Advertisement

ಸಂಕ್ರಾಂತಿ ಬಳಿಕ ಪಂಚಮಸಾಲಿ ಸಮಾಜಕ್ಕೆ ಶುಕ್ರದೆಸೆ: ಮೃತ್ಯುಂಜಯ ಸ್ವಾಮೀಜಿ

04:29 PM Jan 12, 2021 | Nagendra Trasi |

ಬಸವನಬಾಗೇವಾಡಿ: ಪಂಚಮಸಾಲಿ ಸಮಾಜದ ಜನರು ಎದ್ರೇ ವೀರಭದ್ರಾ ಮಲಿಗಿದರೆ ಕುಂಭಕರ್ಣ, ಈಗ ಎದ್ದಿದ್ದಾರೆ. ಮೀಸಲಾತಿ ಸಿಗುವುದು ನಿಚ್ಚಿತ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಸೋಮವಾರ ಪಟ್ಟಣದ ವಿಜಯಪುರ ರಸ್ತೆಯ ಯಾತ್ರಿ ನಿವಾಸದಲ್ಲಿ ನಡೆದ ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಜ. 14ರಂದು ಕೂಡಲಸಂಗಮದಿಂದ ಬೆಂಗಳೂರವರೆಗಿನ ಪಾದಯಾತ್ರೆ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂಕ್ರಾತಿ ಬಳಿಕ ಪಂಚಮಸಾಲಿ ಸಮಾಜದ ಜನರ ದಿಕ್ಕು ಬದಲಾಗುವುದು ನಿಶ್ಚಿತ ಎಂದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕೆ ಬರಲು ಪಂಚಮಸಾಲಿ ಸಮಾಜದ ಜನರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಅವರು ಇನ್ನೆರೆಡು ದಿನದಲ್ಲಿ ಸಮಾಜದ ಜನರಿಗೆ ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ಅಪಾರವಾಗಿದೆ. ನೀಡಿದರೆ 14ರಂದು ಬಿ.ಎಸ್‌. ಯಡಿಯೂರಪ್ಪನವರಿಗೆ ಅಭಿನಂದೆ ಕಾರ್ಯಕ್ರಮ ಇಲ್ಲದಿದ್ದರೆ ಪಾದಯಾತ್ರೆ ಅನಿವಾರ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಖೀಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಇದು ಪಂಚಮಸಾಲಿ ಸಮಾಜದವರ ಕೊನೆ ಹಂತದ ಹೋರಾಟ. ಈ ಬಾರಿ ಜೀವ ಕೊಡುತ್ತೇವೆ ಹೊರತು ಮೀಸಲಾತಿ ಬಿಡುವುದಿಲ್ಲ ಎಂದರು.

ನಮ್ಮ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದು ನಿನ್ನೆ ಮೊನ್ನೆಯದಲ್ಲ. 1994ರಿಂದ ಹೋರಾಟ ನಡೆಸುತ್ತ ಬಂದಿದ್ದೇವೆ. ಆದರೂ ಯಾವ ಸರಕಾರ ನಮ್ಮ ಬಗ್ಗೆ ಗಮನ ಹರಿಸಿಲ್ಲ. ಈ ಬಾರಿ ಗಮನ ಹರಿಸಿ ನಮ್ಮ ಹಕ್ಕನ್ನು ಪಡೆಯುವುದು ನಿಶ್ಚಿತ. ನಾವು ಮೀಸಲಾತಿಗೆ  ಹೋರಾಡುತ್ತಿರುವುದು ರಾಜಕೀಯ ಉದ್ದೇಶಕ್ಕಲ್ಲ.

Advertisement

ನಮ್ಮ ಮಕ್ಕಳ ಶಿಕ್ಷಣ, ಉದ್ಯೋಗ ಮತ್ತು ಪಂಚಮಸಾಲಿ ಸಮಾಜದ ಜನಾಂಗದ ಕೃಷಿಕರ ಚಟುವಟಿಕೆಗೆ ಅಗತ್ಯವಿರುವ ಸೌಲಭ್ಯಕ್ಕಾಗಿ ಎಂದು ಹೇಳಿದರು. ಜ. 14ರಂದು ಕೂಡಲಸಂಗಮದಿಂದ ಶುರುವಾಗುವ ಪಾದಯಾತ್ರೆಯಲ್ಲಿ ಸಮಾಜದ 2 ಲಕ್ಷ ಜನರು ಭಾಗವಹಿಸಲಿದ್ದಾರೆ. ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವಾಗ ಸುಮಾರು 10ರಿಂದ 15 ಲಕ್ಷ ಜನರು ಭಾಗವಹಿಸಲಿದ್ದಾರೆ. ಈ ಹೋರಾಟದಲ್ಲಿ ರಾಜ್ಯದ ಪ್ರತಿ ಜಿಲ್ಲೆ, ಹಳ್ಳಿ ಹಳ್ಳಿಯಿಂದ ಜನರು ಭಾಗವಹಿಸಲಿದ್ದಾರೆ
ಎಂದರು.

ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್‌ ಮುಖಂಡ ಅಪ್ಪುಗೌಡ ಪಾಟೀಲ, ಪಿ.ಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಡಾ| ಬಸವನಗೌಡ ಪಾಟೀಲ, ಲ.ರು. ಗೊಳಸಂಗಿ, ಬಿ.ಎಲ್‌. ಪಾಟೀಲ, ಸಂಜುಗೌಡ ಪಾಟೀಲ, ಡಾ| ಮಹಾಂತೇಶ ಜಾಲಗೇರಿ, ಸಿ.ಎಸ್‌. ಸೋಲ್ಲಾಪುರ, ಮಲ್ಲಿಕಾರ್ಜುನ ಹಿರೇಕೊಟ್ರಿ, ಅಂಬರೀಶ ನಾಗೂರ, ಬಸವರಾಜ ಗೊಳಸಂಗಿ, ಶಂಕರಗೌಡ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹೋರಾಟಕ್ಕೆ ಶ್ರೀಗಳ ಬೆಂಬಲ
ಲಿಂಗಾಯತ ಪಂಚಮಸಾಲಿ ಪೀಠ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಬೇರೆ ಬೇರೆಯಾದರು ಕೂಡಾ ಸಮಾಜದ ವಿಷಯ ಬಂದಾಗ ಎರಡು ಪೀಠದ ಜಗದ್ಗುರು ನಮ್ಮ ಹಿಂದೆ ಇರುತ್ತಾರೆ. ಕೇವಲ ಪಂಚಮಸಾಲಿ ಸಮಾಜಕ್ಕೆ ಮಾತ್ರ ಮೀಸಲಾತಿಗಾಗಿ ಹೋರಾಟ ಮಾಡುತ್ತಿಲ್ಲ. ನಮ್ಮ ಅಣ್ಣ ತಮ್ಮಂದಿರಾದ ಲಿಂಗಾಯತ ಒಳಪಂಗಡದ ಜನರಿಗೂ ಉದ್ಯೋಗ ಶಿಕ್ಷಣದ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಒಬಿಸಿ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ.

ವಿಜಯಾನಂದ ಕಾಶಪ್ಪನವರ, ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next