲಕರನ್ನು ಕಂಡಿತ್ತು. ಹದಿಮೂರು ವರ್ಷಗಳ ಹಿಂದೆ ಈ ಬಸ್ ಆರ್.ಕೆ. (ರಾಜ್‌ಕುಮಾರ್) ಟ್ರಾವೆಲ್ಸ್ ಮಾಲಕತ್ವದಲ್ಲಿ ಮಂಗಳೂರು- ಬಳ್ಕುಂಜೆ- ಕಟೀಲು ಮಾರ್ಗವಾಗಿ ಕಾರ್ಯಾಚರಿಸುತ್ತಿತ್ತು.
ಆರ್.ಕೆ. ಟ್ರಾವೆಲ್ಸ್ ಸಂಸ್ಥೆಯವರು 13 ವರ್ಷಗಳ ಹಿಂದೆ ಈ ಬಸ್‌ನ್ನು ಮಾರಾಟ ಮಾಡಿದ್ದರು. ಆ ಬಳಿಕ ಹಲವು ಮಂದಿ ಮಾಲಕರ ಕೈ ಬದಲಾವಣೆಗೊಂಡು 2015ರಲ್ಲಿ ಮಂಡ್ಯದ ಶ್ರೀನಿವಾಸ್ (ಅವರು ಈ ಬಸ್‌ನ 9ನೇ ಮಾಲಕರು) ಅವರಿಗೆ ಮಾರಾಟವಾಗಿತ್ತು.
ಕೊನೆಯದಾಗಿ ಈ ಬಸ್ ಮಂಗಳೂರು ನಗರದಲ್ಲಿ ರೂಟ್ ನಂಬರ್ 16 (ಸ್ಟೇಟ್ ಬ್ಯಾಂಕ್- ಸುಲ್ತಾನ್ ಬತ್ತೇರಿ) ಮಾರ್ಗದಲ್ಲಿ ಓಡಾಡುತ್ತಿತ್ತು. ಬಸ್‌ಗೆ 15 ವರ್ಷ ಮೇಲ್ಪಟ್ಟ ಕಾರಣ ಹಾಗೂ ಜಿಲ್ಲೆಯಲ್ಲಿ ಸಂಚರಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರವಾನಿಗೆ ನೀಡದ ಕಾರಣ ಅದನ್ನು ಮಾರಾಟ ಮಾಡಲಾಗಿತ್ತು ಎಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಮಿಸ್ಕಿತ್ ಮಾಹಿತಿ ನೀಡಿದ್ದಾರೆ.
“ರಾಜ್‌ಕುಮಾರ್’ ಎಂಬ ಹೆಸರು ಚೆನ್ನಾಗಿದೆ ಅಂದುಕೊಂಡ ಕಾರಣ ಈ ಬಸ್‌ನ ಹೆಸರನ್ನು ಬದಲಾಯಿಸದೆ ಇರಲು ಅದರ ಹಾಲಿ ಮಾಲಕರು ನಿರ್ಧರಿಸಿರಬಹುದು. ಹಾಗಾಗಿ ಇವತ್ತಿಗೂ ಅದು ಹಿಂದಿನ ಹೆಸರಿನಲ್ಲಿಯೇ ಓಡಾಡುತ್ತಿತ್ತು ಎಂದು 13 ವರ್ಷಗಳ ಹಿಂದೆ ಇದನ್ನು ಮಾರಾಟ ಮಾಡಿದ್ದ ಆರ್.ಕೆ. ಟ್ರಾವೆಲ್ಸ್‌ನ ಮಾಲಕರಾದ ಶಿವರಾಜ್ ಶೆಟ್ಟಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.