Advertisement

ಪಂಚಮಿಗೆ ಹುತ್ತದ ಮಣ್ಣಿನ ನಾಗರ

12:15 PM Aug 10, 2018 | |

ಬೆಂಗಳೂರು: ಆಷಾಢ ಮುಗಿದು ಶ್ರಾವಣ ಶುರುವಾದರೆ ಸಾಕು ಒಂದರ ಹಿಂದೊಂದು ಹಬ್ಬಗಳೂ ಎದುರಾಗುತ್ತವೆ. ಇಂಥ ಹಬ್ಬಗಳನ್ನು ಪರಿಸರ ಸ್ನೇಹಿ ಮಾರ್ಗದಲ್ಲಿ ಆಚರಿಸಬೇಕು ಎಂಬ ಕೂಗು ಈ ಬಾರಿ ಸ್ವಲ್ಪ ಜೋರಾಗೇ ಕೇಳುತ್ತಿದೆ.

Advertisement

ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ನಾಗರ ಪಂಚನಮಿ, ವರಮಹಾಲಕ್ಷ್ಮೀ, ಗೌರಿ ಗಣೇಶ ಚೌತಿ ಸೇರಿ ಹಲವು ಹಬ್ಬಗಳು ಬರಲಿವೆ. ನಾಗರ ಪಂಚಮಿ ಹಾಗೂ ಗೌರಿ-ಗಣೇಶ ಹಬ್ಬದ ವೇಳೆ ಪರಿಸರಕ್ಕೆ ಮಾರಕವಾಗುವ ಮೂರ್ತಿಗಳನ್ನು ಬಳಸುವ ಬಗ್ಗೆ ಪ್ರತಿ ವರ್ಷ ಆಕ್ಷೇಪ ಕೇಳಿಬರುತ್ತದೆ. ಈ ನಿಟ್ಟಿನಲ್ಲಿ ಪರಿಸರಸ್ನೇಹಿ ಹಬ್ಬ ಆಚರಿಸಲು ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಮನೆಯಲ್ಲಿ ಮಣ್ಣಿನಿಂದ ನಾಗರ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸಿ ನಂತರ ಎಕ್ಕದ ಗಿಡಗಳ ಬಳಿ ವಿರ್ಸಜಿಸಲಾಗುತ್ತದೆ. ಅದೇ ಪರಂಪರೆಯನ್ನು ಬೆಂಗಳೂರಿನಲ್ಲಿ ಮುಂದುವರಿಸಲು ಮುಂದಿನ ಬುಧವಾರ ಬರುವ ನಾಗರಪಂಚಮಿಗಾಗಿ ನಗರದ ಸಮರ್ಪಣ ಸಂಸ್ಥೆ ಮಣ್ಣಿನ ನಾಗರ ಹಾಗೂ ಗೌರಿ ಮತ್ತು ಗಣಪತಿ ಮೂರ್ತಿಗಳ ತಯಾರಿಸುತ್ತಿದೆ.

ಮಣ್ಣಿನ ನಾಗರ: ಯಲಹಂಕ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಬಳಿ ಇರುವ ಹುತ್ತಗಳಿಂದ ತಂದ ಮಣ್ಣು ಹಾಗೂ ಜೇಡಿ ಮಣ್ಣಿನಿಂದ ನಾಗರ ಮೂರ್ತಿಗಳನ್ನು ಮಾಡಲಾಗಿದೆ. ಕಲಾವಿದ ಕುಮಾರ ಅವರ ನೇತೃತ್ವದಲ್ಲಿ 5 ಕಲಾವಿದರು ನೇಮ, ನಿಷ್ಠೆಯಿಂದ 4 ಇಂಚಿನ ಅಳತೆಯ ನಾಗರ ಮೂರ್ತಿಗಳನ್ನು ತಯಾರಿಸಿದ್ದಾರೆ. ಈ ಮಣ್ಣಿನ ನಾಗರಮೂರ್ತಿಗಳನ್ನು ಪೂಜಿಸಿ ನಂತರ ಹೂವಿನ ಕುಂಡಗಳಲ್ಲಿ ಅಥವಾ ಎಕ್ಕದ ಗಿಡಗಳ ಬಳಿ ವಿಸರ್ಜನೆ ಮಾಡಬಹುದು. ಈ ಬಾರಿ 2 ಸಾವಿರ ಮಣ್ಣಿನ ನಾಗರಮೂರ್ತಿಗಳಿಗೆ ಬೇಡಿಕೆ ಇದ್ದು, ಸದ್ಯ 600 ರಿಂದ 700 ಮೂರ್ತಿಗಳನ್ನು ತಯಾರಿಸಲಾಗಿದೆ.

ಪರಿಸರದ ಗೌರಿ ಗಣೇಶಮೂರ್ತಿಗಳು: ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ಗೌರಿ ಗಣೇಶ ಹಬ್ಬಕ್ಕೂ ಸಂಸ್ಥೆ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದೆ. ಟಿ.ನಾರಾಯಣಪುರ, ನೆಲಮಂಗಲ, ಮಾಗಡಿ, ಟ್ಯಾನರಿ ರಸ್ತೆಯಲ್ಲಿರುವ 15 ಕುಂಬಾರ ಕಲಾವಿದರು ಗೌರಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಮಣ್ಣಿನ ಗೌರಿ ಗಣಪತಿ ಮೂರ್ತಿಗಳಷ್ಟೇ ಅಲ್ಲದೆ ಪರಿಸರಸ್ನೇಹಿ ಬಣ್ಣದ ಮೂರ್ತಿಗಳೂ ದೊರೆಯಲಿವೆ.

