ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಷಯದಲ್ಲಿ ರಾಜ್ಯ ಸರ್ಕಾರ 48 ಗಂಟೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಜ. 14ರಿಂದ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧ ದವರೆಗೆ ಪಾದಯಾತ್ರೆ ನಡೆಸಿ, ಮಾಡು ಇಲ್ಲವೇ ಮಡಿ ಹೋರಾಟ ನಡೆಸಲಿದ್ದೇವೆ ಎಂದು ಅಖಿಲ ಭಾರತ ಪಂಚಮ ಸಾಲಿ ಸಮಾಜ ಸಂಘ ಎಚ್ಚರಿಕೆ ನೀಡಿದೆ.
ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅಖಿಲ ಭಾರತ ಪಂಚಮಸಾಲಿ ಸಂಘದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸರ್ಕಾರಕ್ಕೆ ಈ ಗಡುವು ನೀಡಿದರು.
ಹಿಂದೆ 2009ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ಸಮಾಜಕ್ಕೆ 3ಬಿ ಮೀಸಲಾಗಿ ನೀಡಿದ್ದರು. ಅಲ್ಲದೇ ಪ್ರಸ್ತುತ ಮರಾಠಾ ಸಮಾಜಕ್ಕೆ ಅಭಿವೃದ್ಧಿ ನಿಗಮ ಮಾಡಲು 24 ಗಂಟೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ನಾವು ಕಳೆದ 24 ವರ್ಷಗಳಿಂದ ಸಮಾಜಕ್ಕೆ 2ಎ ಮೀಸಲಾತಿ, ಲಿಂಗಾಯತ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ನೀಡುವಂತೆ ಹೋರಾಟ ನಡೆಸಿದ್ದೇವೆ. ಕಳೆದ ಅಕ್ಟೋಬರ್‌ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಸ್ವತಃ ಮುಖ್ಯಮಂತ್ರಿಗಳೇ ದೂರವಾಣಿಯಲ್ಲಿ ಮಾತನಾಡಿ, ತಿಂಗಳ ಕಾಲಾವಕಾಶ ಕೇಳಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪುವುದಿಲ್ಲ ಎಂಬ ಅಚಲ ವಿಶ್ವಾಸವಿದೆ. ನಾವು ಜ. 14ರಂದು ಪಾದಯಾತ್ರೆ ಮಾಡಲು ಎಲ್ಲ ಸಿದ್ಧತೆ ಮಾಡಿದ್ದು, ಮೊದಲ ದಿನ 2 ಲಕ್ಷ ಜನರೊಂದಿಗೆ ಪಾದಯಾತ್ರೆ ನಡೆಯಲಿದೆ. ಒಂದು ತಿಂಗಳ ಕಾಲ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಯಲಿದ್ದು, ಅಂತಿಮ ದಿನವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ವಿವರಿಸಿದರು.
ನಾವು ಪಾದಯಾತ್ರೆ ಹೋರಾಟವನ್ನು ಡಿ.23ರಿಂದಲೇ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವು. ಸರ್ಕಾರ ಮತ್ತೆ ಕಾಲಾವಕಾಶ ಕೇಳಿದಾಗ, ಅದನ್ನು ಜ.14ಕ್ಕೆ ಮುಂದೂಡಿದ್ದೇವು. ಜ. 9ರಂದು ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಸಚಿವ ಸಿ.ಸಿ. ಪಾಟೀಲ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕೂಡಲಸಂಗಮಕ್ಕೆ ಆಗಮಿಸಿ, ಪಾದಯಾತ್ರೆ ಮುಂದೂಡಲು ಮನವಿ ಮಾಡಿದ್ದರು. ಆದರೆ, ಅದಕ್ಕೆ ನಾವು ಒಪ್ಪಿಲ್ಲ. ಮುಖ್ಯಮಂತ್ರಿಗಳು ಜ. 14ರೊಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಂಡರೆ, ಜ.14ರ ದಿನ 2 ಲಕ್ಷ ಜನರೊಂದಿಗೆ ವಿಜಯೋತ್ಸವ ಆಚರಿಸಿ, ಸರ್ಕಾರವನ್ನು, ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇವೆ. ಇಲ್ಲದಿದ್ದರೆ ಅದೇ ದಿನ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದರು.
ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಹೋರಾಟಕ್ಕೂ, ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೂ ಸಂಬಂಧವಿಲ್ಲ. ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ ಸೇರಿದ 17 ಜನ ಶಾಸಕರು, 2ಸಚಿವರಿದ್ದಾರೆ. ಬಿಜೆಪಿಯಲ್ಲೇ 13 ಜನ ಶಾಸಕರಿದ್ದರು. ಶಾಸಕರ ಜನಸಂಖ್ಯೆ ಅನುಗುಣವಾಗಿ ಇನ್ನು ಇಬ್ಬರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಯಾರಿಗೇ, ಯಾವಾಗ ಬೇಕಾದರೂ ಸಚಿವ ಸ್ಥಾನ ಕೊಡಲಿ. ಈಗ ನಮ್ಮ ಹೋರಾಟ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂಬುದು ಅಚಲವಾಗಿದೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.