Advertisement

ಪಂಚಾಯತ್‌ ಗೆಲುವು ಕಸಿಯುವ ಗೊಂದಲಕ್ಕೆ ಇತಿಶ್ರೀ?

09:38 AM Mar 19, 2020 | sudhir |

ಬೆಂಗಳೂರು: ರಾಜ್ಯ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ಮೀಸಲಾತಿ ಕಾರಣದಿಂದ ಸೋತ ಅಭ್ಯರ್ಥಿ ಗೆಲ್ಲುವ ನಿಯಮವನ್ನು ಬದಲಾಯಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

Advertisement

ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಮೀಸಲಾತಿ ಲೆಕ್ಕಾಚಾರದಲ್ಲಿ ಹೆಚ್ಚು ಮತ ಪಡೆದಿದ್ದಾನೆ ಎನ್ನುವ ಕಾರಣಕ್ಕೆ ಗೆಲುವು ಪಡೆದಿದ್ದಾನೆ ಎಂದು ಘೋಷಿಸುವ ಪದ್ಧತಿ ರಾಜ್ಯದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿದೆ. ಇದನ್ನು ಬದಲಾಯಿಸಲು ಸರಕಾರ ಮುಂದಾಗಿದೆ.

ಏನಿದು ನಿಯಮ?
ಗ್ರಾಮ ಪಂಚಾಯತ್‌ಗಳಲ್ಲಿ “ಗುಂಪು ವಾರ್ಡ್‌’ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಒಂದು ಊರಿನಲ್ಲಿ ಮೂರು-ನಾಲ್ಕು ವಾರ್ಡ್‌ಗಳಿದ್ದರೆ; ಅಲ್ಲಿ ಬೇರೆ ಬೇರೆ ವರ್ಗದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿರುತ್ತದೆ. ಇಲ್ಲಿ ಸಾಮಾನ್ಯ, ಎಸ್‌ಸಿ-ಎಸ್ಟಿ ಮತ್ತು ಒಬಿಸಿ ವರ್ಗದವರಿಗೆ ಮೀಸಲಾತಿ ಕಲ್ಪಿಸಲಾಗಿರುತ್ತದೆ. ಮತದಾನ ನಡೆದ ತರುವಾಯ ಸಾಮಾನ್ಯ ವರ್ಗದ ಗೆದ್ದ ಅಭ್ಯರ್ಥಿಗಿಂತ ಮೀಸಲಾತಿ ಅನ್ವಯ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿ ಹೆಚ್ಚು ಮತ ಪಡೆದರೆ, ಈತನನ್ನೇ ಸಾಮಾನ್ಯ ವರ್ಗದಲ್ಲಿ ಗೆದ್ದ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.

1993ರ ಪಂಚಾಯತ್‌ ರಾಜ್‌ ಕಾಯ್ದೆಯ ನಿಯಮ 74ರ ಉಪ ನಿಯಮ 2 (ಎ)ರಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಯ ಫಲಿತಾಂಶ ಘೋಷಿಸಲು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ಇದೆ. 74ರ ಉಪ ನಿಯಮ 2 (ಬಿ) ಪ್ರಕಾರ ಭರ್ತಿ ಮಾಡಬೇಕಿರುವ ಸ್ಥಾನಗಳು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಿಟ್ಟ ಒಂದು ಅಥವಾ ಹೆಚ್ಚಿನ ಸ್ಥಾನಗಳನ್ನು ಒಳಗೊಂಡಿದ್ದರೆ ಅತ್ಯಂತ ಹೆಚ್ಚು ಮತ ಪಡೆದ ಅಭ್ಯರ್ಥಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಉಳಿದ ಸ್ಥಾನಗಳಲ್ಲಿ ಅಂದರೆ, ಮೀಸಲು ಸ್ಥಾನದಲ್ಲಿ ಸೋತವರು ಸಾಮಾನ್ಯ ಸ್ಥಾನದ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದರೆ ಅವರನ್ನೇ ಸಾಮಾನ್ಯ ವರ್ಗದ ಅಭ್ಯರ್ಥಿ ಸ್ಥಾನದಲ್ಲಿ ಆಯ್ಕೆ ಮಾಡಲು ಅವಕಾಶ ಇದೆ.

