Advertisement
ದೂರದಲೊಂದು ಕಾಡಿತ್ತು. ಕಾಡಲಿ ಒಂದು ಮನೆಯಿತ್ತು… ಅಲ್ಲೊಂದು ಸಣ್ಣ ಕೊಳದ ಪಕ್ಕದಲ್ಲಿ ಅಲೆಗಳನ್ನೆಬ್ಬಿಸಿ ಓಲಾಡುವ, ಜುಳುಜುಳು ನಾದಗೈಯ್ಯುವ ನದಿ. ಆ ನೀರ್ಗನ್ನಡಿಯಲ್ಲಿ ಮುಖ ನೋಡುತ್ತಾ, ತಂಪಾಗುವ ವನ್ಯಮೃಗಗಳು; ರೆಂಬೆಯ ಮರೆಯಲ್ಲಿ, ಹಸಿರೆಲೆಯ ಕಿರೀಟ ಧರಿಸಿ, ಹಾಡುವ ಬಣ್ಣದ ಹಕ್ಕಿಗಳು… ಮುಗಿಲು ಮುತ್ತಿಕ್ಕುವ ಹೆಮ್ಮರಗಳ ಕೆಳಗೆ, ತರಗೆಲೆಯ ಮೇಲೆ ಹಗೂರ ಹೆಜ್ಜೆ ಇಡುತ್ತಾ, ಓಡಾಡುವ ದಂಪತಿ… 25 ವರ್ಷಗಳಿಂದ, ಕೊಡಗಿನ ಬ್ರಹ್ಮಗಿರಿಯ ದಟ್ಟಾರಣ್ಯವೇ ಈ ಜೋಡಿಗೆ ಆವಾಸ.
Related Articles
ಕಾಡಿಗೆ ಕಾಲಿಟ್ಟಾಗ…: ಅಂದು ಇಲ್ಲಿಗೆ ಕಾಲಿಟ್ಟಾಗ, ಕಣ್ಮನ ಸೆಳೆಯುವ ವಿಲ್ಲಾ ಕಟ್ಟಬಹುದಿತ್ತು; ಮನೆಯ ಹೆಸರಿನಲ್ಲಿ ದೊಡ್ಡ ಬಿಲ್ಡಿಂಗ್ ಎದ್ದುನಿಲ್ಲಿಸಲು ಕೈಯಲ್ಲಿ ಕಾಸೂ ಇತ್ತು. ಆದರೆ, ಅಂಥ ವಿಲಾಸಿ ಬದುಕು ಪಮೇಲಾ ದಂಪತಿಗೆ ಬೇಡವಾಗಿತ್ತು. ದೊಡ್ಡ ಕಾಡಿನಲ್ಲಿ ಬೆಚ್ಚಗಿರಲು ಪುಟ್ಟ ಗೂಡು ಸಾಕೆನಿಸಿತು. ಸೂರ್ಯ ಇಣುಕುತ್ತಾ, ಕಾಡೊಳಗೂ ಬಂದ. ಸೋಲಾರ್ ದೀಪ ಬೆಳಗಿತು. ರೈತರು ಬಳಸದೆ ಇದ್ದ ಜಮೀನನ್ನು ಸೂಕ್ತ ಹಣ ಕೊಟ್ಟು ಖರೀದಿಸಿ, ಅಭಯಧಾಮ ಸೃಷ್ಟಿಸಿದರು. ಒಂದು ಮರವನ್ನೂ ಕಡಿಯಲಿಲ್ಲ; ದುರುಗುಟ್ಟಿದ ಪ್ರಾಣಿಗಳನ್ನೂ ಓಡಿಸಲಿಲ್ಲ; ಬೇಲಿಯನ್ನೂ ಹಾಕಲಿಲ್ಲ. ಮಳೆ ನೀರು ಕೊಯ್ಲು ಆಯಿತು. ಕಲ್ಲುಭೂಮಿಗೂ ಜೀವಬಂತು. ಮೂರು ಟರ್ಬೈನ್‌ಗಳು ಸಾಕಾಗುವಷ್ಟು ವಿದ್ಯುತ್ ಕೊಟ್ಟವು.
Advertisement
ಯೋಗ, ಧ್ಯಾನ, ಆರಾಮ…: ನಸುಕಿನಲ್ಲಿ ಹಕ್ಕಿಗಳ ಗಿಲಕಿಯೇ ನಿದ್ದೆಯಿಂದ ಎಬ್ಬಿಸುತ್ತದೆ. ಪುಟ್ಟ ಪ್ರಾರ್ಥನೆ, ಧ್ಯಾನದಿಂದ ದಿನಾರಂಭ. ಕಾಡಿನ ತಪ್ಪಲಿನಲ್ಲಿ ಚಾರಣ ಮಾಡುತ್ತಾ, ಕೊಳದಲ್ಲಿರುವ ಜಲಚರಗಳನ್ನು ನೋಡುತ್ತಾ, ನದಿಯ ಜುಳುಜುಳುವಿಗೆ ಕಿವಿಗೊಡುತ್ತಾ ಸೂರ್ಯೋದಯ ವೀಕ್ಷಿಸುವುದು ಇವರ ನಿತ್ಯದ ಭಾಗ್ಯ. ಹಸಿರ ನಡುವೆ ಯೋಗ. ತಿಂಡಿ ಪೂರೈಸಿ, ಕೆಲಸಗಾರರೊಟ್ಟಿಗೆ ಆ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ. ಅವರೊಂದಿಗೆ ತಾವೂ ಆಳಾಗಿ ದುಡಿಯುವ ದೊಡ್ಡ ಮನಸ್ಸು.
