Advertisement

ಗ್ರಾಮೀಣ ರೋಗಿಗಳ ಸೇವೆಗೆ ಪಂಚಾಯತ್‌ಗೊಂದು ವಾಹನ

01:23 AM May 22, 2021 | Team Udayavani |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಪೀಡಿತರನ್ನು ಕೋವಿಡ್‌ ಕೇರ್‌ ಸೆಂಟರ್‌ ಅಥವಾ ಆಸ್ಪತ್ರೆಗೆ ಕರೆದೊಯ್ಯಲು “ಪಂಚಾಯತ್‌ಗೊಂದು ವಾಹನ’ ವ್ಯವಸ್ಥೆಗೆ ಸರಕಾರ ಮುಂದಾಗಿದೆ.

Advertisement

ರಾಜ್ಯದ 6 ಸಾವಿರ ಪಂ.ಗಳಲ್ಲೂ ತಲಾ 1ರಂತೆ ತಾತ್ಕಾಲಿಕವಾಗಿ 1-2 ತಿಂಗಳ ಮಟ್ಟಿಗೆ ಬಾಡಿಗೆ ಆಧಾರದ ಮೇಲೆ ವಾಹನದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಸ್ವಯಂಸೇವಾ ಸಂಸ್ಥೆಗಳು ಅಥವಾ ದಾನಿಗಳು ವಾಹನ ಯಾ ಆ್ಯಂಬುಲೆನ್ಸ್‌ ಒದಗಿಸಲು ಮುಂದಾದರೆ ಅದಕ್ಕೂ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ.

ಇದರ ವೆಚ್ಚವನ್ನು ಸದ್ಯ ರಾಜ್ಯ ಸರಕಾರವು ಪ್ರತೀ ಪಂಚಾಯತ್‌ಗೆ ನೀಡುವ 50 ಸಾವಿರ ರೂ. ನಿರ್ವಹಣೆ ವೆಚ್ಚದಲ್ಲಿ ಭರಿಸಿ ಹೆಚ್ಚುವರಿ ಅಗತ್ಯವಾದರೆ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ನೂರು ಹಳ್ಳಿಗಳಿಗೆ ಐಸಿಯು ಬಸ್‌!
ಗ್ರಾಮೀಣ ಭಾಗಗಳಲ್ಲಿ ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜನರ ತುರ್ತು ಚಿಕಿತ್ಸೆಗೆ ಸಂಚಾರಿ ಐಸಿಯು ಬಸ್‌ ಸೇವೆ ಕಲ್ಪಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಇದಕ್ಕಾಗಿ ಡಾ| ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿ ಉಲ್ಲೇಖೀಸಿರುವ ಅತ್ಯಂತ ಹಿಂದುಳಿದ 39 ತಾಲೂಕುಗಳ ಆಯ್ದ ನೂರು ಹಳ್ಳಿಗಳನ್ನು ಆರಿಸಿಕೊಳ್ಳಲಾಗುತ್ತದೆ.

ಈ ನಿಟ್ಟಿನಲ್ಲಿ ನಿಗಮದೊಂದಿಗೆ ಕೈಜೋಡಿ ಸಲು ಕೆಲವು ಸ್ವಯಂ ಸೇವಾ ಸಂಸ್ಥೆಗಳೂ ಮುಂದೆ ಬಂದಿವೆ. ಬರುವ ಗಾಂಧಿ ಜಯಂತಿ ಯಂದು ಇದನ್ನು ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ ಎಂದು ನಿಗಮದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಗ್ರಾಮೀಣ ಭಾಗಗಳಲ್ಲಿ ಕೊರೊನಾ ವ್ಯಾಪಿಸುತ್ತಿದೆ. ಅಕ್ಟೋಬರ್‌- ನವೆಂಬರ್‌ ವೇಳೆಗೆ 3ನೇ ಅಲೆ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಿಂದುಳಿದ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಕಷ್ಟ. ತುರ್ತು ಚಿಕಿತ್ಸೆಗಾಗಿ ಅಲ್ಲಿನ ಜನರಿಗೆ ನಗರಕ್ಕೆ ಬರಲು ಕಷ್ಟವಾಗಬಹುದು. ನೂರಾರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣವೂ ಅಸಾಧ್ಯ. ಈ ಕೊರತೆಯನ್ನು ನಿಗಮಗಳ ಸಂಚಾರಿ ಐಸಿಯು ಬಸ್‌ಗಳು ನೀಗಿಸಲಿವೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

100 ಬಸ್‌ 500 ಹಳ್ಳಿ ವ್ಯಾಪ್ತಿ
ಬಸ್‌ಗಳು ನೂರಿದ್ದರೂ ಅವುಗಳು 500ಕ್ಕೂ ಹೆಚ್ಚು ಹಳ್ಳಿಗಳಿಗೆ ಸೇವೆ ನೀಡಲಿವೆ. ಇವುಗಳ ನಿರ್ವಹಣೆ ಮಾಡುವ ವೈದ್ಯಕೀಯ ಸಿಬಂದಿಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳೊಂದಿಗೆ ಲಿಂಕ್‌ ಮಾಡಲಾಗುವುದು. ಆಮ್ಲಜನಕ, ಆಮ್ಲಜನಕ ಕಾನ್ಸಂಟ್ರೇಟರ್‌ಗಳು, ಐಸಿಯು ಮತ್ತಿತರ ಸೌಲಭ್ಯ ಒದಗಿಸಲು ಮುಂಬಯಿಯ ಕ್ರೌಡ್‌ ಫ‌ಂಡಿಂಗ್‌, ರೋಟರಿ, ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಸಿಐಸಿ) ಸಹಿತ ಹಲವು ಸಂಘ-ಸಂಸ್ಥೆಗಳು ಈಗಾಗಲೇ ಸಂಪರ್ಕದಲ್ಲಿವೆ ಎಂದೂ ಶಿವಯೋಗಿ ಕಳಸದ ವಿವರಿಸಿದರು.

ಗ್ರಾಮೀಣ ಭಾಗದಲ್ಲಿ ಕೊರೊನಾ ಪೀಡಿತರನ್ನು ತತ್‌ಕ್ಷಣ ಆರೈಕೆ ಮತ್ತು ಚಿಕಿತ್ಸೆಗಾಗಿ ಕೋವಿಡ್‌ ಕೇರ್‌ ಸೆಂಟರ್‌ ಅಥವಾ ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಚಾಯತ್‌ಗೊಂದು ವಾಹನ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next