Advertisement

ಪಾಲಿಗೆ ಬಂದಿದ್ದೇ ಪಂಚಾಮೃತ ಬಕೆಟ್‌ ಹಿಡಿಯಲ್ಲ; ಅವಕಾಶ ಕೇಳಲ್ಲ

03:24 PM Sep 23, 2017 | |

ಬಹುಶಃ ಕನ್ನಡದಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುವ ಹೀರೋಯಿನ್‌ ಎಂದರೆ ಅದು ಮಮತಾ ರಾಹುತ್‌ ಇರಬೇಕು. ಪ್ರತಿವರ್ಷ ಆಕೆಯ ಐದಾರು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ. ಆ ಚಿತ್ರಗಳು ಆರಕ್ಕೇರುವುದಿಲ್ಲ, ಮೂರಕ್ಕಿಳಿಯುವುದಿಲ್ಲ. ಆದರೂ ಮಮತಾ ರಾಹುತ್‌ಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಮಮತಾ ಅಭಿನಯದ “ರೂಪಾ’ ಎಂಬ ಚಿತ್ರ ಬಿಡುಗಡೆಯಾಗಿದೆ. ಇನ್ನು ಸದ್ಯದಲ್ಲೇ “ಗ್ಯಾಪಲ್ಲೊಂದು ಸಿನಿಮಾ’, “ನಮ್ಮೂರ ಹೈಕ್ಳು’ ಎಂಬ ಚಿತ್ರಗಳು ಬಿಡುಗಡೆಯಾಗಿವೆ. “ಶಿವನ ಪಾದ’ ಎಂಬ ಚಿತ್ರ ಸೆಟ್ಟೇರಿದೆ. 

Advertisement

ಇನ್ನು “ಧರ್ಮಸ್ಯ’ದಲ್ಲೊಂದು ಐಟಂ ಸಾಂಗು, ಇನ್ನಾವುದೋ ಚಿತ್ರದಲ್ಲೊಂದು ಕಾಮಿಡಿ ಸೀನು … ಹೀಗೆ ಮಮತಾ ರಾಹುತ್‌ ಒಂದಲ್ಲ ಒಂದು ಸಿನಿಮಾ ಮತ್ತು ಒಂದಲ್ಲೊಂದು ಪಾತ್ರದಲ್ಲಿ ಬಿಝಿಯಾಗಿಯೇ ಇದ್ದಾರೆ. ಎಲ್ಲಾ ಸರಿ, ಇದುವರೆಗೂ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಎಷ್ಟಾಗಿರಬಹುದು ಎಂದರೆ, ಕಾಮಿಡಿ ಪಾತ್ರಗಳಲ್ಲಿ 40 ಮತ್ತು ನಾಯಕಿಯಾಗಿ 60 ಎಂಬ ಉತ್ತರ ಅವರಿಂದ ಬರುತ್ತದೆ. ಅಲ್ಲಿಗೆ, ಸಂಖ್ಯೆ 60 ದಾಟುತ್ತದೆ.

ಅಷ್ಟೊಂದಾಗಿದೆಯಾ ಎಂದು ಆಶ್ಚರ್ಯವಾಗಬಹುದು. ಅದಕ್ಕೆ ಅವರ ಉತ್ತರ ಹೀಗಿದೆ. “ನಾನು ಚಿತ್ರರಂಗಕ್ಕೆ ಬಂದು 14 ವರ್ಷಗಳಾಯಿತು. 2005ರಲ್ಲಿ ಬಿಡುಗಡೆಯಾದ “ಪುಟಾಣಿ ಫೋರ್ಸ್‌ ಎ ಟು ಝಡ್‌’ ನನ್ನ ಮೊದಲ ಸಿನಿಮಾ. ಆಗ ಅವಕಾಶ ಸಿಗೋದೇ ಕಷ್ಟವಾಗಿತ್ತು. ಸಿಕ್ಕಿದ್ದನ್ನು ಮಾಡಿದೆ. ತುಂಬಾ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದೆ. ಎಷ್ಟೋ ಜನ ಅವಮಾನ ಮಾಡಿದ್ರು, ಕಾಲೆಳೆದ್ರು. ನಾನು ಏನಾದ್ರೂ ಸಾಧನೆ ಮಾಡಬೇಕು ಎಂದು ಅದ್ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಕೆಲಸ ಮಾಡುತ್ತಾ ಹೋದೆ’ ಎನ್ನುತ್ತಾರೆ ಅವರು.

