Advertisement

ಪಂಚಾಕ್ಷರಿ ಗವಾಯಿ ಅಂಧರ ಬಾಳಿನ ಬೆಳಕು

03:43 PM Aug 13, 2018 | |

ರಾಯಚೂರು: ಅಂಧತ್ವವನ್ನು ಲೆಕ್ಕಿಸದೆ ಸಂಗೀತವನ್ನೇ ಸಾಧನವಾಗಿಸಿಕೊಂಡು ಬಾಳಿದ ಪಂಡಿತ ಪಂಚಾಕ್ಷರಿ ಗವಾಯಿಗಳು ತಾವು ಮಾತ್ರವಲ್ಲದೇ ತಮ್ಮಂಥ ಅಸಂಖ್ಯ ಅಂಧ ಮಕ್ಕಳಿಗೆ ಬೆಳಕಾದರು ಎಂದು ಸಂಸದ ಬಿ.ವಿ.ನಾಯಕ ಹೇಳಿದರು.

Advertisement

ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿ ಸಂಸ್ಥೆಯಿಂದ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡ ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯದಿನಾಚರಣೆ ಹಾಗೂ 39ನೇ ವರ್ಷದ ಸಂಗೀತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ ಲೋಕಕ್ಕೆ ಗವಾಯಿಗಳು ನೀಡಿದ ಸೇವೆಯನ್ನು ಅವರ ಶಿಷ್ಯಂದಿರು ಸಂಗೀತ ಸಮ್ಮೇಳನದ ಮೂಲಕ ಜಗತ್ತಿಗೆ ಸಾರುತ್ತಿರುವುದು ಉತ್ತಮ ಕಾರ್ಯ. ಅಂಧತ್ವವನ್ನು ನ್ಯೂನ್ಯತೆಯಾಗಿ ಮಾಡಿಕೊಳ್ಳದೆ ಸಂಗೀತದ ಮೂಲಕ ಸಾಧನೆ ಮಾಡಿದರು. ಮಠ ಸ್ಥಾಪಿಸಿ ತಮ್ಮಂಥ ಸಾವಿರಾರು ಅಂಧ ಮಕ್ಕಳಿಗೆ ಸಂಗೀತದ ವಿದ್ಯೆ ಉಣಬಡಿಸಿ ಬಾಳಿಗೆ ಬೆಳಕಾದರು ಎಂದರು.

ಸೋಮವಾರ ಪೇಟೆ ಹಿರೇಮಠದ ಅಭಿವನ ಶ್ರೀ ರಾಜೋಟಿವೀರ ಶಿವಾಚಾರ್ಯರು ಮಾತನಾಡಿ, ಜೀವನದಲ್ಲಿ
ಹುಟ್ಟಿ ಸಾಯುವುದು ಸಹಜ. ಆದರೆ, ಅಷ್ಟರೊಳಗೆ ಏನು ಮಾಡಿದರು ಎನ್ನುವುದೇ ಜೀವನದ ಉದ್ದೇಶ. ಅಂಥ ಉತ್ತಮ
ಬದುಕನ್ನು ಬಾಳಿದವರು ಪಂಡಿತ ಪಂಚಾಕ್ಷರಿ ಗವಾಯಿಗಳು. ಅಂಧತ್ವದಿಂದ ನರಳಿದ ಅದೆಷ್ಟೋ ಜನರ ಬಾಳು ಬೆಳಗಿದವರು ಗವಾಯಿಗಳು. ಅಂದು ಅವರು ನೆಟ್ಟ ಸಂಗೀತದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. 

ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಗೌರವಾಧ್ಯಕ್ಷ ಡಾ| ನರಸಿಂಹಲು ವಡವಾಟಿ, ಅಧ್ಯಕ್ಷ ಸೂಗೂರೇಶ ಅಸ್ಕಿಹಾಳ, ದಾನಿಗಳಾದ ಗೋವಿಂದರೆಡ್ಡಿ ಸರ್ಜಾಪುರ, ಶಿವಾನಂದ ಬಂಕೊಳ್ಳಿ ಸಂಸ್ಥೆ ಸದಸ್ಯರು ಪಾಲ್ಗೊಂಡಿದ್ದರು. ಸಂಗೀತ ಸಮ್ಮೇಳನದಲ್ಲಿ ವಿವಿಧ ಕಲಾವಿದರು ಅಹೋರಾತ್ರಿ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿ ಜನರನ್ನು ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next