ಗಂಗಾವತಿ: ಪಂಪಸರೋವರ ಹಾಗೂ ವಾಲೀಕಿಲ್ಲಾ ಪುರಾತನ ದೇಗುಲಗಳನ್ನು ವೈಯಕ್ತಿಕ ಹಣದಲ್ಲಿ ಜಿರ್ಣೋದ್ಧಾರ ಮಾಡುತ್ತಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಕೆಲವರು ತೇಜೋವಧೆ ಮಾಡುವ ಷಡ್ಯಂತ್ರ ನಡೆಸುತ್ತಿದ್ದು ಇದನ್ನು ವಾಲ್ಮೀಕಿ ನಾಯಕ ಸಮಾಜ ಸಹಿಸುವುದಿಲ್ಲ ಎಂದು ನಾಯಕ ಸಮಾಜದ ಮುಖಂಡರಾದ ಜೋಗದ ಹನುಮಂತಪ್ಪ, ಜೋಗದ ನಾರಾಯಣಪ್ಪ ಹಾಗೂ ಪಂಪಣ್ಣ ನಾಯಕ ಎಚ್ಚರಿಸಿದ್ದಾರೆ.
ಅವರು ಇತಿಹಾಸ ಪ್ರಸಿದ್ಧ ಪಂಪಾಸರೋವರಕ್ಕೆ ನಾಯಕ ಸಮಾಜದ ಮುಖಂಡರ ನಿಯೋಗದಲ್ಲಿ ತೆರಳಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪವಿತ್ರ ಪಂಪಾ ಸರೋವರ ಹಾಗೂ ಜಯಲಕ್ಷ್ಮಿ ದೇಗುಲ ಸಂಕೀರ್ಣದ ಜೀರ್ಣೋದ್ಧಾರ ಕಾನೂನಾತ್ಮಕವಾಗಿ, ಶಾಸ್ತ್ರೋಕ್ತವಾಗಿ , ಪುರಾತತ್ವ ಇಲಾಖೆಯ ನಿಬಂಧನೆಗಳಂತೆ ಅತ್ಯಂತ ಕ್ರಮಬದ್ಧವಾಗಿ ನಡೆಯುತ್ತಿರುವ ಕೆಲಸವಾಗಿದೆ. ಪುರಾಣ, ಮತ್ತು ಇತಿಹಾಸ ಗತ ವೈಭವಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದು – ಸಂರಕ್ಷಣಾ ತಜ್ಞರಿಂದ ಸಂರಕ್ಷಣಾ ಕೆಲಸ ನಡೆಯುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲೇ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ. ಸಂಬಂಧಿಸಿದ ದೇಗುಲದ ಸಮಿತಿ ಸದಸ್ಯರು, ಗ್ರಾಮಸ್ಥರ ಅನುಮತಿ ಪಡೆದ ನಂತರವೇ ಕೆಲಸ ಆರಂಭ ಆಗಿದೆ. ಪ್ರತಿನಿತ್ಯ ಕಂದಾಯ ಅಧಿಕಾರಿಯವರ ಮೇಲ್ವಿಚಾರಣೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ, ಮೇಲ್ವಿಚಾರಣೆಯಲ್ಲೇ ಸಂರಕ್ಷಣಾ ಕೆಲಸ ನಡೆಯುತ್ತಿದೆ.
