Advertisement

ಪಣಂಬೂರು: ಕರಾವಳಿ ಭದ್ರತೆಗೆ ಇನ್ನೂ 2 ರಾಡಾರ್‌ ಕೇಂದ್ರ

11:56 PM Jan 07, 2023 | Team Udayavani |

ಪಣಂಬೂರು: ಭಾರತೀಯ ಕೋಸ್ಟ್‌ ಗಾರ್ಡ್‌ನಿಂದ ಕರ್ನಾಟಕ ಕರಾವಳಿಯ ಭದ್ರತೆಯನ್ನು ಹೆಚ್ಚಿಸಲು ಇನ್ನೂ ಎರಡು ರಾಡಾರ್‌ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಉಡುಪಿಯ ಕುಂದಾಪುರ ಮತ್ತು ಉತ್ತ‌ ಕನ್ನಡ ಜಿಲ್ಲೆಯ ಬೇಲೇಕೇರಿಯಲ್ಲಿ ರಾಡಾರ್‌ಗಳನ್ನು ಅಳವಡಿಸಲಾಗುವುದು ಎಂದು ಕರಾವಳಿ ಕಾವಲು ಪಡೆ ಜಿಲ್ಲೆ ನಂ. 3ರ ಕರ್ನಾಟಕ ಕಮಾಂಡರ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ ಹೇಳಿದರು.

Advertisement

ಭಾರತೀಯ ಕೋಸ್ಟ್‌ಗಾರ್ಡ್‌ ಶನಿವಾರ ಪಣಂಬೂರಿನಲ್ಲಿ ಆಯೋಜಿ ಸಿದ್ದ ಮೀನುಗಾರ ರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸುರತ್ಕಲ್‌ ಮತ್ತು ಭಟ್ಕಳದ ರಾಡಾರ್‌ ಕೇಂದ್ರಗಳ ಸಹಾಯದಿಂದ ಕರ್ನಾಟಕದ ಸಂಪೂರ್ಣ 320 ಕಿ.ಮೀ. ಉದ್ದದ ಕರಾವಳಿಯನ್ನು ಕಣ್ಗಾವಲು ಮಾಡಲಾಗುತ್ತಿದೆ ಎಂದರು.

ಬೇಲೇಕೇರಿಯಲ್ಲಿ ರಾಡಾರ್‌ ಕೇಂದ್ರ
ಬಹುತೇಕ ಸಿದ್ಧವಾಗಿದ್ದು, ಕುಂದಾಪುರ ದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಪ್ರತೀ ರಾಡಾರ್‌ ಕೇಂದ್ರವು ಸಮುದ್ರದೊಳಗೆ 30 ನಾಟಿಕಲ್‌ ಮೈಲುಗಳವರೆಗೆ ಕ್ರಮಿಸುತ್ತದೆ. ರಾಡಾರ್‌ನಲ್ಲಿರುವ ಕೆಮರಾ ಐದರಿಂದ ಏಳು ನಾಟಿಕಲ್‌ ಮೈಲುಗಳನ್ನು ಕ್ರಮಿಸುತ್ತದೆ. ಮುಂಬಯಿ ಭಯೋತ್ಪಾದನ ದಾಳಿಯ ಅನಂತರ ಕರಾವಳಿ ಕಣ್ಗಾವಲು ಜಾಲದ ಅಡಿಯಲ್ಲಿ ರಾಡಾರ್‌ ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದರು.

ಉಳ್ಳಾಲ ಸಮೀಪ ಮುಳುಗv ೆ ಯಾದ ಸರಕು ಸಾಗಣೆ ಹಡಗು ಎಂವಿ ಪ್ರಿನ್ಸೆಸ್‌ ಮಿರಾಲ್‌ನ ಇಂಧನ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೆಂಜಾರಿನಲ್ಲಿ ಕೋಸ್ಟ್‌ ಗಾರ್ಡ್‌ ಅಕಾಡೆಮಿ
ಕೆಂಜಾರಿನಲ್ಲಿ ಸ್ಥಾಪನೆಗೊಳ್ಳಲಿರುವ ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಅಕಾಡೆಮಿಯ ವಿಸ್ತೃತ ಯೋಜನ ವರದಿ ಸಿದ್ಧಪಡಿಸಲಾಗಿದ್ದು, ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೋಸ್ಟ್‌ ಗಾರ್ಡ್‌ ಪಶ್ಚಿಮ ವಲಯದ ಕಮಾಂಡರ್‌ ಜನರಲ್‌ ಎಂ.ವಿ. ಬಾಡ್ಕರ್‌ ತಿಳಿಸಿದರು. 160 ಎಕರೆ ಜಾಗದಲ್ಲಿ ಅಕಾಡೆಮಿ ಬರಲಿದೆ. ಸದ್ಯದಲ್ಲೇ ಅಕಾಡೆಮಿಯ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದರು.

