Advertisement

ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲು ಪಂಚಾಯಿತಿಗಳಿಗೆ ತಾಕೀತು

09:09 PM Mar 22, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಸೋಂಕು ತಡೆಗಟ್ಟಲು ಕಟ್ಟೆಚ್ಚರ ವಹಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದ್ದು, ಮುಂಜಾಗ್ರತೆ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಮಾರ್ಗಸೂಚಿಗಳಿಗೆ ಪ್ರಥಮ ಆದ್ಯತೆ ನೀಡುವಂತೆ ತಾಕೀತು ಮಾಡಲಾಗಿದೆ.

Advertisement

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಗ್ರಾಪಂಗಳಿಗೆ ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ದಿಷ್ಟ ಪಡಿಸಲಾಗಿದೆ, ಅದರಂತೆ, ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಆರೋಗ್ಯ ರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಚರಂಡಿಗಳನ್ನು ಸ್ವತ್ಛಗೊಳಿಸಿಸುವುದು, ಕೋಳಿ ಮತ್ತು ಇತರೆ ಜಾನುವಾರುಗಳ ತ್ಯಾಜ್ಯವನ್ನು ಗ್ರಾಮದ ಹೊರಗಡೆ ಸಾಗಿಸುವ ಬಗ್ಗೆ ಪಂಚಾಯಿತಿಗಳು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ.

ಎಲ್ಲಾ ಗ್ರಾಪಂಗಳಿಗೆ ಸೂಚನೆಗಳನ್ನು ನೀಡಿ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಜೊತೆಗೆ ಕೊರೊನಾ ವೈರಸ್‌ ಬಗ್ಗೆ ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾಗಿದೆ.

ಪಂಚಾಯಿತಿ ಜವಾಬ್ದಾರಿಗಳು
– ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳಿಗೆ ವೈರಸ್‌ ಲಕ್ಷಣಗಳ ಬಗ್ಗೆ ತಿಳಿಸುವುದರ ಜತೆಗೆ, ದೈನಂದಿನ ಚಟುವಟಿಕೆಗಳಲ್ಲಿ ಸ್ವತ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಬೇಕು.

– ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಂಥಾಲಯಗಳನ್ನು ವಾರದ ಮಟ್ಟಿಗೆ ಸಾರ್ವಜನಿಕರಿಗೆ ತೆರೆದಿರುವುದನ್ನು ನಿರ್ಬಂಧಿಸಬೇಕು.

Advertisement

– ಜಿಲ್ಲಾ, ತಾಲೂಕು ಮತ್ತು ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರಿಗೆ ಬಯೋಮೆಟ್ರಿಕ್‌ ಹಾಜರಾತಿ ನಿಷೇಧಿಸಿ ಹಾಜರಾತಿ ಪುಸ್ತಕ ಬಳಸಬೇಕು.

– ಪಂಚಾಯಿತಿ ಕಚೇರಿಗಳನ್ನು ಪ್ರತಿನಿತ್ಯ ಸ್ವತ್ಛಗೊಳಿಸಬೇಕು. ನೈರ್ಮಲ್ಯತೆ ಕಾಪಾಡಬೇಕು. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಕೈಗಳನ್ನು ಶುದ್ಧೀಕರಿಸುವ ದ್ರಾವಣ ಬಳಸಲು ಸೂಚಿಸಬೇಕು.

– ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next