Advertisement

ಟ್ರೇಲರ್‌ನಲ್ಲಿ ಪಂಪನ ಆಗಮನ

12:51 PM Nov 06, 2020 | Suhan S |

ಹಿರಿಯ ನಿರ್ದೇಶಕ ಎಸ್‌. ಮಹೇಂದರ್‌ ನಿರ್ದೇಶನದ ಹೊಸಚಿತ್ರ “ಪಂಪ’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ “ಪಂಪ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ನಿಧಾನವಾಗಿ ಚಿತ್ರದ ಪ್ರಚಾರಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

“ಕೀ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ವಿ. ಲಕ್ಷ್ಮೀ ಕಾಂತ್‌ (ಕಾಲವಿ) “ಪಂಪ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಇತ್ತೀಚೆಗೆ “ಪಂಪ’ ಚಿತ್ರದ ಮೊದಲ ಟ್ರೇಲರ್‌ ಟೋಟಲ್‌ಕನ್ನಡ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಸಸ್ಪೆನ್ಸ್‌ಕಂಕ್ರೈಂಕಥಾಹಂದರ ಹೊಂದಿರುವ “ಪಂಪ’ ಚಿತ್ರದ ಟ್ರೇಲರ್‌ ನೋಡುಗರ ಗಮನ ಸೆಳೆಯುತ್ತಿದ್ದು, ಟ್ರೇಲರ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದೇ ಖುಷಿಯಲ್ಲಿರುವ ಚಿತ್ರತಂಡ ಶೀಘ್ರದಲ್ಲಿಯೇ “ಪಂಪ’ನನ್ನು ತೆರೆಗೆ ತರುವ ಯೋಚನೆಯಲ್ಲಿದೆ. ಇನ್ನು ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ವಿ. ಲಕ್ಷ್ಮೀಕಾಂತ್‌, “ಇದೊಂದು ಅಪ್ಪಟ ಕನ್ನಡದ ಕುರಿತಾಗಿರುವ ಚಿತ್ರ. ಚಿತ್ರದಲ್ಲಿ ಭಾಷೆ, ಅಭಿಮಾನ, ಪ್ರೀತಿ, ಹೋರಾಟ ಹೀಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಸುಮಾರು ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ “ಪಂಪ’ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ಆದರೆ ಕೋವಿಡ್ ಲಾಕ್‌ಡೌನ್‌ನಿಂದಾಗಿ ಚಿತ್ರದ ಬಿಡುಗಡೆಯನ್ನು ಕೆಲಕಾಲ ಮುಂದೂಡಲಾಗಿತ್ತು. ಈಗ ಥಿಯೇಟರ್‌-ಮಲ್ಟಿಪ್ಲೆಕ್ಸ್‌ಗಳು ತೆರೆದಿದ್ದರಿಂದ, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಯೋಜಿಸುತ್ತಿದ್ದೇವೆ’ ಎನ್ನುತ್ತಾರೆ.

ಚಿತ್ರದಲ್ಲಿ ಕೀರ್ತಿ ಭಾನು, ಸಂಗೀತಾ, ರಾಘವ್‌ ನಾಯಕ್‌, ಅರವಿಂದ್‌, ಆದಿತ್ಯ ಶೆಟ್ಟಿ, ಭಾವನಾ ಭಟ್‌, ಶ್ರೀನಿವಾಸ ಪ್ರಭು, ರವಿ ಭಟ್‌, ಪೃಥ್ವಿರಾಜ್‌, ಚಿಕ್ಕಹೆಜ್ಜಾಜಿ ಮಹಾದೇವ್‌, ರೇಣುಕಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಹಂಸಲೇಖ ಸಾಹಿತ್ಯ – ಸಂಗೀತವಿದೆ. ಚಿತ್ರಕ್ಕೆ ರಮೇಶ್‌ ಬಾಬು ಛಾಯಾಗ್ರಹಣ, ಮೋಹನ್‌ಕಾಮಾಕ್ಷಿ ಸಂಕಲನವಿದೆ.­

ನಾಲ್ಕು ದಿಕ್ಕುಗಳತ್ತ ಹೊಸಬರ ಚಿತ್ತ :