Advertisement

ಹೀಗೇ ಅಭಿನಯಿಸುವಾಗ ಕ್ರಮೇಣ ಹೀರೋಯಿನ್‌ ಪಾತ್ರಗಳು ಸಿಕ್ಕವಂತೆ. ಅದೂ ಸಹ ದೊಡ್ಡ ಚಿತ್ರಗಳೇನಲ್ಲ. “ಕನ್ನಡದವರಿಗೆ ಅದ್ಯಾಕೆ ಅವಕಾಶ ಸಿಗುವುದಿಲ್ಲವೋ ಗೊತ್ತಿಲ್ಲ. ಅದೇನೋ ಹೇಳ್ತಾರಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಬೇರೆ ಕಡೆ ತುಪ್ಪಕ್ಕೆ ಹುಡುಕ್ತಾರೆ ಅಂತ. ನಮ್ಮದೂ ಅದೇ ಪರಿಸ್ಥಿತಿ. ಎಲ್ಲೆಂಲಿಂದಲೋ ನಾಯಕಿಯರನ್ನು ಹುಡುಕಿಕೊಂಡು ಬರ್ತಾರೆ. ಹಾಗಂತ ನಾನು ಧೂಷಣೆ ಮಾಡೋಲ್ಲ. ಏಕೆಂದರೆ, ನಾನು ಸಹ ತೆಲುಗು ಸಿನಿಮಾದಲ್ಲಿ ಮಾಡಿದ್ದೀನಿ. ನಾನು ಮೂಲತಃ ಇಲ್ಲಿಯವಳಾದರೂ, ಹೈದರಾಬಾದ್‌ ನನ್ನ ಎರಡನೆಯ ಮನೆ ಆಗಿಬಿಟ್ಟಿದೆ. ಇನ್ನೂ ಎರಡೂಮೂರು ತೆಲುಗು ಚಿತ್ರಗಳಲ್ಲಿ ನಟಿಸುವುದಕ್ಕೆ ಆಫ‌ರ್‌ ಬಂದಿದೆ. ಒಂದೇ ಸಿನಿಮಾದಲ್ಲಿ ನಾನು ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ನಟಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಮತಾ.

ಮಮತಾಗೆ ಸಿನಿಮಾ ಹಿನ್ನೆಲೆ ಇಲ್ಲವಂತೆ. ತಂದೆ ನೇಕಾರರು, ಗಾರ್ಮೆಂಟ್ಸ್‌ ಇಟ್ಟುಕೊಂಡವರು. ಈಗ ಅವರಿಗೆ ರೆಸ್ಟ್‌ ಕೊಟ್ಟು, ಮನೆಯ ಜವಾಬ್ದಾರಿ ಇವರು ತಗೊಂಡಿದ್ದಾರಂತೆ. “ಅವರು ನಮಗಾಗಿ ಸಾಕಷ್ಟು ದುಡಿದಿದ್ದಾರೆ. ಹಾಗಾಗಿ ಈಗ ಅವರಿಗೆ ರೆಸ್ಟ್‌. ನನ್ನ ಸಂಭಾವನೆ ಎಲ್ಲಾ ಅವರೇ ನೋಡ್ಕೊತಾರೆ. ನಾನು ಅವರ ಬಳಿ ತಿಂಗಳಿಗೆ ಇಷ್ಟು ಅಂತ ಪಾಕೆಟ್‌ ಮನಿ ತಗೋತೀನಿ. ಇಷ್ಟು ಸಿನಿಮಾಗಳಲ್ಲಿ ನಟಿಸಿರಬೇಕಾದರೆ, ತುಂಬಾ ದುಡ್ಡು ದುಡಿದಿರಬಹುದು ಅಂತ ಎಲ್ಲರೂ ಅಂದೊಳ್ಳೋದು ಸಹಜ. ಆದರೆ, ನಮಗೆ ಅಷ್ಟೊಂದು ಸಂಭಾವನೆ ಯಾರು ಕೊಡುತ್ತಾರೆ ಹೇಳಿ. ಎಲ್ಲರೂ ಲೋ ಬಜೆಟ್‌ ಸಿನಿಮಾ ಮಾಡ್ತೀವಿ ಅಂತಲೇ ಬರುತ್ತಾರೆ. ಇನ್ನು ಕಡಿಮೆ ಕೊಟ್ಟರೂ, ಬರಬೇಕಾಗಿರೋದೇ 15 ಲಕ್ಷದವರೆಗೂ ಇದೆ. ಅದೆಲ್ಲಾ ಹೇಗೆ ಕೇಳ್ಳೋದು ಹೇಳಿ’ ಎಂಬ ಪ್ರಶ್ನೆ ಅವರಿಂದ ಬರುತ್ತದೆ.

ದೊಡ್ಡ ಚಿತ್ರಗಳಲ್ಲಿ ಮತ್ತು ದೊಡ್ಡ ಹೀರೋಗಳ ಜೊತೆಗೆ ಅವಕಾಶ ಸಿಕ್ಕಿಲ್ಲ ಎಂಬ ಸಣ್ಣ ಬೇಸರವಿದ್ದರೂ, ಮಮತಾ ತೋರಿಸಿಕೊಳ್ಳುವುದಿಲ್ಲ. “ದೊಡ್ಡ ಅವಕಾಶ ಸಿಗದಿದ್ದರೂ ಪರವಾಗಿಲ್ಲ. ನಾನು ಬಕೆಟ್‌ ಹಿಡಿಯುವುದಿಲ್ಲ. ಅವಕಾಶ ಕೊಡಿ ಅಂತ ಕೇಳಲ್ಲ. ಸಿನಿಮಾ ಇಲ್ಲ ಅಂದ್ರೂ ನೋ ಪ್ರಾಬ್ಲಿಮ್‌. ಟ್ಯೂಶನ್‌ ಹೇಳಿಕೊಡಬಲ್ಲೆ. ಅಡುಗೆ ಮಾಡಬಲ್ಲೆ. ಅದರಿಂದಲೇ ಬದುಕು ಕಟ್ಟಿಕೊಳ್ಳಬಹುದು ಅಂತ ನಂಬಿಕೆ ಇದೆ’ ಎನ್ನುತ್ತಾರೆ ಮಮತಾ.

Advertisement

Udayavani is now on Telegram. Click here to join our channel and stay updated with the latest news.

Next