ನಿಯಮ ಬದಲಾವಣೆಗೆ ಶಿಫಾರಸು
ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಕೆ.ಆರ್‌. ರಮೇಶ್‌ ಕುಮಾರ್‌ ನೇತೃತ್ವದ ಸಮಿತಿಯು ಈ ವ್ಯವಸ್ಥೆಯನ್ನು ಬದಲಾಯಿಸಲು ಶಿಫಾರಸು ಮಾಡಿತ್ತು. ಅಲ್ಲದೆ ನಗರಸಭೆಗಳಲ್ಲಿ ಇರುವಂತೆ ಪ್ರತಿ ವಾರ್ಡ್‌ಗೂ ಪ್ರತ್ಯೇಕ ಅಭ್ಯರ್ಥಿ ಆಯ್ಕೆಯಾಗುವಂತೆ ನಿಯಮ ಬದಲಾಯಿಸಲು ಶಿಫಾರಸು ಮಾಡಿತ್ತು.

Advertisement

ಆದರೆ ಅಂದಿನ ಕಾಂಗ್ರೆಸ್‌ ಸರಕಾರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದಲ್ಲಿ ಮೀಸಲಾತಿ ದೊರೆಯುವಂತೆ ನಿಯಮ ರೂಪಿಸಿತ್ತು. ಇದರಿಂದ ಎಸ್ಸಿ, ಎಸ್ಟಿ ಮತ್ತು ಇತರ ಹಿಂದುಳಿದ ವರ್ಗದ ಕೋಟಾದಡಿ ಸ್ಪರ್ಧಿಸಿ ಸೋತವರು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದರೆ ಜಯ ಗಳಿಸಿದಂತೆ ಎಂದು ಘೋಷಿಸಲಾಗುತ್ತಿತ್ತು. ಸರಕಾರದ ಈ ನಿಯಮದಿಂದ ಕಳೆದ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು ಸೋಲುವಂತಾಗಿತ್ತು!

ನಿಯಮ ಬದಲಾವಣೆಗೆ ಚಿಂತನೆ
ಹಿಂದಿನ ಸರಕಾರದ ನಿಯಮ ಸಾಮಾಜಿಕ ನ್ಯಾಯದ ತತ್ವವನ್ನು ದುರುಪಯೋಗ ಪಡಿಸಿಕೊಂಡಂತಾಗುತ್ತದೆ ಎಂದು ಚಿಂತಿಸಿರುವ ಬಿಜೆಪಿ ಸರಕಾರ ಈ ನಿಯಮ ಕೈಬಿಡಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯ ವಾಗಿದೆ. ಕರ್ನಾಟಕ ಪಂ. ರಾಜ್‌ ಪರಿಷತ್‌ ಕೂಡ ಈ ಅವೈಜ್ಞಾನಿಕ ನಿಯಮ ಬದಲಾಯಿಸುವಂತೆ ಶಿಫಾರಸು ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಗ್ರಾ.ಪಂ. ಚುನಾವಣೆಗೂ ಮೊದಲೇ ಈ ನಿಯಮ ಬದಲಾಯಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳು ಹಿಸಿ ಕೊಡಲು ಸರಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

ಗುಂಪು ವಾರ್ಡ್‌ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತದೆ. ಹೀಗಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತೆ ಸಿಂಗಲ್‌ ವಾರ್ಡ್‌ ವ್ಯವಸ್ಥೆ ಜಾರಿಗೊಳಿಸಲು ಸರಕಾರಕ್ಕೆ ಶಿಫಾರಸು ಮಾಡುತ್ತೇವೆ.
– ಸಿ. ನಾರಾಯಣಸ್ವಾಮಿ, ಕರ್ನಾಟಕ ಪಂ. ರಾಜ್‌ ಪರಿಷತ್‌ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next