ಮೂಡಲಗಿ: ಬಿಜೆಪಿ ಸರ್ಕಾರ ಪಂಚಾಮಸಾಲಿಗಳಿಗೆ 2ಎ ಮೀಸಲಾತಿ ನೀಡುವುದಾಗಿ ಮೂರು ಬಾರಿ ಭರವಸೆ ನೀಡಿದ್ದು, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಪಂಚಮಸಾಲಿ ಸಮುದಾಯದ ಮುಖಂಡರಿಂದ 2ಎ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಪಟ್ಟಣದ ಗುರ್ಲಾಪೂರ ಬಳಿ ಇರುವ ನಿಪ್ಪಾಣಿ-ಮೂಧೋಳ ರಾಜ್ಯ ಹೆದ್ದಾರಿ ಬಂದ್ ಮಾಡಿ, ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಮುಖಂಡರ ವೇದಿಕೆಯಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿ ಮೌನಕ್ಕೆ ಶರಣಾಗಿದ್ದಾರೆ. ಅವರ ಮೌನಕ್ಕೆ ಏನು ಕಾರಣ ಎಂಬುವುದು ನಮಗೆ ತಿಳಿಸಬೇಕು ಇಲ್ಲವಾದರೇ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುತ್ತೇವೆ ಎಂದು ಘೋಷಣೆ ಮಾಡಬೇಕು. ಅದನ್ನು ಬಿಟ್ಟು ಬೇರೆಯವರ ಮಾತು ಕೇಳಿ ನಮ್ಮ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಕೆಲವು ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಪಂಚಮಸಾಲಿ ಸಮುದಾಯದ ಜನರಿಂದ ಸುರ್ವಣಸೌಧ ಮುಂದೆ ಟ್ಯಾಕ್ಟರ್ ರ‍್ಯಾಲಿ ಮೂಲಕ ಪ್ರತಿಭಟಿಸಿ, ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಒಂದು ದಿನ ಉಪವಾಸ ಸತ್ಯಗ್ರಹ ಮಾಡುವುದಾಗಿ ಹೇಳಿ, ಈ ವರ್ಷ ಮುಗಿಯುವುದೊಳಗೆ 2ಎ ಮೀಸಲಾತಿಯನ್ನು ಪಡದೇ ಪಡೆಯುತ್ತೇವೆ ಎಂದರು.
ಪಂಚಮಸಾಲಿ ಸಮುದಾಯದ ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಪಿರೋಜಿ ಮಾತನಾಡಿ, ನಮ್ಮ ಪಂಚಮಸಾಲಿ ಸಮುದಾಯ ಜನರು ಶಾಂತಿಯುತವಾಗಿ ಹೋರಾಟ ಮಾಡಿತ್ತಿದ್ದಾರೆ. ಇದನ್ನು ಬಿಜೆಪಿ ಸರ್ಕಾರ ಅರ್ಥಮಾಡಿಕೊಂಡು ನಮ್ಮ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ನೀಡಬೇಕು. ನಮ್ಮ ಸಮುದಾಯ ಶಾಸಕರು 2ಎ ಮೀಸಲಾತಿಗಾಗಿ ಪಣತೊಟ್ಟು ಸದನದಲ್ಲಿ ಮಾತನಾಡಿ, 2ಎ ಮೀಸಲಾತಿಯನ್ನು ಪಡೆಯುವ ಮೂಲಕ ಶಾಸಕರು ಸಮುದಾಯದ ಋಣವನ್ನು ತೀರಿಸಬೇಕು ಎಂದರು.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಾಪ್ಪ ಪೂಜೇರಿ, ಬಿ.ಬಿ.ಹಂದಿಗು0ದ, ಶಶಿಕಾಂತ ಪಡಸಲಗಿ ಗುರುಗಳು ಹಾಗೂ ಬಸವಣ್ಣಿ ಮುಗಳಖೋಡ ಮಾತನಾಡಿ, 2ಎ ಮೀಸಲಾತಿ ನೀಡದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಸಮುದಾಯದ ಜನರು ದಿಲ್ಲಿಯಿಂದ ಬಂದಿರುವ ಪೊರಕೆಯನ್ನು ಕೈಯಲ್ಲಿ ಹಿಡಿದು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್ ಮೂಲಕ ಮುಖ್ಯಮಂತ್ರಿಗಳಿಗೆ 2ಎ ಮೀಸಲಾತಿ ಹಕ್ಕೊತ್ತಾಯಿಸಿ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಪಂಚಮಸಾಲಿ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ. ರಾಯಭಾಗ ತಾಲೂಕಾ ಘಟಕದ ಅಧ್ಯಕ್ಷ ಶಿವಬಸು ಕಾಪಶಿ, ಮಹಾದೇವ ಶೆಕ್ಕಿ, ಶ್ರೀಕಾಂತ ಕೌಜಲಗಿ, ಮಹಾಂತೇಶ ಕುಡಚಿ, ಶ್ರೀಶೈಲ ಅಂಗಡಿ, ದೀಪಕ್ ಜುಂಜರವಾಡ, ಶಿವನಗೌಡ ಪಾಟೀಲ, ಅಂಬರೀಶ ನಾಗೂರ, ಸಂಗಮೇಶ ಕೌಜಲಗಿ, ಮಲ್ಲು ಗೌಡಿಗೋಡರ ಹಾಗೂ ತಾಲೂಕಿನ ಪಂಚಮಸಾಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.