ಪಣಜಿ: ಭಾರೀ ಮಳೆಯಿಂದಾಗಿ ಜಲಪಾತಗಳ ವೀಕ್ಷಣೆಗೆ ಹೋಗುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಒಂದು ತಿಂಗಳ ಹಿಂದೆ ಗೋವಾ ರಾಜ್ಯ ಅರಣ್ಯ ಇಲಾಖೆ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ತೆರಳಲು ನಿಷೇಧ ಹೇರಿತ್ತು.
ಸದ್ಯ ಮಳೆ ಇಳಿಮುಖವಾಗಿರುವುದರಿಂದ ಜಲಪಾತಗಳಲ್ಲಿ ನೀರಿನ ರಭಸ ಕಡಿಮೆಯಾಗಿದೆ. ಹೀಗಾಗಿ ಜಲಪಾತಗಳಿಗೆ ತೆರಳುವವರಿಗೆ ರಾಜ್ಯ ಅರಣ್ಯ ಇಲಾಖೆ ನಿರ್ಬಂಧವನ್ನು ಹಿಂಪದೆಡಿದೆ. ಇದರಿಂದಾಗಿ ಗೋವಾದ ಸುಪ್ರಸಿದ್ಧ ಜಲಪಾತ ವೀಕ್ದಣೆಗೆ ತೆರಳಲು ಪ್ರವಾಸಿಗರಿಗೆ ಅವಕಾಶ ಲಭಿಸಿದಂತಾಗಿದೆ.
1 ತಿಂಗಳ ಹಿಂದೆ ಗೋವಾದ ಪಾಳಿ-ಸತ್ತರಿಯಲ್ಲಿ ಜಲಪಾತಕ್ಕೆ ಹೋದ ಪ್ರವಾಸಿಗರು ಸಿಕ್ಕಿಬಿದ್ದರು. ಅವರು ನದಿ ದಾಟಲು ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಬೇಕಾಯಿತು. ಅದೇ ರೀತಿ ಜಲಪಾತದಲ್ಲಿ ಉಕ್ಕಿ ಹರಿಯುವ ನೀರು ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಎಲ್ಲ ಜಲಪಾತಗಳಿಗೂ ಅರಣ್ಯ ಇಲಾಖೆ ನಿಷೇಧ ಹೇರಿತ್ತು.
ಹಾಗಾಗಿ ಜಲಪಾತಕ್ಕೆ ಯಾರೂ ಹೋಗದಂತೆ ಸೂಚನೆ ನೀಡಲಾಗಿತ್ತು. ಜಲಪಾತಕ್ಕೆ ಹೋದರೆ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಎಚ್ಚರಿಕೆಯ ಆದೇಶ ನೀಡಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಮಳೆ ನಿಂತಿದ್ದರಿಂದ ಜಲಪಾತದ ನೀರಿನ ತೀವ್ರತೆ ಕಡಿಮೆಯಾಗಿದೆ. ಇದರಿಂದಾಗಿ ಅರಣ್ಯ ಇಲಾಖೆ ವಿಧಿಸಿದ್ದ ನಿಷೇಧಾಜ್ಞೆ ತೆರವಾಗಿದೆ. ಆದರೆ, ಜಲಪಾತಕ್ಕೆ ತೆರಳಲು ಪ್ರವಾಸಿಗರು ಅಗತ್ಯ ಮುನ್ನೆಚರಿಕೆಗಳನ್ನು ವಹಿಸುವಂತೆ ಸೂಚನೆ ನೀಡಲಾಗಿದೆ.
ಜಲಪಾತದ ಸ್ಥಳದಲ್ಲಿ ಯಾವುದೇ ಮಾಲಿನ್ಯ ಮಾಡಬಾರದು ಎಂದು ಸೂಚಿಸಲಾಗಿದೆ. ಏಕೆಂದರೆ ಹೆಚ್ಚಿನ ಜಲಪಾತಗಳು ಅಭಯಾರಣ್ಯ ಪ್ರದೇಶದಲ್ಲಿವೆ. ಅಭಯಾರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದ್ದು, ತ್ಯಾಜ್ಯ ಎಸೆಯದಂತೆ ಎಚ್ಚರ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.
ಈ ಮೂಲಕ ಗೋವಾದ ಜಗತ್ಪ್ರಸಿದ್ಧ ದೂಧ್ ಸಾಗರ್ ಜಲಪಾತ ವೀಕ್ಷಣೆಗೆ ಕೂಡ ಪ್ರವಾಸಿರಿಗೆ ಅನುಮತಿ ಲಭಿಸಿದಂತಾಗಿದೆ. ಆದರೆ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.