ಪಣಜಿ: ಗೋವಾದ ವಾಸ್ಕೊ ಜುವಾರಿ ನಗರದ ಬಿರ್ಲಾ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಸಂಭವಿಸಿದ ಬೆಂಕಿ ಅವಗಢದಲ್ಲಿ ನಾಲ್ಕು ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಭಾನುವಾರ (ಮಾ.5) ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ಆರಂಭದಲ್ಲಿ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಆ ಬಳಿಕ ಪಕ್ಕದಲ್ಲಿ ನಿಲ್ಲಿಸಿದ್ದ ನಾಲ್ಕು ಕಾರುಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ಭಾನುವಾರ ಮಧ್ಯಾಹ್ನ ಜುವಾರಿ ನಗರದಲ್ಲಿ ಒಣ ಹುಲ್ಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಆ ಪ್ರದೇಶದಲ್ಲಿ ನಾಲ್ಕು ಚಕ್ರದ ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ವಾಸ್ಕೋ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿಲ್ಲಿಸಲಾದ 4 ನಾಲ್ಕು ಚಕ್ರಗಳ ಪೈಕಿ ಒಂದು ಟ್ಯಾಕ್ಸಿ ಕೂಡ ಒಳಗೊಂಡಿದೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ ವಾಸ್ಕೋ ಅಗ್ನಿಶಾಮಕ ಠಾಣೆ, ವೆರ್ನಾ ಅಗ್ನಿಶಾಮಕ ಠಾಣೆ ಮತ್ತು ಜುವಾರಿ ಕಂಪನಿಯ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದರು.
ಘಟನೆಯಿಂದ ಉಂಟಾದ ಹಾನಿಯನ್ನು ಇನ್ನೂ ಅಂದಾಜಿಸಲಾಗಿಲ್ಲ. ಆದರೆ ನಾಲ್ಕು ಕಾರುಗಳಿಗೆ ಹಾನಿಯುಂಟಾಗಿ ಸುಮಾರು 20 ಲಕ್ಷ ರೂ. ಮೀರುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.