ಪಡುಬಿದ್ರಿ: ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಆಗಿರುವ ಪಡುಬಿದ್ರಿ ಗ್ರಾ. ಪಂ. ನೂತನ ಕಟ್ಟಡದ ಮುಂದಿನ ಭೂಭಾಗವೇ ಪೂರ್ಣ ಬಂಜರಾಗುವ ಲಕ್ಷಣಗಳು ಕಾಣಿಸಿವೆ. ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಲ್ಲೇ ಗುಂಡಿ ತೆಗೆದು ಹೂಳಲಾಗುತ್ತಿದೆ.
ಜತೆಗೆ ಬೇಸಗೆಯಲ್ಲಿ ಘಟಕಕ್ಕೆ ಬಂದಿದ್ದ ಸೀಯಾಳದ ತ್ಯಾಜ್ಯಗಳನ್ನೂ ಮತ್ತೂಂದು ಹೊಂಡ ತೆಗೆದು ಹೂಳಲಾಗಿದೆ. ಇದೇ ವೇಳೆ ಸ್ಥಳೀಯ ಜನತೆ ತ್ಯಾಜ್ಯದ ಕಮಟು ವಾಸನೆ ಬರುತ್ತಿರುವ ಬಗ್ಗೆ ದೂರನ್ನು ಪಂಚಾಯತ್‌ಗೆ ನೀಡುತ್ತಲೇ ಬಂದಿದ್ದಾರೆ.
ಜಾಗದ ಸಮಸ್ಯೆ ಇನ್ನೂ ಜೀವಂತ
ತ್ಯಾಜ್ಯ ನಿರ್ವಹಣೆಗೆ ಪಡುಬಿದ್ರಿ ಪಂಚಾಯತ್‌ಗೆ ದೊಡ್ಡ ಜಾಗದ ಆವಶ್ಯಕತೆ ಇದ್ದು ಇದನ್ನು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ಅವರಿಗೆ ತಿಳಿಸಬೇಕಿದೆ. ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಜಾಗ ನೀಡುವುದಕ್ಕೂ ಅವರಲ್ಲಿ ಮನವಿ ಮಾಡಿಕೊಳ್ಳಬೇಕಿದೆ ಎಂದು ಪಡುಬಿದ್ರಿ ಗ್ರಾ., ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಹೇಳಿದ್ದಾರೆ.
ಇದರೊಂದಿಗೆ ಸಂತೆ ಮಾರುಕಟ್ಟೆ ಪ್ರದೇಶದಲ್ಲಿರುವ ತ್ಯಾಜ್ಯ ನಿರ್ವಹಣೆ ಭೂಮಿ ಮತ್ತು ಎಸ್‌ಎಲ್ ಆರ್‌ಎಂ ಘಟಕಕ್ಕೆ ಬೀಗ ಹಾಕಲು ಮಂದಾಗಿರುವುದಾಗಿ ಹೇಳಿದ್ದಾರೆ. ತಾಜ್ಯ ನಿರ್ವಹಣೆ, ಸಂಗ್ರಹ ಎಲ್ಲದಕ್ಕೂ ಇಲ್ಲಿ ಜಾಗದ ಕೊರತೆ ಇರುವುದರಿಂದ ಈಗಿರುವ ಎಸ್‌ಎಲ್ಆರ್‌ಎಂ ಘಟಕ ಪ್ರಯೋಜನವಿಲ್ಲದಂತಾಗಿದೆ. ತ್ಯಾಜ್ಯ-ಕಸ ಸಮಸ್ಯೆ ಪಡುಬಿದ್ರಿಯಲ್ಲಿ ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣವಿದೆ. ಹಾಗೆಯೇ ಪಂಚಾಯತ್ ಕಚೇರಿ ಎದುರಿನ ಭೂಮಿಯೇ ಬರಡಾಗುವ ಮೊದಲೇ ಜಿಲ್ಲಾಡಳಿತವು ಎಚ್ಚೆತ್ತುಕೊಳ್ಳಬೇಕಿದೆ.