ಶ್ರೀ ರಾಮಕೃಷ್ಣ ಮಠ ಹಾಗೂ ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ಪಂಚಮದ ಇಂಚರ ಬಳಗದ ಕಲಾ ಸಹಯೋಗದಲ್ಲಿ ಪಂಚಮದ ಇಂಚರ ವಿವೇಕ ಸ್ಮತಿ -2019 ಸಂಗೀತ ಮಹೋತ್ಸವ ಸಂಪನ್ನವಾಯಿತು. ಈ ಬಾರಿ ಹಿಂದುಸ್ಥಾನಿಯ ಹೆಚ್ಚಿನ ಘರಾನಾಗಳ ಸಂಗೀತ ಗೋಷ್ಠಿಗಳ ಮೂಲಕ ಉತ್ಸವಕ್ಕೆ ಹೆಚ್ಚಿನ ವೈವಿದ್ಯ ಹಾಗೂ ವಿಸ್ತಾರ ಪ್ರಾಪ್ತವಾಯಿತು.
ಮೊದಲ ಕಛೇರಿ ಮಂಗಳೂರಿನ ಚೈತನ್ಯ ಜಿ. ಭಟ್ ಇವರಿಂದ ನಡೆಯಿತು. ಮುಂಜಾನೆಯ ರಾಗ ಲಲತ್‌ನ ವಿಸ್ತಾರವಾದ ಪ್ರಸ್ತುತಿಯಲ್ಲಿ “ರೇನ್ ಕಾ ಸಪನಾ’ ಎಂಬ ಪಾರಂಪರಿಕ ಭಂದಿಶ್‌ನ್ನು ವಿಲಂಬಿತ್ ಏಕ್ ತಾಲ್‌ನಲ್ಲಿ ಹಾಡಿದರು ಹಾಗೂ ದೃತ್ ತೀನ್ ತಾಲದಲ್ಲಿ “ಭೋರ ಭಯೀ ಶ್ಯಾಮ ನಹಿ ಆಯೇ’ ಭಂದಿಶ್‌ನ್ನು ಪ್ರಸ್ತುತ ಪಡಿಸಿದರು. ಬಳಿಕ ರಾಗ್ ದೇವಗಿರಿ ಬಿಲಾವಲ್‌ನಲ್ಲಿ “ಮನ್ ಮೇ ಸಮಾಯ ಮೇ ಬೈಠೀ’ ದೃತ್ ತೀನ್ ತಾಲ್‌ನ ಭಂದಿಶ್‌ನ್ನು ಹಾಡಿ ತರಾನಾದೊಂದಿಗೆ ಗಾಯನವನ್ನು ಪೂರ್ಣಗೊಳಿಸಿದರು.
ಎರಡನೆಯ ಕಛೇರಿಯನ್ನು ನಡೆಸಿಕೊಟ್ಟವರು ಡಾ| ಮಿಥುನ್ ಚಕ್ರವರ್ತಿಯವರು. ಜೈಪುರ್ ಅತೌÅಲಿ ಘರಾನೆಯ ವೈಶಿಷ್ಟéವನ್ನು ರಾಗ್ ಸಂಪೂರ್ಣ ಬಿಬಾಸ್‌ನ ಪ್ರಸ್ತುತಿಯಲ್ಲಿ ತೋರಿಸಿಕೊಟ್ಟರು. ವಿಲಂಬಿತ್ ತೀನ್ ತಾಳದ “ಏ ಹೋ ನರಹರ ನಾರಾಯಣ’ ಹಾಗೂ ದ್ರುತ್ ತೀನ್ ತಾಳದಲ್ಲಿ ಪ್ರಸ್ತುತಗೊಂಡ “ಮೋರಾರೆ ಮೀತೆ ಹರವ’ ಭಾವೋದ್ದೀಪಕವಾಗಿ ಸಮ್ಮೊಹನಗೊಳಿಸಿದವು. ಸಾಮಾನ್ಯವಾಗಿ ಭೈರವ್ ಥಾಟ್‌ನಲ್ಲಿ ಹಾಡಲಾಗುವ ಬಿಬಾಸ್ ರಾಗವನ್ನು ಜೈಪುರ್ ಅತೌಲಿ ಘರಾನೆಯಲ್ಲಿ ಮಾರ್ವಾ ಥಾಟ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಶುದ್ಧ ದೈವತದ ಪ್ರಯೋಗವು ನಿಶಾದಕ್ಕೆ ಹತ್ತಿರವೆಂಬಂತೆ ಭಾಸವಾಗುತ್ತದೆ. ಈ ಸ್ವರಸ್ಥಾನವು ಸಂವಾದಿನಿಯ ನಿಲುಕಿಗೆ ಸಿಗುವುದಿಲ್ಲ ಕೂಡ. ಚಕ್ರವರ್ತಿಯವರು ಹಾಡಿದ ಎರಡನೆಯ ರಾಗ ಜೌನ್‌ಪುರಿ ವಿಲಂಬಿತ್ ಹಾಗೂ ದೃತ್ ತೀನ್ ತಾಲ್‌ಗಳಲ್ಲಿ ಹೂ ತೋ ಜಯ್ಯೋ ಹಾಗೂ ಹಮ್ ರಯ್ಯ ರಾತ್ ಬಿರಹರನಕೆ ಪಾಸ್ ಭಂದಿಶ್‌ಗಳೊಂದಿಗೆ ಪ್ರಸ್ತುತಗೊಂಡಿತು. ಜೈಪುರ್ ಅತೌಲಿ ಘರಾನಾದ ವಿಶೇಷತೆಯಾಗಿರುವ ಲಯಕಾರಿ ತಾನ್‌ಗಳಲ್ಲದೆ ಚಕ್ರವರ್ತಿಯವರ ನಿಯಂತ್ರಿತ ಪ್ರಕಾರ್‌ಗಳಿಂದ ಸೌಂದರ್ಯಾನುಭೂತಿಯುಂಟಾಯಿತು. ಮಿಯಾಕಿ ತೋಡಿ ರಾಗದ ಮಾದರ ಚೆನ್ನಯ್ಯ ಹಾಗೂ ಪಟದೀಪ್ ರಾಗದ ಕಳಬೇಡ ಕೊಲಬೇಡ ಈ ಎರಡು ಬಸವಣ್ಣನವರ ವಚನಗಳೊಂದಿಗೆ ಮಿಥುನ್ ಕಾರ್ಯಕ್ರಮ ಪೂರ್ಣಗೊಳಿಸಿದರು.
