Advertisement

ಮಂಗಳೂರು ಸಹಿತ ಇತರ ಬೀಚ್‌ ಅಭಿವೃದ್ಧಿಗಾಗಿ ಪಣ

12:05 PM Dec 17, 2017 | |

ಮಹಾನಗರ: ಪ್ರಸ್ತುತ ಪ್ರವಾಸೋದ್ಯಮದಲ್ಲಿ ಬೀಚ್‌ಗಳು ಹಾಗೂ ಹಿನ್ನೀರು ಪ್ರದೇಶಗಳು ಬಹುಮುಖ್ಯವಾಗಿ ಗುರುತಿಸಿಕೊಂಡಿರುವ ತಾಣಗಳು. ಮಂಗಳೂರಿನಲ್ಲಿ ಕೆಲವು ಬೀಚ್‌ಗಳನ್ನು, ಒಂದೆರಡು ಕುದ್ರುಗಳು ಪ್ರವಾಸಿ ತಾಣಗಳಾಗಿ ಗುರುತಿಸಿಕೊಂಡಿವೆ. ಇದರ ಜತೆಗೆ ಇನ್ನೂ ಕೆಲವು ಬೀಚ್‌ಗಳನ್ನು, ಕುದ್ರುಗಳನ್ನು, ಹಿನ್ನೀರು ತಾಣಗಳನ್ನು ಪ್ರವಾಸಿ ಆಕರ್ಷಣೆಯ ತಾಣಗಳಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿ ನೀಲ ನಕಾಶೆಯೊಂದು ಸಿದ್ದಗೊಳ್ಳುವ ಆವಶ್ಯಕತೆ ಇದೆ.

Advertisement

ಮಂಗಳೂರು ನಗರದಲ್ಲಿ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ , ತಲಪಾಡಿ, ಸಸಿಹಿತ್ಲು , ಸುರತ್ಕಲ್‌ ಮುಖ್ಯವಾಗಿ ಗುರುತಿಸಿಕೊಂಡಿರುವ ಬೀಚ್‌ಗಳು. ಇದರಲ್ಲಿ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಬೀಚ್‌ ಅಭಿವೃದ್ಧಿಗೊಂಡು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ. ಈಗ ಕೇಂದ್ರದ ಪ್ರವಾಸೋದ್ಯಮ ಸಚಿವಾಲಯ ಸ್ವದೇಶಿ ದರ್ಶನ್‌ ಯೋಜನೆಯಲ್ಲಿ ಮಂಗಳೂರಿನ ಕೆಲವು ಬೀಚ್‌ಗಳಲ್ಲಿ ತೇಲುವ ರೆಸ್ಟೋರೆಂಟ್‌ ಸೇರಿದಂತೆ ಕೆಲವು ಪ್ರವಾಸಿ ಆಕರ್ಷಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ.

ಸಸಿಹಿತ್ಲು ಬೀಚ್‌ ರಾಷ್ಟ್ರಮಟ್ಟದಲ್ಲಿ ಒಂದು ಪ್ರಮುಖ ಸರ್ಫಿಂಗ್ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸರ್ಫಿಂಗ್  ಸ್ಪರ್ಧೆ ಮಂಗಳೂರಿನಲ್ಲಿ ಸಾಗರ ಪ್ರವಾಸೋದ್ಯಮಲ್ಲಿರುವ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿತ್ತು. ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ವಿಶ್ವ ಸರ್ಫ್‌ ಲೀಗ್‌ನ ಸ್ಟೀಫ‌ನ್‌ ರಾಬರ್ಟ್‌ಸ್‌ ಅವರು ಸಸಿಹಿತ್ಲು ಬೀಚ್‌ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.

ಪ್ರಸ್ತುತ ಮಂಗಳೂರು ಭಾಗದ ಸಾಗರ ತೀರದಲ್ಲಿ ಇರುವ ಬೀಚ್‌ಗಳ ಜತೆಗೆ ಇತರ ಯಾವುದೆಲ್ಲಾ ತಾಣಗಳನ್ನು ಬೀಚ್‌ ಆಗಿ ಅಭಿವೃದ್ಧಿ ಪಡಿಸಲು ಸಾಧ್ಯವಿದೆ, ಯಾವ ತಾಣಗಳು ಅಪಾಯಕಾರಿಯಾಗಿವೆ ಎಂಬ ಬಗ್ಗೆ ನಿಖರ ಮಾಹಿತಿ, ವಿವರ ಪಡೆದು ಸಮಗ್ರ ಸರ್ವೇ ಕಾರ್ಯ ನಡೆಯಬೇಕಾಗಿದೆ.

