ಪಣಜಿ: ಗೋವಾದಲ್ಲಿ ಲಿಂಗಾಯತ ಸಮಾಜದ ಜನತೆಯ ರುದ್ರಭೂಮಿಯ ಅಭಿವೃದ್ಧಿ ಕಾರ್ಯವನ್ನು ಸರ್ಕಾರದ ಮೂಲಕ ನೆರವೇರಿಸಿಕೊಡಲಾಗುವುದು. ಅಂತೆಯೇ ಶ್ರೀ ಬಸವ ಸೇವಾ ಟ್ರಸ್ಟ್ ಗೂ ಕೂಡ ಎಲ್ಲ ಅಗತ್ಯ ಸಹಾಯ ನೀಡುತ್ತೇನೆ ಎಂದು ಶಾಸಕ ಸಂಕಲ್ಪ ಅಮೋಣಕರ್ ಭರವಸೆ ನೀಡಿದರು.
ಗೋವಾ ವಾಸ್ಕೊದ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ಶ್ರೀಗುರು ಬಸವ ಸೇವಾ ಟ್ರಸ್ಟ್ ಮುರಗಾಂವ ಇದರ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಇಲ್ಲಿ ಲಿಂಗಾಯತ ಸಮಾಜದ ಜನರ ರುದ್ರ ಭೂಮಿಯಲ್ಲಿ ಕೆಲ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಲಾಗಿದೆ. ರುದ್ರಭೂಮಿಯ ಅಭಿವೃದ್ಧಿ ಕಾರ್ಯವನ್ನು ಸರ್ಕಾರದ ಮುಖೇನವಾಗಿ ನೆರವೇರಿಸಿ ಕೊಡುತ್ತೇನೆ. ಇಷ್ಟೇ ಅಲ್ಲದೆಯೇ ಇಲ್ಲಿ ಕನ್ನಡಿಗರಿಗೆ ಮತ್ತು ನಿಮ್ಮ ಟ್ರಸ್ಟ್ ಗೆ ಅಗತ್ಯ ಸಹಾಯ ಸಹಕಾರ ನೀಡುತ್ತೇನೆ. ಮುಂಬರುವ ದಿನಗಳಲ್ಲಿ ಈ ಟ್ರಸ್ಟ್ ಮೂಲಕ ಇಲ್ಲಿನ ಜನತೆಗೆ ಹೆಚ್ಚು ಸಹಾಯ ಲಭಿಸಲಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಶರಣ ಸಾಹಿತ್ಯ ಪರಿಷತ್ ಹಾವೇರಿ ಅಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡಿ, ಬಸವಣ್ಣನವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರ ದಾರಿಯಲ್ಲಿ ನಾವೆಲ್ಲರೂ ಸಾಗಿ ಸಮಾಜವನ್ನು ಮುನ್ನಡೆಸೋಣ ಎಂದರು.
ಈ ಸಂದರ್ಭದಲ್ಲಿ ಶ್ರೀಗುರು ಬಸವ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಸವರಾಜ್ ಇಂಗಳಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದು, ಈ ಸೇವಾ ಟ್ರಸ್ಟ್ ನ ದ್ಯೇಯೋಧ್ಧೇಶಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರದಲ್ಲಿ ಗೋವಾದ ವಿವಿಧ ಭಾಗಗಳಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.