ಮೂರನೇ ಕಛೇರಿಯನ್ನು ನಡೆಸಿಕೊಟ್ಟವರು ಮುಂಬಯಿಯ ಆಗ್ರಾ ಘರಾನೆಯ ಪ್ರಿಯಾ ಪುರುಷೋತ್ತಮನ್. ದೃಪದ್ ಮಾದರಿಯ ನೋಂತೊಂ ಆಲಾಪದೊಂದಿಗೆ ಮೈದುಂಬಿದ ರಾಗ್ ಸಾಲಗವರಾಳಿಯಲ್ಲಿ ವಿಲಂಬಿತ್ ಖ್ಯಾಲ್ ಆಜ್ ಬದಾಯಿ ಬಾಜೇ ಹಾಗೂ ದೃತ್ ಏಕ್ ತಾಲ್‌ನಲ್ಲಿ ಜಿಯಾರಾ ನಹೀ ಮಾನ್ ಏಕ್ ಎಂಬ ಬಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಮುಂದೆ ಯಮನೀ ಬಿಲಾವಲ್‌ನಲ್ಲಿ ಪಾರಂಪರಿಕ ಭಂದಿಶ್‌ನ್ನು ಆದ್ಧಾ ತೀನ್ ತಾಲ್‌ನಲ್ಲಿ ಹಾಗೂ ತರಾನವನ್ನು ಪ್ರಸ್ತುತಪಡಿಸಿದರು. ಗಾಯನದಲ್ಲಿ ವಿಶೇಷವಾಗಿ ಕರ್ನಾಟಕಿ ಸಂಗೀತ ಪದ್ಧತಿಯ ಗಮಕ ಪರಿಣಾಮಕಾರಿಯಾಗಿ ಬಳಸುವುದು ಕಂಡುಬರುತ್ತದೆ.
ಬೆಳಗ್ಗಿನ ಕೊನೆಯ ಕಛೇರಿಯನ್ನು ಮೊಹಸಿನ್‌ಖಾನ್ ಸಿತಾರ್ ವಾದನದ ಮೂಲಕ ನಡೆಸಿಕೊಟ್ಟರು. ಬೀನ್‌ಕಾರ್ ಘರಾನಾ ಅಥವಾ ಈಗ ಧಾರವಾಡ ಘರಾನಾ ಎಂದೇ ಖ್ಯಾತವಾಗಿರುವ ಶೈಲಿಯಲ್ಲಿ ಸಿಂಹೇಂದ್ರ ಮಧ್ಯಮ ರಾಗವನ್ನು ವಿಸ್ತಾರವಾದ ಆಲಾಪ್ ಜೋಡ್, ಝಾಲಾ ಹಾಗೂ ವಿಲಂಬಿತ್ ಹಾಗೂ ದ್ರುತ್ ತೀನ್ ತಾಳಗಳ ಗತ್‌ಗಳೊಂದಿಗೆ ಪ್ರಸ್ತುತಪಡಿಸಿದ ಇವರು ಧುನ್‌ನೊಂದಿಗೆ ಕೊನೆಗೊಳಿಸಿದರು.
