Advertisement

ಪಳ್ಳಿ -ಸೂಡ ಸಂಪರ್ಕ ರಸ್ತೆ ಅವ್ಯವಸ್ಥೆ

08:52 PM Jan 02, 2020 | Sriram |

ಪಳ್ಳಿ: ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾಜ್ಯ ಹೆದ್ದಾರಿಯಿಂದ ಸೂಡ- ಶಿರ್ವವನ್ನು ಸಂಪರ್ಕಿಸುವ ರಸ್ತೆ ತೀರ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ.

Advertisement

ಮಣ್ಣಿನ ರಸ್ತೆಯಾಗಿ ಪರಿವರ್ತನೆ ನಿತ್ಯ ಘನ ವಾಹನಗಳ ಸಂಚಾರದಿಂದ ಡಾಮರು ರಸ್ತೆ ಮಣ್ಣಿನ ರಸ್ತೆಯಂತಾಗಿ ಪರಿವರ್ತನೆಗೊಂಡಿದ್ದು ದ್ವಿಚಕ್ರ ವಾಹನ ಸಂಚಾರಕ್ಕೆ ಆತಂಕ
ಉಂಟುಮಾಡಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್‌ ಗಾತ್ರದ ಹೊಂಡ ನಿರ್ಮಾಣಗೊಂಡಿದೆ. ಪಳ್ಳಿ ಹಂಪನಕಟ್ಟೆ ಬಳಿಯಲ್ಲಿ ಕಲ್ಲುಕೋರೆ,ಜಲ್ಲಿ ಕ್ರಷರ್‌ಗಳಿರುವುದರಿಂದ ಇಲ್ಲಿ ಭಾರ ಹೊತ್ತ ನೂರಾರು ವಾಹನಗಳು ಇಲ್ಲಿ ಓಡಾಟ ನಡೆಸುತ್ತಿವೆ‌. ಇದರ ಪರಿಣಾಮ ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡ ನಿರ್ಮಾಣವಾಗಿದ್ದು ರಸ್ತೆಯಲ್ಲಿದ್ದ ಡಾಮರು ಕಿತ್ತು ಹೋಗಿ ಅಲ್ಲಲ್ಲಿ ಬರೀ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಶಾಲಾ ಮಕ್ಕಳು ದಿನನಿತ್ಯ ಶಾಲೆಗೆ ಸಂಚರಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಪಳ್ಳಿ -ಸೂಡ ಸಂಪರ್ಕ ರಸ್ತೆ ಅತಿ ಮುಖ್ಯ ರಸ್ತೆಯಾಗಿದ್ದು ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸಲು ಹತ್ತಿರದ ರಸ್ತೆ. ಈ ಮಾರ್ಗವಾಗಿ ಬೆಳ್ಮಣ್‌, ಶಿರ್ವ, ಪಡುಬಿದ್ರಿ ಸಂಪರ್ಕಿಸಲು, ಈ ಭಾಗದಲ್ಲಿ ಅಡಪಾಡಿ ಶ್ರೀ ಉಮಾ ಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನವಿದ್ದು ಬಹುತೇಕರು ದೇವಸ್ಥಾನಕ್ಕೆ ತೆರಳಲು ಇದನ್ನೇ ಅವಲಂಬಿಸಿದ್ದಾರೆ.

ರಸ್ತೆಯ ಡಾಮರು ಎದ್ದು ಹೋಗಿ ರಸ್ತೆ ಸಮೀಪದ ಮನೆಗಳು ಸಂಪೂರ್ಣ ಧೂಳುಮಯವಾಗಿವೆ. ಜಲ್ಲಿ ಪುಡಿ ಹಾಗೂ ಧೂಳಿಗೆ ಬೈಕ್‌ ಸವಾರರಂತೂ ಹೆಲ್ಮೆಟ್‌ ಇಲ್ಲದೆ ಓಡಾಟ ನಡೆಸುವುದೇ ಕಷ್ಟಕರವಾಗಿದೆ. ಸೂಡದಿಂದ ಪಳ್ಳಿ ದಾದಬೆಟುವಿನವರೆಗೂ ರಸ್ತೆಯು ಸುಂದರವಾಗಿದ್ದರೂ ಆ ಬಳಿಕ ಉಳಿದ ಸುಮಾರು 2 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ರಸ್ತೆ ತೀರಾ ಹದಗೆಡಲು ಘನ ವಾಹನ ಸಂಚಾರವೇ ಪ್ರಮುಖ ಕಾರಣವಾಗಿದ್ದು, ಈ ಭಾಗದ ರಸ್ತೆಯಲ್ಲಿ ಸಂಚಾರ ನಡೆಸುವ 10 ಚಕ್ರದ ವಾಹನಗಳೂ ಹಾಗೂ ಇತರ ಘನ ವಾಹನಗಳ ಸಂಚಾರದಿಂದ ಹದಗೆಡಲು ಪ್ರಮುಖ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಮಳೆಗಾಲದಲ್ಲಿ ಕೆಸರು ರಸ್ತೆಯಾದರೆ ಬಿಸಿಲಿಗೆ ಧೂಳಿನಿಂದ ಈ ರಸ್ತೆಯಲ್ಲಿ ಓಡಾಟ ನಡೆಸುವಂತಿಲ್ಲ. ಕೂಡಲೇ ಈ ರಸ್ತೆಯ ದುರಸ್ತಿ ಕಾರ್ಯ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಮಗಾರಿ ಟೆಂಡರ್‌ ಪ್ರಕ್ರಿಯೆಯಲ್ಲಿ ಈ ರಸ್ತೆ ಅಭಿವೃದ್ಧಿ ಕುರಿತು ಶಾಸಕರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು ಶಾಸಕರು ವಿಶೇಷ ಮುತುವರ್ಜಿ ವಹಿಸಿ ರೂ. 50ಲಕ್ಷ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಕಾಮಗಾರಿಯು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದ್ದು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು.
-ಸುಮಿತ್‌ ಶೆಟ್ಟಿ , ಜಿ.ಪಂ. ಸದಸ್ಯರು

ಶೀಘ್ರ ಕಾಮಗಾರಿ ನಡೆಸಿ
ರಸ್ತೆಯೂ ತೀರಾ ಹದಗೆಟ್ಟ ಪರಿಣಾಮ ರಸ್ತೆಯಲ್ಲಿ ಸಂಚಾರ ನಡೆಸುವಂತಿಲ್ಲ. ಈ ಕುರಿತು ಸಂಬಂಧ ಪಟ್ಟ ಜನಪ್ರತಿನಿಧಿಗಳು ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಪ್ರಯತ್ನಿಸಬೇಕು.
-ಶ್ರೀಕಾಂತ್‌ ಶೆಣೈ ದಾದಬೆಟ್ಟು ಪಳ್ಳಿ

ಅಧಿಕಾರಿಗಳು ಕ್ರಮ ಕೈಗೊಳ್ಳಿ
ಬಹುತೇಕರು ದಿನ ನಿತ್ಯ ಸಂಚರಿಸುವ ಮುಖ್ಯ ರಸ್ತೆಯು ಶೀಘ್ರ ಅಭಿವೃದ್ಧಿಗೊಂಡಲ್ಲಿ ಸಾರ್ವಜನಿಕರಿಗೆ ಅನುಕೂಲ . ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಸಂತೋಷ್‌ ಬಿ.ನಾಯಕ್‌,ದಾದ ಬೆಟ್ಟು ಪಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next