ಆಕರ್ಷಣೀಯ ಕುದ್ರುಗಳು
ಕಿರು ದ್ವೀಪಗಳನ್ನು ತುಳುವಿನಲ್ಲಿ ಕುದ್ರು ಎಂದು ಕರೆಯಲಾಗುತ್ತಿದೆ. ನದಿ ಮತ್ತು ಕರಾವಳಿ ತೀರಕ್ಕೆ ಸನಿಹ ಸಮುದ್ರ ಮಧ್ಯದಲ್ಲಿ ಇಂತಹ ಕಿರು ದ್ವೀಪಗಳಿವೆ. ಜಪ್ಪಿನಮೊಗರಿನ ನೇತ್ರಾವತಿ ನದಿಯಲ್ಲಿ ಹಾಗೂ ಮಂಗಳೂರಿನ ಹಳೇ ಬಂದರು ಪ್ರದೇಶದಲ್ಲಿ ಮೂರು ದ್ವೀಪಗಳಿವೆ. ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಗಮನ ಸೆಳೆಯುತ್ತಿವೆ. ಇದನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ಕೂಡ ಆಗಿತ್ತು. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸಿದ್ಧತೆಗಳಾಗಿತ್ತು. ದ್ವೀಪಕ್ಕೆ ಬೋಟು ಸೌಲಭ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ಮುಂದಕ್ಕೆ ಯಾವುದೇ ಪ್ರಗತಿಯಾಗಲಿಲ್ಲ. ಮಂಗಳೂರಿನ ಹಳೇ ಬಂದರು ಪ್ರದೇಶದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿನ ಮೂರು ದ್ವೀಪಗಳನ್ನು ಪ್ರವಾಸಿ ಆಕರ್ಷಣಿಯ ತಾಣಗಳಾಗಿ ಅಭಿವೃದ್ಧಿ ಪಡಿಸುವ ಬಗ್ಗೆಯೂ ಚಿಂತನೆ ನಡೆದಿತ್ತು.

Advertisement

ಹಿನ್ನೀರು ತಾಣಗಳು
ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಸುತ್ತಮುತ್ತ ಸುಂದರ ಕುದ್ರುಗಳು ನಿರ್ಮಿಸಿದ್ದು, ದಟ್ಟ ಹಸಿರಿನಿಂದ ಕಂಗೊಳಿಸುತ್ತಿವೆ. ಇನ್ನೊಂದೆಡೆ ಎರಡೂ ನದಿಗಳ ಇಕ್ಕೆಲಗಳಲ್ಲಿ ಹಿನ್ನೀರಿನ ರಮಣೀಯ ತಾಣಗಳಿವೆ. ಆಸಕ್ತಿ ವಹಿಸಿದರೆ ಇವುಗಳನ್ನು ಸುಂದರ ಪ್ರವಾಸೋದ್ಯಮ ತಾಣಗಳಾಗಿ ಆಕರ್ಷಿಸಬಹುದಾಗಿದೆ. ಕೇರಳ ಇದೇ ಮಾದರಿಯನ್ನು ಅನುಸರಿಸುತ್ತಿದೆ. ಅಲ್ಲಿ ಹಿನ್ನೀರುಗಳಲ್ಲಿ ಇರುವ ಬೋಟ್‌ ಹೌಸ್‌ಗಳು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದಲ್ಲದೆ ಈಗ ಹಿನ್ನೀರುಗಳಲ್ಲಿ ಶಾಶ್ವತ ಬೋಟ್‌ ಹೌಸ್‌ ಎಂಬ ಹೊಸ ಪರಿಕಲ್ಪನೆ ಪ್ರವರ್ಧಮಾನಕ್ಕೆ ಬರುತ್ತಿದೆ.

ಇನ್ನೂ ಪಂಚತಾರಾ ಹೊಟೇಲ್‌ ಬಂದಿಲ್ಲ
ಕರಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಹೂಡಿಕೆ ಮಾಡಲು ಈಗಾಗಲೇ ಬಹಳಷ್ಟು ಮಂದಿ ಉತ್ಸುಕತೆ ತೋರಿದ್ದಾರೆ. ಆದರೆ ಮೂಲಸೌಕರ್ಯಗಳ ಕೊರತೆ ಹಾಗೂ ಪೂರಕ ವಾತಾವರಣದ ಕೊರತೆಯಿಂದ ಹಿಂಜರಿಯುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಸರ್ವಋತು ಬಂದರು ಇದೆ. ಧಾರ್ಮಿಕ ಕೇಂದ್ರಗಳಿವೆ. ದೇಶದಲ್ಲೇ ಪ್ರಮುಖ ಶೈಕ್ಷಣಿಕ ಹಬ್‌ ಆಗಿ ಗುರುತಿಸಿಕೊಂಡಿದೆ. ಆದರೆ ಇಲ್ಲಿ ಇನ್ನೂ ಕೂಡ ಪಂಚತಾರಾ ಹೊಟೇಲ್‌ಗ‌ಳು ಬಂದಿಲ್ಲ. ಮಂಗಳೂರಿಗೆ ಬಂದ ಪ್ರವಾಸಿಗರು ಪಂಚತಾರಾ ಹೊಟೇಲ್‌ ಹುಡುಕಿಕೊಂಡು ಪಕ್ಕದ ಕೇರಳರಾಜ್ಯದ ಬೇಕಲಕ್ಕೆ ಹೋಗುತ್ತಿದ್ದಾರೆ.