Advertisement

ಈ ಮಣ್ಣಿನ ಮೂರ್ತಿಗಳಿಗೆ ಬಣ್ಣಗಳನ್ನು ಹಚ್ಚುತ್ತಿರುವವರು ಕೂಡ ವಿಶೇಷ ಮಂದಿಯೇ. ಇಕೋ ಸಂಸ್ಥೆಯಲ್ಲಿರುವ 17 ಬಾಲಾಪರಾಧಿಗಳು ಮೂರ್ತಿಗಳ ಅಲಂಕಾರಕ್ಕಾಗಿ ಸಸ್ಯಜನ್ಯ ಬಣ್ಣಗಳನ್ನು ಹಚ್ಚುತ್ತಿದ್ದಾರೆ. ಮೂರ್ತಿಗಳಲ್ಲಿ ಹೂವು, ತರಕಾರಿ, ಹಣ್ಣಿನ ಬೀಜಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲದೆ ಆಯ್ದ ಕೆಲವು ಗಣಪತಿಮೂರ್ತಿಗಳಲ್ಲಿ ಒಂದೊಂದು ಬೆಳ್ಳಿ ನಾಣ್ಯಗಳನ್ನೂ ಹಾಕಲಾಗಿದೆ. ಗಣೇಶನ ಮೂರ್ತಿಗಳನ್ನು ಎಲ್ಲೆಂದರಲ್ಲಿ ವಿಸರ್ಜಿಸಿ ಪರಿಸರಕ್ಕೆ ಹಾನಿ ಮಾಡದೆ ಬಕೆಟ್‌ಗಳಲ್ಲಿ ವಿಸರ್ಜಿಸಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ.

ರಾಜಾಜಿನಗರ, ಜಯನಗರ, ವಿಜಯನಗರ, ಬಸವನಗುಡಿ ಗ್ರಾಮೀಣ ಅಂಗಡಿಗಳಲ್ಲಿ, 30 ನಂದಿನಿ ಬೂತ್‌ಗಳಲ್ಲಿ, 40 ಹಾಪ್‌ಕಾಮ್ಸ್‌ಗಳಲ್ಲಿ ಹಾಗೂ ಮಾಲ್‌ಗ‌ಳಲ್ಲಿ ಮಣ್ಣಿನ ಗಣಪತಿ ಮೂರ್ತಿಗಳು ದೊರೆಯಲಿದೆ. 3.5 ಇಂಚಿನಿಂದ 12 ಇಂಚಿನ ಮಣ್ಣಿನ ಗೌರಿ ಮೂರ್ತಿಗಳು ಹಾಗೂ 7 ಇಂಚಿನಿಂದ 19 ಇಂಚಿನ ಮಣ್ಣಿನ ಗಣಪತಿ ಮೂರ್ತಿಗಳು ಲಭ್ಯವಿದೆ. ಎರಡು ಸಾವಿರಕ್ಕೂ ಹೆಚ್ಚಿನ ಮೂರ್ತಿಗಳಿಗೆ ಬೇಡಿಕೆ ಬಂದಿವೆಯಂತೆ.

ಸಮುದಾಯ ಗಣಪ: ಅದೇ ರೀತಿ ಕಳೆದ ಏಳು ವರ್ಷಗಳಿಂದ ಮಣ್ಣಿನ ಗೌರಿ, ಗಣೇಶನ ಮೂರ್ತಿ ತಯಾರಿಸುತ್ತಿರುವ ಓಜೋಸ್‌ ನಿಸರ್ಗ ಸಂಸ್ಥೆ ಈ ಬಾರಿಯೂ ಜೇಡಿ ಮಣ್ಣಿನಿಂದ ಕುಂಬಾರ ಕಲಾವಿದರ ಬಳಿ ಮಣ್ಣಿನ ಗಣಪತಿ ಮಾಡಿಸಿ ನಗರದ ಗಾಂಧಿ ಬಜಾರ್‌, ನಾಗರಬಾವಿ ಹಾಗೂ ಜೆಪಿ ನಗರದ ಓಜೋಸ್‌ ನಿಸರ್ಗ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದೆ.

ಈ ಬಾರಿ 700ರಿಂದ 800 ಮೂರ್ತಿಗಳನ್ನು ಮಾರಾಟ ಮಾಡುವ ಗುರಿ ಇದೆ. ಅಲ್ಲದೆ, ನಗರದ ವಿವಿಧ ಗ್ರಾಮೀಣ ಅಂಗಡಿಗಳಿಂದ ಮಣ್ಣಿನ ಗೌರಿ-ಗಣೇಶನ ಮೂರ್ತಿಗಳಿಗೆ  ಬೇಡಿಕೆ ಇದೆ. ಅಪಾರ್ಟ್‌ಮೆಂಟ್‌ ಅಥವಾ ಸಮುದಾಯಗಳು ಒಗ್ಗೂಡಿ ಮಾಡುವ ಹಬ್ಬಕ್ಕೆ ಮಣ್ಣಿನ ದೊಡ್ಡ ಮೂರ್ತಿಗಳನ್ನು ಮಾಡಿಕೊಡುವಂತೆ ಮುಂಚಿತವಾಗಿ ತಿಳಿಸಿದರೆ ಅದನ್ನು ಮಾಡಿಕೊಡಲಿದ್ದಾರೆ.

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next