Advertisement
ಜಿಲ್ಲೆಯಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ರವಿವಾರ ಪಾಮ್ ಸಂಡೇ (ಗರಿಗಳ ಹಬ್ಬ) ಆಚರಿಸಲಾಯಿತು. ಕಾಸರಗೋಡಿನ ಕಯ್ನಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ವಿಧಿವಿಧಾನಕ್ಕೆ ಧರ್ಮಗುರು ಫಾದರ್ ವಿಕ್ಟರ್ ಡಿ’ಸೋಜಾ ನೇತೃತ್ವ ನೀಡಿದ್ದರು. ಬೇಳ ಶೋಕಮಾತಾ ದೇವಾಲಯ, ಮಂಜೇಶ್ವರ, ಕುಂಬಳೆ, ವರ್ಕಾಡಿ, ಮೀಯಪದವು, ಕಾಸರಗೋಡು, ನಾರಂಪಾಡಿ, ಉಕ್ಕಿನಡ್ಕ, ಮಣಿಯಂ ಪಾರೆ, ತಲಪಾಡಿ ಸೇರಿದಂತೆ ಕಾಸರಗೋಡು ಜಿಲ್ಲೆಯ ಚರ್ಚ್‌ಗಳಲ್ಲಿ ಬಲಿಪೂಜೆ ನೆರವೇರಿತು.
ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ದಿನ ಅಥವಾ ಶುಭ ಶುಕ್ರವಾರದ ಮುಂಚಿನ ರವಿವಾರವನ್ನು ಗರಿಗಳ ರವಿವಾರವಾಗಿ ಕ್ರೈಸ್ತರು ಆಚರಿಸುತ್ತಾರೆ. ಗುರುವಾರ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಗೇರಿದ ದಿನ, ಶನಿವಾರ ರಾತ್ರಿ ಜಾಗರಣೆ ಮತ್ತು ರವಿವಾರ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಆಚರಣೆ- ಇವು ಪವಿತ್ರ ಸಪ್ತಾಹದ ಕಾರ್ಯಕ್ರಮಗಳಾಗಿವೆ. ಮಾ. 29ರಂದು ಯೇಸುವಿನ ಅಂತ್ಯ ಭೋಜನ, 30ರಂದು ಶುಭ ಶುಕ್ರವಾರ (ಗುಡ್ ಫ್ತೈಡೇ), ಎ. 1ರಂದು ಯೇಸು ಕ್ರಿಸ್ತರ ಪುನರುತ್ಥಾನ ದಿನವಾದ ಈಸ್ಟರನ್ನು ಆಚರಿಸಲಾಗುವುದು.