Advertisement

ಪಂಪಾಸರೋವರ: ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಪ್ರಕರಣ; ಸ್ಥಳೀಯರ ಆಕ್ರೋಶ

06:16 PM May 27, 2022 | Team Udayavani |

ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಪಂಪಾಸರೋವರದ ಜಯಲಕ್ಷ್ಮಿ ಗರ್ಭಗುಡಿಯ ಮೂರ್ತಿ ಮತ್ತು ಶ್ರೀ ಚಕ್ರವನ್ನು ಸ್ಥಳಾಂತರ ಮಾಡಿದ ಪ್ರಕರಣದ ಹಿನ್ನೆಲೆ ಶುಕ್ರವಾರ ಪಂಪಾಸರೋವರಕ್ಕೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ಧರಾಮೇಶ, ತಹಶೀಲ್ದಾರ್ ಯು. ನಾಗರಾಜ, ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಗರ್ಭಗುಡಿ ಅಗೆದಿರುವ ಮತ್ತು ಮೂರ್ತಿ ಸ್ಥಳಾಂತರ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ಗರ್ಭಗುಡಿಯನ್ನು ಅಗೆದು ಧ್ವಂಸ ಮಾಡಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿಯವರು ಪಂಪಾ ಸರೋವರದ ಜೀರ್ಣೋದ್ಧಾರ ಮಾಡುವ ಕುರಿತು ಯಾರಿಗೂ ಆಕ್ಷೇಪವಿಲ್ಲ. ಆದರೆ ಜಯಲಕ್ಷ್ಮಿ ಗುಡಿ ಅಗೆದು ಗರ್ಭಗುಡಿಯ ಶ್ರೀಚಕ್ರ ಮತ್ತು ಅದರ ಮೇಲಿನ ಜಯಲಕ್ಷ್ಮಿ ಮೂರ್ತಿಯನ್ನ ಸ್ಥಳಾಂತರ ಮಾಡಿದ್ದು ತಪ್ಪು. ಈ ಸಂದರ್ಭದಲ್ಲಿ ಶ್ರೀ ಚಕ್ರ ಜಖಂಗೊಂಡಿದ್ದು ಸ್ಥಳೀಯರು ಮತ್ತು ಪಂಪಾ ಸರೋವರದ ಭಕ್ತರಿಗೆ ಇದರಿಂದ ಆಘಾತವುಂಟಾಗಿದೆ.

ಸ್ಥಳದಲ್ಲಿ ಇರಬೇಕಿದ್ದ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗೈರಾಗಿದ್ದು ಇದರಿಂದ ಕೆಲಸ ಮಾಡುವವರು ನಿರ್ಲಕ್ಷ್ಯ ವಹಿಸಿದ್ದಾರೆ.

ಕರ್ತವ್ಯಕ್ಕೆ ಗೈರಾಗಿ ಈ ಪ್ರಕರಣಕ್ಕೆ ಕಾರಣವಾಗಿರುವ ಪ್ರಾಚ್ಯವಸ್ತು, ಪುರಾತತ್ವ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮೂರ್ತಿಯನ್ನು ಆದಷ್ಟು ಬೇಗನೆ ಪ್ರತಿಷ್ಠಾಪಿಸಿ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೇರಿದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪಂಪಾ ಸರೋವರ ಜೀರ್ಣೋದ್ಧಾರ ಮಾಡಲು ಯಾರೂ ಆಕ್ಷೇಪವೆತ್ತಿಲ್ಲ. ಆದರೆ ಜಯಲಕ್ಷ್ಮಿ ದೇಗುಲದ ಗರ್ಭಗುಡಿಯಲ್ಲಿದ್ದ ಶ್ರೀಚಕ್ರ ಮತ್ತು ಜಯಲಕ್ಷ್ಮಿ ಮೂರ್ತಿಯನ್ನು ಬೇರೆಡೆ ಸ್ಥಳಾಂತರಿಸಿದ್ದು, ಸ್ಥಳೀಯರಿಗೆ ಆಘಾತವುಂಟು ಮಾಡಿದೆ. ಇದರಿಂದ ಈ ತಪ್ಪು ಮಾಡಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಜರಗಿಸಲಾಗುತ್ತದೆ. ಈ ಕುರಿತು ಈಗಾಗಲೇ ಪುರಾತತ್ವ ಇಲಾಖೆಯ ಮೇಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.