ಅಪರಾಹ್ನದ ಗಾಯನ ಗೋಷ್ಠಿಯನ್ನು ನಡೆಸಿಕೊಟ್ಟವರು ಸ್ವಾಮಿ ಕೃಪಾಕರಾನಂದಜಿ . ಇವರು ತಮ್ಮ ಗಾಯನಕ್ಕೆ ಭೀಮ್ ಪಲಾಸಿ ರಾಗವನ್ನು ಆಯ್ದುಕೊಂಡು ವಿಲಂಬಿತ್ ಏಕ್ ತಾಲ್‌ನ ಅಬ ತೋ ಮಹಾದೇವ್ ಹಾಗೂ ದೃತ್ ತೀನ್ ತಾಳದ ಬಿರಜ್ ಮೆ ಧೂಮ ಮಚಾಯೇ ಕಾನಃ ಪ್ರಸ್ತುತಿಯ ಬಳಿಕ ಸ್ವಾಮೀ ವಿವೇಕಾನಂದ ವಿರಚಿತ ದರ್ಬಾರಿ ರಾಗದ ಹಾಗೂ ಸೂಲಕ್ತಾ ತಾಳದ ಹರ ಹರ ಹರ ಭೂತನಾಥ ಹಾಗೂ ದುರ್ಗಾರಾಗದ ಮಾತೇ ಭವಾನಿ ಎಂಬ ಎರಡು ಭಜನ್‌ಗಳನ್ನು ಹಾಡಿದರು.
ಸಹೋದರಿಯರಾದ ದೇಬೊಪ್ರಿಯಾ ಹಾಗೂ ಸುಚಿಸ್ಮಿತಾ ಚಟರ್ಜಿ ಇವರಿಂದ ಕೊಳಲು ವಾದನ ನಡೆಯಿತು. ರಾಗ ಮಧುವಂತಿಯಲ್ಲಿ ವಿಸ್ತಾರವಾದ ಆಲಾಪ್ , ಮಧ್ಯಲಯ ರೂಪಕ್ ತಾಳ ಹಾಗೂ ದೃತ್ ತೀನ್ ತಾಳದ ಗತ್‌ಗಳನ್ನು ನುಡಿಸಿದರು. ಬಳಿಕ ಪೀಲೂ ರಾಗದ ಧುನ್‌ನೊಂದಿಗೆ ಕಛೇರಿಯನ್ನು ಸಮಾಪ್ತಗೊಳಿಸಿದರು.
ಏಳನೆಯ ಕಛೇರಿಯನ್ನು ನಡೆಸಿಕೊಟ್ಟವರು ಗುರುದತ್ ಅಗ್ರಹಾರ ಕೃಷ್ಣಮೂರ್ತಿ. ರಾಗ್ ಪುರಿಯಾ ಕಲ್ಯಾಣ್‌ನಿಂದ ಆರಂಭಿಸಿ ವಿಲಂಬಿತ್ ಏಕ್ ತಾಲ್‌ನಲ್ಲಿ ನಿಬದ್ಧವಾದ ಕರಿಯೇ ತಿನಕೋ ಸಲಾಮ್ ಮಧ್ಯಲಯ ತೀನ್ ತಾಲ್‌ನ ಅಬ್ ಮೋರಿ ಸುದಲಿ ಜೊ ಕರ್‌ತಾರ್ ಹಾಗೂ ದೃತ್ ತೀನ್ ತಾಲ್‌ನಲ್ಲಿ ಲಾಖೊ ಮೆ ಏಕ್ ಚುನ್ ಚುನ್ ಬುಲಾವೊ ಭಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಮೀರಾಬಾಯಿ ಮಲ್ಹಾರ್ ರಾಗದಲ್ಲಿ ತನ್ನ ಗುರುಗಳ ರಚನೆಯ ಜಗತ ಜನನಿ ಮಾತಾ ಚಂಡಿ ಎಂಬ ಭಂದಿಶ್ ಹಾಡಿದರು. ಪೀಲೂ ರಾಗದ ಒಂದು ಠುಮ್ರಿಯನ್ನು ಚುಟುಕಾಗಿ ಪ್ರಸ್ತುತಪಡಿಸಿದರು.
ಕೊನೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ನಾಗಭೂಷಣ ಹೆಗಡೆ. ತೂ ಹಿ ಕರ್‌ತಾರ ಎಂಬ ವಿಲಂಬಿತ್ ಏಕ್ ತಾಲ್‌ನ ಹಾಗೂ ದೃತ್ ತೀನ್ ತಾಲ್‌ನ ಹಮರೀ ಸುಧಾ ಎಂಬ ಭಂದಿಶ್‌ಗಳೊಂದಿಗೆ ಹೇಮಂತ್ ರಾಗವನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದರು ಹಾಗೂ ಮಧುಕಂಸ್ ರಾಗದ ಮೋರಾ ಮನ್ ಲುಭಾಯೆ ಮೂಲಕ ತಾರ ಸ್ಥಾಯಿಯಲ್ಲಿ ಲೀಲಾಜಾಲದ ಪ್ರಸ್ತುತಿ, ಸರ್‌ಗಮ್, ತಾನ್‌ಕಾರಿಗಳಿಂದ ಮನ ತಣಿಸಿದರು. ಭೈರವಿಯ ದಯಾನಿ ಬವಾನಿ ಭಜನ್‌ನೊಂದಿಗೆ ಸಂಪನ್ನಗೊಂಡಿತು.
ರಾಮ ಪ್ರಸಾದ ಕಾಂಚೋಡು