Advertisement

ಅನೇಕರು ತಮ್ಮ ಚಿತ್ರಗಳಿಗೆ ಕಥೆಗೆ, ಪಾತ್ರಕ್ಕೆ ಹೊಂದುವಂಥ ಹೆಸರನ್ನು ತಮ್ಮ ಚಿತ್ರಕ್ಕೆ ಇಡುತ್ತಾರೆ. ಆದರೆ ಇಲ್ಲೊಂದು ಹೊಸಬರ ತಂಡ ತಮ್ಮ ಚಿತ್ರಕ್ಕೆ 4 (ನಾಲ್ಕು) ಎಂದು ಹೆಸರಿಟ್ಟಿದೆ. ಅಂದಹಾಗೆ, ಇಂಥದ್ದೊಂದು ಹೆಸರು ಇಡೋದಕ್ಕೂ ಬಲವಾದ ಕಾರಣವಿದೆಯಂತೆ. ಅದೇನೆಂದರೆ, ಇಡೀ ಚಿತ್ರದಲ್ಲಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎಂಬ ನಾಲ್ಕು ದಿಕ್ಕುಗಳೇ ಮುಖ್ಯ ಪಾತ್ರಗಳು. ಹೀಗಾಗಿ ಈ ನಾಲ್ಕು ದಿಕ್ಕುಗಳನ್ನು ಸೂಚಿಸುವ ಸಲುವಾಗಿ ಚಿತ್ರತಂಡ, ತಮ್ಮ ಚಿತ್ರಕ್ಕೆ “4′ (ನಾಲ್ಕು) ಎಂದು ಹೆಸರಿಟ್ಟಿದೆ.

ಈ ಹಿಂದೆ ಸಾಹಸಸಿಂಹ ವಿಷ್ಣವರ್ಧನ್‌ ಅಭಿನಯದ “ವಿಷ್ಣು ಸೇನಾ’ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿ ಕೊಂಡಿದ್ದ, ಆನಂತ “ಕಿಡಿ’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ಭುವನ್‌ ಚಂದ್ರ, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಲ್ಕು ದಿಕ್ಕುಗಳನ್ನು ಪ್ರತಿನಿಧಿಸುವ, ವ್ಯಾಮೋಹ, ಅಧಿಕಾರ, ಸ್ನೇಹ, ಪ್ರೀತಿ ಎಂಬ ನಾಲ್ಕು ಸಂಗತಿಗಳನ್ನು ಪ್ರತಿಬಿಂಬಿಸುವ ನಾಲ್ಕು ಮುಖ್ಯ ಪಾತ್ರಗಳು ಚಿತ್ರದಲ್ಲಿದ್ದು, ಥ್ರಿಲ್ಲರ್‌ ಶೈಲಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. “ಕನ್ನಡ ಪ್ರೇಕ್ಷಕರಿಗೆ ತೀರಾ ಹೊಸದೆನ್ನುವ ಕಥೆ ಇದರಲ್ಲಿದ್ದು, ಈ ವರೆಗೆ ಯಾರೂ ಮಾಡಿರದ ಹೊಸ ಪ್ರಯೋಗವನ್ನು ಈ ಚಿತ್ರದಲ್ಲಿ ತೆರೆಮೇಲೆ ತರುತ್ತಿದ್ದೇವೆ. ಲವ್‌,ಕ್ರೈಂ, ಸಸ್ಪೆನ್ಸ್‌, ಥ್ರಿಲ್ಲರ್‌ ಹೀಗೆ ಎಲ್ಲ ಅಂಶಗಳೂ ಈ ಕಥೆಯಲ್ಲಿದೆ ಎನ್ನುವುದು ಚಿತ್ರದ ನಿರ್ದೇಶಕ ಅಭಿ ಅವರ ವಿವರಣೆ.

ಚಿತ್ರದಲ್ಲಿ ಭುವನ್‌ ಚಂದ್ರ ಅವರೊಂದಿಗೆ, ದಿಶಾ ಪಾಂಡೆ, ಸಂಪತ್‌ಕುಮಾರ್‌, ಅರುಣ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಪೌಲ್‌ ಮುಸಾಸಿಜಿ ಛಾಯಾಗ್ರಹಣ, ಶಿವಪ್ರಸಾದ್‌ ಯಾದವ್‌ ಸಂಕಲನವಿದೆ. “ಎಸ್‌ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಬಿ.ಜಿ. ಹೇಮಾವತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಮಂಗಳೂರಿನ ಸುತ್ತಮುತ್ತ ಚಿತ್ರದ ಮೊದಲ ಹಂತದ ಶೂಟಿಂಗ್‌ ಮುಗಿದಿದ್ದು, ಬೆಂಗಳೂರಿನಲ್ಲಿ ಬಾಕಿಯಿರುವ ಚಿತ್ರೀಕರಣ ನಡೆಯಲಿದೆ.­

Advertisement

Udayavani is now on Telegram. Click here to join our channel and stay updated with the latest news.

Next