ಬೆಂಗಳೂರು: ಹಿಂದುಳಿದ ವರ್ಗಗಳ 2 ಎ ಮೀಸಲಾತಿಗೆ ವೀರಶೈವ ಲಿಂಗಾಯತ ಸೇರ್ಪಡೆ ಕುರಿತು ಕೇಂದ್ರ ಮನವೊಲಿಸಿ ಶೀಘ್ರ ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಚಿತ್ರಕಲಾ ಪರಿಷತ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 106 ಒಳಪಂಗಡಗಳು ಲಿಂಗಾಯತರಲ್ಲಿವೆ. 32 ಒಳಪಂಗಡಗಳು ಒಬಿಸಿ ಯಡಿ ಸೇರಿವೆ. ಉಳಿದ 74 ಒಳಪಂಗಡಗಳನ್ನ ಮೀಸಲಾತಿಗೆ ಸೇರಿಸಬೇಕು. ಇದಕ್ಕಾಗಿ ಒಂದು ಆಯೋಗವನ್ನೂ ರಚಿಸಬೇಕು. ಮುಖಂಡರ ಜೊತೆ ಮೊದಲು ಚರ್ಚಿಸಬೇಕು. ಅಭಿಪ್ರಾಯ ಪಡೆದು ಸರ್ಕಾರ ಮುಂದುವರಿಯಬೇಕು ಎಂದರು.
ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಸಾಲದು, ಕೇಂದ್ರದಲ್ಲಿ ಅದು ಒಪ್ಪಿತವಾಗುವಂತೆ ನೋಡಿಕೊಳ್ಳಬೇಕು. ಶೀಘ್ರ ನಿರ್ಧಾರವಾಗದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದರು.
ಇದನ್ನೂ ಓದಿ:ಬಿಎಸ್ ವೈ ಲಿಂಗಾಯತ ಬ್ರಹ್ಮಾಸ್ತ್ರಕ್ಕೆ ಹಿನ್ನಡೆ: ಆತುರದ ತೀರ್ಮಾನ ಮಾಡದಂತೆ ವರಿಷ್ಠರ ಸೂಚನೆ
ರಾಜ್ಯದಲ್ಲಿ ಲಿಂಗಾಯತರು ಬಹುಸಂಖ್ಯಾತರು, ಶಿಕ್ಷಣ, ಅನ್ನದಾಸೋಹಕ್ಕೆ ಒತ್ತು ನೀಡಿದ್ದ ಸಮುದಾಯ. ಒಬಿಸಿ ಮೀಸಲಾತಿಗಾಗಿ 25 ವರ್ಷಗಳಿಂದ ಬೇಡಿಕೆ ಇಟ್ಟಿದ್ದೆವು. ಅಕ್ಟೋಬರ್ 28 ರಂದು ಸಮುದಾಯದ ಶಾಸಕರನ್ನು ಒಳಗೊಂಡು ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಈಗ ಬೇಡಿಕೆಗೆ ಸ್ಪಂದನೆ ಸಿಗುತ್ತಿದೆ. ನಮಗೆ ಮೀಸಲಾತಿ ಬಗ್ಗೆ ಜಯ ಸಿಗುವ ದಿನ ಹತ್ತಿರವಾಗಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ನಿಗಮಕ್ಕೆ ಬಸವಣ್ಣ ಹೆಸರು
ವೀರಶೈವ ಲಿಂಗಾಯತ ನಿಗಮ ಸೂಕ್ತ ರೀತಿಯಲ್ಲಿ ಕೆಲಸ ಮಾಡಿದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಅನುಕೂಲವಾಗುತ್ತವೆ. ಇತರೆ ನಿಗಮಗಳಂತೆ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ನಿಗಮಕ್ಕೆ ಬಸವಣ್ಣನ ಹೆಸರು ಇಡಬೇಕು. ಅಂಬೇಡ್ಕರ್, ದೇವರಾಜ ಅಭಿವೃದ್ಧಿ ನಿಗಮ ಇವೆ. ಇದೇ ರೀತಿ ಬಸವಣ್ಣ ಹೆಸರಿಟ್ಟರೆ ಲಿಂಗಾಯಿತರು, ವೀರಶೈವರು ಒಪ್ಪುತ್ತಾರೆ. ಹೆಸರಿನ ಗೊಂದಲಬೇಡ ಎಂದು ಸ್ವಾಮೀಜಿ ತಿಳಿಸಿದರು