Advertisement

ದೋಣಿಗಳಿಗೆ ಎಐಎಸ್‌
20 ಮೀಟರ್‌ಗಿಂತ ಹೆಚ್ಚು ಉದ್ದವಿರುವ ಮೀನುಗಾರಿಕೆ ದೋಣಿ ಗಳಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (ಎಐಎಸ್‌) ಟ್ರಾನ್ಸ್‌ ಪಾಂಡರ್‌ಗಳನ್ನು ಅಳ ವಡಿಸುವ ಯೋಜನೆಯಿದೆ. ಎಐಎಸ್‌ ತಾಂತ್ರಿಕ ವ್ಯವಸ್ಥೆಯು ಸಂಕಷ್ಟ ದಲ್ಲಿರುವ ಮೀನುಗಾರರನ್ನು ತಲುಪಲು ಸಹಾಯ ಮಾಡುತ್ತದೆ ಎಂದರು. ಶೋಧ ಮತ್ತು ರಕ್ಷಣ ಕಾರ್ಯಾಚರಣೆಯ ಸಮಯದಲ್ಲಿ ಮೀನುಗಾರಿಕೆ ದೋಣಿಯ ಇರುವಿಕೆಯನ್ನು ತೋರಿಸುತ್ತದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ಸುಶ್ಮಿತಾ ರಾವ್‌ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,553 ಮೀನುಗಾರಿಕೆ ದೋಣಿಗಳಿದ್ದು, 1,607 ಯಾಂತ್ರೀಕೃತ ದೋಣಿಗಳಿವೆ. ಸುಮಾರು 400 ಯಾಂತ್ರೀಕೃತ ದೋಣಿಗಳಲ್ಲಿ ಎಐಎಸ್‌ ಅಳವಡಿಸ ಲಾಗಿದೆ ಎಂದು ವಿವರಿಸಿದರು.

ಮೀನುಗಾರರಿಗೆ ಸಿಗದ ಸಬ್ಸಿಡಿ: ಕಳವಳ
12 ನಾಟಿಕಲ್‌ ಮೈಲುಗಳ ಅಂತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕರ್ನಾಟಕದ ಮೀನುಗಾರಿಕೆ ದೋಣಿಗಳನ್ನು ಕೇರಳ ಅಧಿಕಾರಿಗಳು ವಶಪಡಿಸಿ ಕೊಂಡು ಭಾರೀ ದಂಡ ವಿಧಿಸಿರುವುದು, ಸಾಂಪ್ರದಾಯಿಕ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆ ಕೊರತೆ ಮತ್ತು ಸಬ್ಸಿಡಿ ಡೀಸೆಲ್‌ಗೆ ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡದಿರುವ ಬಗ್ಗೆ ಮೀನುಗಾರರ ಮುಖಂಡರಾದ ನಿತಿನ್‌ ಕುಮಾರ್‌ ಮತ್ತು ಚೇತನ್‌ ಬೆಂಗ್ರೆ ಕಳವಳ ವ್ಯಕ್ತಪಡಿಸಿದರು.

ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಉತ್ತರಿಸಿ, ಬೋಟ್‌ ವಶಪಡಿಸಿ ಕೊಳ್ಳುವ ವಿಚಾರವನ್ನು ಮೀನುಗಾರಿಕೆ ಸಚಿವಾಲಯದ ಗಮನಕ್ಕೆ ತಂದು ಸರಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ರಾಜ್ಯ ಸರಕಾರದಿಂದ 2 ದಿನಗಳಲ್ಲಿ ಸೀಮೆಎಣ್ಣೆ ಸಮಸ್ಯೆ ಬಗೆಹರಿಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next