Advertisement

ಸಚಿವ ಬಿ.ಶ್ರೀರಾಮುಲು ಆನೆಗೊಂದಿ ಭಾಗದ ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವವರು ಮಾಡಿದ ತಪ್ಪಿನಿಂದ ಅವರಿಗೇ ಮುಜುಗರವಾಗಿದೆ.  ಕಾಮಗಾರಿ ಸ್ಥಳದಲ್ಲಿ ಇರದ  ಪುರತತ್ವ ಇಲಾಖೆ ಅಧಿಕಾರಿಗಳು ಮತ್ತು ಹವಾಮಾ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಮೇಶ ಸ್ಥಳೀಯರೊಡನೆ ವಾಗ್ವಾದ ನಡೆಸಿದ್ದರಿಂದ ಜನರು ಅವರನ್ನು ತರಾಟೆಗೆ ತೆಗೆದುಕೊಂಡರು

ಆನೆಗೊಂದಿ ಭಾಗದ ಅಭಿವೃದ್ಧಿ ಪ್ರಾಧಿಕಾರದಿಂದ ಹಿನ್ನಡೆಯಾಗುತ್ತಿದೆ. ಐತಿಹಾಸಿಕ ಪ್ರಸಿದ್ಧ ಪಂಪಾ ಸರೋವರದಲ್ಲಿ ಜಯಲಕ್ಷ್ಮಿ ಗರ್ಭಗುಡಿಯ ತ್ರಿಚಕ್ರ ಮತ್ತು ಮೂರ್ತಿಯನ್ನು ಬೇರೆಡೆ ಸ್ಥಳಾಂತರ ಮಾಡಿದರೂ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಕಡೆ ಬಂದಿಲ್ಲ. ಶಾಸಕ ಪರಣ್ಣ ಮುನವಳ್ಳಿ ಬೆಳಿಗ್ಗೆ ಆಗಮಿಸಿ 3 ತಾಸು ಕಾದು ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾದ ಅನಿವಾರ್ಯತೆ ಬಂದಿದೆ. ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮನುವಳ್ಳಿ ಮಧ್ಯಪ್ರವೇಶ ಮಾಡಿ ಜನರನ್ನು ಸಮಾಧಾನ ಮಾಡಿದರು.

ಆನೆಗೊಂದಿ ರಾಜಮನೆತನದ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿ, ಪಂಪಾಸರೋವರ, ಆನೆಗೊಂದಿ ಭಾಗದ ಜನರ ಭಾವನೆಗಳ ಜತೆಗೆ ಬರುತ್ತಿದೆ ಆದ್ದರಿಂದ ಜಯಲಕ್ಷ್ಮಿ  ಗರ್ಭಗುಡಿಯ ಶ್ರೀಚಕ್ರ ಭಿನ್ನವಾಗಿರುವ ಬಗ್ಗೆ ಜನರು ಮಾಹಿತಿ ನೀಡಿದ್ದಾರೆ. ತಪ್ಪು ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದರಾಮ ಸ್ವಾಮಿ, ಕೆಲೋಜಿ ಸಂತೋಷ್, ಬಿಜೆಪಿ ಮುಖಂಡರಾದ ಎಚ್. ಸಿ. ಯಾದವ್, ಗೌರೀಶ್ ಬಾಗೋಡಿ, ಆನೆಗೊಂದಿ ಗ್ರಾ ಪಂ ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ, ಚಂದ್ರಶೇಖರ್ ಸುಂಕದ್, ಹರಿಹರ ದೇವರಾಯ, ತಹಶೀಲ್ದಾರ್ ಯು. ನಾಗರಾಜ, ಬಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ಸಿಪಿಐ ಚಿಕ್ಕೋಡಿ, ಕಂದಾಯಾಧಿಕಾರಿ ಹನುಮಂತಪ್ಪ, ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ಮಾಲಾ, ಸಂಘ ಪರಿವಾರದ ಮುಖಂಡರಾದ ಶಿವು ಅರಿಕೇರಿ, ಅಯ್ಯನಗೌಡ, ನೀಲಕಂಠ  ನಾಗ್ ಶೆಟ್ಟಿ, ಸುಭಾಸ್ ಸಾದಾ ವಿನಯ್ ಪಾಟೀಲ್ ಸ್ಥಳೀಯರಾದ ಗೋಪಿ, ಸುನೀಲ್, ಬಾಳೇಶ, ಪುಟ್ಟು, ನೀಲಪ್ಪ ಸೇರಿ ಆನೆಗೊಂದಿ ಮತ್ತು ಸಾಣಾಪುರ, ಮಲ್ಲಾಪುರ, ಸಂಗಾಪುರ ಗ್ರಾ ಪಂ. ಸದಸ್ಯರು ಹಾಗೂ ಸ್ಥಳೀಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next