Advertisement

Panaji: ನೈಟ್ ಕ್ಲಬ್ ವಿರುದ್ಧ ಗ್ರಾಮಸ್ಥರ ಬೃಹತ್ ಪ್ರತಿಭಟನೆ

12:03 PM Jun 02, 2024 | Team Udayavani |

ಪಣಜಿ: ಗೋವಾದ ಮಾಪ್ಸಾದ ಮುನಂಗವಾಡ-ಅಸ್ಗಾಂವ್‍ನಲ್ಲಿ ಯೋಜಿತ ನೈಟ್ ಕ್ಲಬ್ ವಿರುದ್ಧ ಗ್ರಾಮಸ್ಥರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ನಿವಾಸಿಗಳು ನೈಟ್ ಕ್ಲಬ್ ಎದುರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲು ಯತ್ನಿಸಿದರು.

Advertisement

ಶುಕ್ರವಾರ ತಡರಾತ್ರಿ ಶ್ರೀ ಬರಸಖಲೇಶ್ವರ ದೇವಸ್ಥಾನದಲ್ಲಿ ಅಸ್ಗಾಂವ್-ಬಡೆ ನಾಗರಿಕ ಕ್ರಿಯಾ ಸಮಿತಿಯ ಧ್ವಜದ ಅಡಿಯಲ್ಲಿ ಎಲ್ಲಾ ಗ್ರಾಮಸ್ಥರು ಜಮಾಯಿಸಿದರು.

ದೇವಸ್ಥಾನದಿಂದ ಆರಂಭವಾದ ಮೇಣದ ಬತ್ತಿ ಮೆರವಣಿಗೆಯು ಯೋಜಿತ ನೈಟ್ ಕ್ಲಬ್ ಸ್ಥಳದಲ್ಲಿ ಸಮಾರೋಪಗೊಂಡಿತು. ಕೈಯಲ್ಲಿ ಮೇಣದ ಬತ್ತಿಗಳು ಮತ್ತು ಕ್ಲಬ್ ವಿರುದ್ಧ ಫಲಕಗಳನ್ನು ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಅಸಗಾಂವದಲ್ಲಿ ನೈಟ್ ಕ್ಲಬ್ ಸ್ಥಾಪನೆಯಾದರೆ ಗ್ರಾಮದ ಶಾಂತಿ ಕದಡುತ್ತದೆ. ಯುವಕರು ಕೆಟ್ಟ ದಾರಿ ಹಿಡಿಯುತ್ತಾರೆ. ರಾತ್ರಿ ವೇಳೆ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ವಾಹನ ಚಲಾಯಿಸುವ ಕ್ಲಬ್ ಗ್ರಾಹಕರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಮದ್ಯದ ಪ್ರಭಾವದಲ್ಲಿ ಇತ್ತೀಚೆಗಷ್ಟೇ ಪುಣೆಯಲ್ಲಿ ವೇಗವಾಗಿ ಬಂದ ಕಾರು ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದಿತ್ತು. ಇಲ್ಲೂ ಇದೇ ರೀತಿ ಆಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

Advertisement

ಇದೇ ವೇಳೆ ಸ್ಥಳೀಯ ಶಾಸಕರು ಜನರ ಪರ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಈ ಹೋರಾಟದಲ್ಲಿ ಅಸ್ಗಾಂವ್ ನಾಗರಿಕರು ಮಾತ್ರವಲ್ಲದೆ ನೆರೆಯ ಶಿವೋಲಿ, ಹಣಜುನ್, ಶಪೋರಾ ಜನರು ಸಹ ನಮಗೆ ಬೆಂಬಲ ನೀಡಿದ್ದಾರೆ ಎಂದರು.

ಈ ನೈಟ್ ಕ್ಲಬ್ ಸಂಸ್ಕೃತಿಯ ವಿರುದ್ಧ ನೆರೆಹೊರೆಯವರು ಒಗ್ಗೂಡಿದ್ದಾರೆ. ಏಕೆಂದರೆ, ಈ ಸಂಸ್ಕೃತಿಯು ಗ್ರಾಮದ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕದಡುತ್ತದೆ. ಗ್ರಾಮದ ಶಾಂತಿ ಕದಡಲು ನಾವು ಬಯಸುವುದಿಲ್ಲ. ಗ್ರಾಮಕ್ಕೆ ಈಗಾಗಲೇ ಹೆಚ್ಚಿನ ಸಂಖ್ಯೆಯ ರೆಸ್ಟೋರೆಂಟ್‍ಗಳು ಮತ್ತು ಪಬ್‍ಗಳು ಬಂದಿವೆ. ಇದರಿಂದ ಗ್ರಾಮದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಜನರು ರಸ್ತೆಯಲ್ಲಿ ನಡೆದಾಡಲು ಕಷ್ಟವಾಗುತ್ತಿದೆ ಎಂದು ಇಸ್ಟೇನ್ ಬ್ಯಾರೆಟೊ, (ಅಸ್ಗಾಂವ್ ಸ್ಥಳೀಯ ಹೋರಾಟಗಾರ) ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಸಂದರ್ಭದಲ್ಲೂ ಗ್ರಾಮದಲ್ಲಿ ನೈಟ್ ಕ್ಲಬ್ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next