ಪಣಜಿ: ಕಲಂಗುಟ್‍ನ ಕಡಲತೀರದಲ್ಲಿ ಮಂಗಳವಾರ ಬೆಳಗಿನ ಜಾವ ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಎರಡು ಗುಡಿಸಲುಗಳು ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಧಾವಿಸಿ ಬಂದು ಪಕ್ಕದಲ್ಲಿಯೇ ಇದ್ದ ರೆಸ್ಟೊರೆಂಟ್‍ಗಳನ್ನು ಉಳಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಲ್ಲಿ 70 ಲಕ್ಷ ರೂ.ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಡೆದ ಸಂದರ್ಭ ಪ್ರವಾಸಿಗರು ಇರದ ಕಾರಣ ದೊಡ್ಡ ದುರಂತ ತಪ್ಪಿದಂತಾಗಿದೆ.
ರಾಜ್ಯದಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆ, ರಾವಣಫೊಂಡ್ ಮಿಲಿಟರಿ ಕ್ಯಾಂಪ್ ಬಳಿ ಬೆಳಿಗ್ಗೆ ಮನೆ ಮತ್ತು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 50 ಲಕ್ಷ ನಷ್ಟ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿ ಮೂಲಕ ಅಂದಾಜಿಸಲಾಗಿದೆ. ಮೂರು ಅಂಗಡಿಗಳು ಹಾಗೂ ನಾಲ್ಕು ವಾಹನಗಳು ಬೆಂಕಿಗೆ ಆಹುತಿಯಾಗಿವೆ.
ಕಳೆದ ತಿಂಗಳು ಕೂಡ ಕಲಂಗುಟ್ ಕಡಲತೀರದ ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಪಿಲಾರ್ನೆ ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಘಟನೆ ನಡೆದಾಗ ಪ್ರವಾಸಿಗರು ಗುಡಿಸಲಿನಲ್ಲಿ ಕುಳಿತಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಅಗ್ನಿ ಅವಘಡದಲ್ಲಿ 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Related Articles
ಕಲಾಂಗುಟ್-ಬಾಗಾ ಬೀಚ್ ಪ್ರದೇಶದಲ್ಲಿ ಬೆಂಕಿ ನಂದಿಸಲು ಒಂದು ಅಥವಾ ಎರಡು ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ಒದಗಿಸುವಂತೆ ಕಲಾಂಗುಟ್ ಶಾಸಕ ಮೈಕೆಲ್ ಲೋಬೊ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ದೂರದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರಬೇಕಾಗುತ್ತದೆ. ಇದರಿಂದಾಗಿ ಅನಾಹುತ ಹೆಚ್ಚುವ ಸಾಧ್ಯತೆಯಿರುತ್ತದೆ ಎಂದು ಶಾಸಕ ಮೈಕಲ್ ಲೋಬೊ ಅಭಿಪ್ರಾಯಪಟ್ಟಿದ್ದಾರೆ.