ಟೆರೇಸಿನ ಮೇಲೆ ನಿಂತರೆ, ಸೂರ್ಯ ತಪ್ಪಲಿನಿಂದ ಜಾರುವ ಕ್ಷಣಗಳು ಪುಳಕ ಹುಟ್ಟಿಸುತ್ತವೆ. ತಾವೇ ಬೆಳೆದ ತರಕಾರಿ- ದಿನಸಿಯಿಂದ ಅಡುಗೆ ಘಮಗುಟ್ಟುತ್ತದೆ. ಅನಾರೋಗ್ಯ, ಹುಷಾರು ತಪ್ಪುವಿಕೆ- ಇಲ್ಲಿ ನಿಷೇಧಕ್ಕೊಳಪಟ್ಟ ಸಂಗತಿಗಳು. ಒಂದು ಕಾಡಿನಲ್ಲಿ ವನ್ಯಮೃಗಗಳು ಹೇಗೆ ಬದುಕುತ್ತವೋ, ಅಂಥದ್ದೇ ವಾತಾವರಣದ ಮರು ನಿರ್ಮಾಣ ಈ ಸ್ಯಾಂಕ್ಚುರಿಯ ಹೆಗ್ಗಳಿಕೆ. ಸಸ್ಯವನ್ನು ಅವಲಂಬಿಸಿರುವ ಪ್ರಾಣಿಗಳಿಗಾಗಿ, ಅಲ್ಲಲ್ಲಿ ಹಲಸಿನ ಮರಗಳಂಥ ವಿವಿಧ ಕಾಡುಹಣ್ಣಿನ ಮರಗಳನ್ನು ಬೆಳೆಸಲಾಗಿದೆ.
ಕಾಡುಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಹೋಗಿ, ರೈತರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಬಾರದೆಂದು, ಆರಂಭದಲ್ಲಿ ಇಡೀ ಕಾಡನ್ನೇ ಫುಡ್ ಐಲ್ಯಾಂಡ್ ಆಗಿ ರೂಪಿಸಲಾಗಿತ್ತು. ಪ್ರಾಣಿಗಳಿಗೆ ಸಾಯಿ ಸ್ಯಾಂಕ್ಚುರಿ ಜತೆಗೆ ಅಟ್ಯಾಚ್ ಬೆಳೆದಿದ್ದೇ ಈ ಕಾರಣದಿಂದ. ಮಾಂಸಾಹಾರಿ ಪ್ರಾಣಿಗಳು, ಅವುಗಳ ಆಹಾರವನ್ನು ಅವುಗಳೇ ಬೇಟೆಯಾಡಿದವು. “ಪ್ರಾಣಿಗಳಿಂದ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ ಪಮೇಲಾ. ಹೊರ ಪ್ರಪಂಚದಿಂದ ದೂರವುಳಿದು, ಸಕಲ ಖುಷಿಯನ್ನೂ ಕೊಡುತ್ತಿರುವ ಕಾಡೇ ದೊಡ್ಡ ಪ್ರಪಂಚ ಎನ್ನುವ ಭಾವ ಅವರ ಕಣ್ಣಲ್ಲಿತ್ತು.
ಕಾಡಿನ ಸದಸ್ಯರು ನಾವು…-ಅಪರೂಪದ ಸಸ್ಯ, ಮರಗಳು
-ಬಂಗಾಳಿ ಹುಲಿ, ಚಿರತೆ, ಏಷ್ಯಾ ಆನೆಗಳು, ನೀಲಗಿರಿ ಲಂಗೂರ್, ಕಾಡೆಮ್ಮೆ…
-ಪುನುಗು ಬೆಕ್ಕುಗಳು, ಹಾವುಗಳು, ಅಳಿವಿನಂಚಿನಲ್ಲಿರುವ ಮಾರ್ಟಿನ್, ಸಾಂಬಾರ್, ಜಿಂಕೆಗಳು, ಚಿಟ್ಟೆಗಳು…
-305ಕ್ಕಿಂತಲೂ ಹೆಚ್ಚು ಪ್ರಭೇದದ ಹಕ್ಕಿಗಳು… ಸಿಸಿ ಕ್ಯಾಮೆರಾದ ಕಣ್ಗಾವಲು
-16 ಸಿಸಿ ಕ್ಯಾಮೆರಾಗಳನ್ನು ಈ ಕಾಡಿನ ಅಲ್ಲಲ್ಲಿ ಅಳವಡಿಸಲಾಗಿದೆ.
-ಮರಗಳ್ಳರು, ಕಾಡುಪ್ರಾಣಿ ಬೇಟೆಗಾರರು ಅತಿಕ್ರಮವಾಗಿ ಪ್ರವೇಶಿಸಲು ಸಾಧ್ಯವಿಲ್ಲ.
-ಪಮೇಲಾ ದಂಪತಿಯ ಪರಿಸರ ಕಾಳಜಿಗೆ ಅರಣ್ಯ ರಕ್ಷಕರ ಬೆಂಬಲವೂ ಇದೆ. ನಮ್ಮ ಸ್ಯಾಂಕ್ಚುರಿಯಲ್ಲಿ ಎಲ್ಲವನ್ನೂ ಪ್ರಕೃತಿಯೇ ಕೊಡುತ್ತದೆ. ಪ್ರಾಣಿಗಳಿಗೆ ನಾವೇನೂ ವಿಶೇಷವಾಗಿ ಕೊಡುತ್ತಿಲ್ಲ.
-ಪಮೇಲಾ, ನ್ಯೂಜೆರ್ಸಿ ಮೂಲ * ರಜನಿ ಭಟ್