ಜಲ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ವ್ಯವಸ್ಥೆ ಪೂರಕ
ಕರ್ನಾಟಕದ ಕರಾವಳಿಯಲ್ಲಿ ಸೋಮೇಶ್ವರದಿಂದ ಕಾರವಾರದವರೆಗೆ ಸುಮಾರು 300 ಕಿ.ಮಿ. ಸಾಗರತೀರವಿದೆ. ದ.ಕನ್ನಡ ಜಿಲ್ಲೆಯಲ್ಲಿ 42 ಕಿ.ಮಿ ಹಾಗೂ ಉಡುಪಿ ಜಿಲ್ಲೆಯಲ್ಲಿ 98 ಕಿ.ಮಿ. ಸಮುದ್ರ ತೀರವನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆ 160 ಕಿ.ಮೀ. ಸಾಗರ ತೀರವಿದೆ. ಕರಾವಳಿಯಲ್ಲಿ ಪ್ರವಾಸೋಧ್ಯಮದ ಅಭಿವೃದ್ಧಿಗಾಗಿ ಪ್ರಾಧಿಕಾರದ ಮಾದರಿಯಲ್ಲಿ ಪ್ರತ್ಯೇಕ ವ್ಯವಸ್ಥೆಯೊಂದರ ರಚನೆ ಪೂರಕವಾಗಬಹುದು. ಅಭಿವೃದ್ಧಿ, ಉತ್ತೇಜನಕ್ಕಾಗಿ ವಿಶೇಷ ಯೋಜನೆ ಸಿದ್ಧಪಡಿಸುವುದು, ಸಾಗರತೀರ ಪ್ರವಾಸೋದ್ಯಮ ಅಭಿವೃದ್ಧಿ ನೀಲ ನಕಾಶೆ ಸಿದ್ಧಪಡಿಸುವುದು, ಸ್ಥಳೀಯರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ದೇಶ, ವಿದೇಶಗಳ ಪ್ರಮುಖರನ್ನು ಇಲ್ಲಿಗೆ ಆಕರ್ಷಿಸುವ ಮೂಲಕ ಕರಾವಳಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಪ್ರಕಾಶಿಸಬಹುದು ಎಂಬುದು
ಈ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿರುವವರ ಅಭಿಪ್ರಾಯ.

ಪ್ರಮುಖ ಆದಾಯ ಕ್ಷೇತ್ರ 
ಪ್ರವಾಸೋದ್ಯಮ ಉತ್ತಮ ಆದಾಯ ತರುವ ಸೇವಾ ವಲಯವಾಗಿ ಪ್ರಸ್ತುತ ಗುರುತಿಸಿಕೊಂಡಿದೆ. ಉದ್ಯೋಗ ಅವಕಾಶಗಳ ಸೃಷ್ಠಿ , ವಾಣಿಜ್ಯ ಅಭಿವೃದ್ದಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿದೆ. ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ರಾಜ್ಯಗಳನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಈ ಎಲ್ಲ ರಾಜ್ಯಗಳು ಸಾಗರ ತೀರ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿದ ಪರಿಣಾಮ ವರ್ಷಕ್ಕೆ ಲಕ್ಷಾಂತರ ಮಂದಿಯನ್ನು ಆಕರ್ಷಿಸಲು ಸಾಧ್ಯವಾಗಿದೆ.

ಪ್ರತ್ಯೇಕ ಅಭಿವೃದ್ಧಿ ಮಂಡಳಿಗೆ ಮನವಿ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ. ಸಾಗರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಲಭಿಸುವ ನಿಟ್ಟಿನಲ್ಲಿ ಸಿಆರ್‌ಝಡ್‌ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ಕೂಡಾ ಸಲಹೆ ಮಾಡಿದು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರತ್ಯೇಕ ಅಭಿವೃದ್ದಿ ಮಂಡಳಿಯೊಂದನ್ನು ರಚಿಸಬೇಕು ಎಂಬ ಮನವಿಯನ್ನು ನಾವು ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಮಾಡಿದ್ದೇವೆ.
ವತಿಕಾ ಪೈ,
  ಅಧ್ಯಕ್ಷರು, ಕೆಸಿಸಿಐ

  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next