ಈ ಕಾಮಗಾರಿಯ ಭಾಗವಾಗಿ ಶಿಥಿಲಗೊಂಡಿರುವ ಜಯಲಕ್ಷ್ಮೀ ದೇವಸ್ಥಾನದ ಸಂರಕ್ಷಣಾ ಕೆಲಸವೂ ಆರಂಭವಾಗಿದ್ದು, ಇದೀಗ ಇದರ ಸುತ್ತ ವಿವಾದ ಸೃಷ್ಟಿಸುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಮೊದಲಿಗೆ ದೇಗುಲದ ಸಂರಕ್ಷಣಾ ಕೆಲಸದಲ್ಲಿ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕೆಲಸವನ್ನು ಆರಂಭಿಸಲಾಗಿದೆ. ಈ ಕುರಿತ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿರುತ್ತವೆ. ಇಲ್ಲಿ ಯಾವುದೇ ದೇವಸ್ಥಾನದ ಧ್ವಂಸ ಆಗಿಲ್ಲ. ಸಂರಕ್ಷಣೆಯ ಭಾಗವಾಗಿ ಪ್ರತಿ ಕಂಬವನ್ನು ಬಿಚ್ಚಿ ಸಂಖ್ಯೆ ನೀಡಿ, ಮತ್ತೆ ಅವುಗಳನ್ನೇ ಜೋಡಿಸಲಾಗುತ್ತಿದೆ. ಜಯಲಕ್ಷ್ಮಿ ದೇಗುಲಕ್ಕೆ ಯಾವುದೇ ಧಕ್ಕೆ ಬಾರದಂತೆ ಮಾರ್ಚ್ನಲ್ಲೇ ಶಾಸ್ತ್ರೋಕ್ತವಾಗಿ ಹೋಮ-ಹವನಗಳನ್ನ ನೆರವೇರಿಸಿ, ಕಲಾಕರ್ಷಣೆ ಪೂಜೆ ನೆರವೇರಿಸಿ, ಕಲಶಕ್ಕೆ ತಾಯಿಯ ಶಕ್ತಿ ಧಾರೆ ಎರೆದು ನಿತ್ಯ ಪೂಜೆ ನೆರವೇರಿಸಲಾಗುತ್ತಿದೆ.
ಇದನ್ನೂ ಓದಿ : ಅಮೆರಿಕದಲ್ಲಿದ್ದಾಗಲೇ ಗಾಂಜಾ ಸೇವನೆ; ಎನ್‌ಸಿಬಿಗೆ ಆರ್ಯನ್ ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖ
ತಾಯಿಯನ್ನು ನವಧಾನ್ಯಗಳಲ್ಲಿ ಇರಿಸಲಾಗಿದೆ. ಯಾವುದೇ ಮೂರ್ತಿಗಳನ್ನಾಗಲಿ, ಶ್ರೀಚಕ್ರವನ್ನಾಗಲಿ ಸ್ಥಳಾಂತರಗೊಳಿಸಲಾಗಿಲ್ಲ. ಕೆಲವರು ಬಂದಿದ್ದರು, ಸಿಸಿಟಿವಿ ಕೆಡಿಸಲಾಗಿದೆ ಎಂದೆಲ್ಲ ಸುಳ್ಳು ಹೇಳಲಾಗುತ್ತಿದೆ. ಇಂದಿಗೂ ಸಿಸಿಟಿವಿ ಗಳು ಕೆಲಸ ಮಾಡುತ್ತಿದ್ದು, ರಾತ್ರಿ 7ರ ನಂತರ ಯಾವುದೇ ಸಂರಕ್ಷಣಾ ಕೆಲಸ ನಡೆಯುತ್ತಿಲ್ಲ. ಇದನ್ನು ಯಾರಾದರೂ ಪರಿಶೀಲಿಸಬಹುದು. ನಿಧಿಗಾಗಿ ರಾತ್ರಿ ಬಂದಿದ್ದರು ಎನ್ನುವುದು ಶುದ್ಧ ಸುಳ್ಳು, ಆಧಾರ ರಹಿತ ಹಾಗೂ ಕಾಲ್ಪನಿಕ ಕಥೆಯಾಗಿದೆ. ಇದು ಪಟ್ಟಭದ್ರ ಹಿತಾಸಕ್ತಿಗಳ ಸೃಷ್ಟಿಯಾಗಿದ್ದು ಇದನ್ನು ನಂಬಬಾರದು, ಸಚಿವ ಬಿ.ಶ್ರೀರಾಮುಲು ಪಂಪಾಸರೋವರ ಜಿರ್ಣೋದ್ಧಾರ ಕಾರ್ಯ ಮುಂದುವರೆಸುವಂತೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೋಗದ ನಾರಾಯಣಪ್ಪ, ಜೋಗದ ಹನುಮಂತಪ್ಪ, ಜಿ.ಬಸಪ್ಪನಾಯಕ, ಚೌಡ್ಕಿ ರಮೇಶ, ಹೊಸಮಲಿ ಮಲ್ಲೇಶಪ್ಪ, ಚೌಡ್ಕಿ ಹನುಮಂತಪ್ಪ, ಶರಣಪ್ಪ, ಕೃಷ್ಣ ನಾಯಕ, ಕನಕಾಚಲ, ಮಂಜುನಾಥ ನಾಯಕ ಸೇರಿ ಅನೇಕರಿದ್ದರು.