ಪಣಂಬೂರು: ಇಲ್ಲಿನ ಮಧುಕರ ಭಾಗವತರ ನೇತೃತ್ವದಲ್ಲಿ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ದ್ವಿತೀಯ ಸರಣಿ ಯಕ್ಷಗಾನ ಬಯಲಾಟ ಮತ್ತು ಯಕ್ಷಗಾನ ಕಲಾವಿದರಿಗೆ ಸಮ್ಮಾನ ಕಾರ್ಯಕ್ರಮ ಜರಗಿತು.
ಹಿರಿಯ ಹವ್ಯಾಸಿ ಕಲಾವಿದರಾದ ಪಿ. ಪರಮೇಶ್ವರ ಐತಾಳ, ಪಿ. ಶ್ರೀಧರ ಐತಾಳ ಅವರನ್ನು ಗಣ್ಯರ ಸಮ್ಮುಖ ಸಮ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸರ್ಪಂಗಳ ಈಶ್ವರ ಭಟ್ಟ ಅವರು ಐತಾಳದ್ವಯರ ಸಾಧನೆ ಯನ್ನು ಶ್ಲಾ ಸಿದರು. ಮಧುಕರ ಭಾಗವತರ ಸಂಘಟನ ಚಾತುರ್ಯ, ವಿಶಿಷ್ಟ ಕಾರ್ಯಕ್ರಮಗಳ ಯೋಜನೆಯ ಬಗ್ಗೆ ಹೇಳುತ್ತಾ ಅರುವತ್ತರ ಸಂಭ್ರಮದ ಅಶ್ವಮೇಧ ಆರಂಭಿಸಿದ್ದಾರೆ ಇದು “ಮಧುಕರ ವಿಜಯ’ವಾಗಲಿ ಎಂದು ಹಾರೈಸಿದರು. ಪೊಳಲಿ ನಿತ್ಯಾನಂದ ಕಾರಂತರು ಅಭಿನಂದನ ಭಾಷಣ ಮಾಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಮಧುಕರ ಭಾಗವತರು ಯಕ್ಷಗಾನದ ನಂಟನ್ನು ಬೆಳೆಸಿ ಉಳಿಸಿಕೊಳ್ಳಲು ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರಮಂಡಳಿಯು ಕಾರಣ. ಅದರ ಆಧಾರಸ್ತಂಭಗಳಾದ ಐತಾಳದ್ವಯರನ್ನು ಸಮ್ಮಾನಿಸಲು ಹೆಮ್ಮೆಯೆನಿಸುತ್ತದೆ ಎಂದರು. ಸಮ್ಮಾನ ಪತ್ರಗಳನ್ನು ಡಾ| ಸತ್ಯಮೂರ್ತಿ ಐತಾಳ ಮತ್ತು ಸುಧಾಕರ ಕಾಮತ್ ವಾಚಿಸಿದರು.
ತಾಳೆಪ್ಪಾಡಿ ಲಕ್ಷಿನಾರಾಯಣ ರಾವ್, ನಾರಾಯಣ ಐತಾಳ್, ರಂಗನಾಥ ಐತಾಳ್, ಸುಧಾ ಮಧುಕರ, ರಾಮಚಂದ್ರ ಹೆಬ್ಟಾರ್, ಶಶಿಧರ ಐತಾಳ್, ಬಾಲಕೃಷ್ಣ ರಾವ್, ಪುಷ್ಪಲತಾ ರಂಜನ್ ಹೊಳ್ಳ, ಡಾ| ಪ್ರಭಾಕರ ಜೋಶಿ ಮೊದಲಾದವರು ಉಪಸ್ಥಿತರಿದ್ದರು. ಜಯಂತಿ ಎಸ್. ಹೊಳ್ಳ ನಿರೂಪಿಸಿದರು. ಸಂತೋಷ ಐತಾಳ ವಂದಿಸಿದರು. ಬಳಿಕ ತಾಮ್ರಧ್ವಜ ಕಾಳಗ ಯಕ್ಷಗಾನ ಬಯಲಾಟ ಜರಗಿತು.