ಮುಂಬಯಿ: ಭಾರತೀಯ ಸಂಸ್ಕೃತಿಯಲ್ಲಿ ಮುದ್ರಾಧಾರಣೆಗೆ ಬಹಳ ಮಹತ್ವ ಇದೆ. ನಮಗೆ ಯಾರಾ ದರೂ ಏನಾದರೂ ಇನಾಮು ಕೊಟ್ಟರೆ ಅದನ್ನು ಮತ್ತು ಕೊಟ್ಟವರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಅಂತೆಯೇ ಈ ಶರೀರ ದೇವರು ಕೊಟ್ಟ ಬಹುಮುಖ್ಯ ವರವಾಗಿದೆ. ಹಾಗಾಗಿದೇವರ ನೆನಪಿಗೋಸ್ಕರವಾಗಿ ಈ ಶರೀರದಲ್ಲಿ ದೇವರ ಶಂಖ ಚಕ್ರವನ್ನು ಹಾಕಿಕೊಳ್ಳುವ ಸಂಪ್ರದಾಯವೇ ತಪ್ತ ಮುದ್ರಾಧಾರಣೆ. ಮನುಷ್ಯರ ಪ್ರಯತ್ನ ಮೀರಿನಿಂತ ಈ ಶರೀರ, ಇಂದ್ರಿಯಗಳು ಒಂದೊಂದೂ ಅಪೂರ್ವವಾದದು. ಈ ದೇಹಕ್ಕೆ ಶಂಖಚಕ್ರಧಾರಣೆ ಭಗವದ½ಕ್ತರ ದೀಕ್ಷೆಯಾಗಿದೆ. ಈ ಚಕ್ರಕ್ಕೆ ದುರ್ಗಾದೇವಿ ಅಭಿಮಾನಿ ದೇವತೆ. ದುರ್ಗೆ ಅಂದ್ರೆ ಅದು ಭದ್ರ ಕೋಟೆ. ಹಾಗಾಗಿ ಈ ಚಕ್ರಧಾರಣೆಯಿಂದ ದುರ್ಗೆಯ ಅನು
ಗ್ರಹವಾಗುತ್ತದೆ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಅ.1ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯ ಉಡುಪಿ ಪೇಜಾವರ ಮಠ ಮುಂಬಯಿ ಶಾಖೆಯ ಸನ್ನಿಧಿಯಲ್ಲಿನ ಶ್ರೀ ಕೃಷ್ಣ ದೇವರಿಗೆ ಪೂಜೆ ನೆರವೇರಿಸಿ ತಪ್ತ ಮುದ್ರಾಧಾರಣೆಗೈದು ಆಶೀರ್ವಚನ ನೀಡಿದ ಶ್ರೀಗಳು, ಶಂಖಚಕ್ರ ಸುದರ್ಶನ ಮುದ್ರೆಯಾಗಿದ್ದು ಭಾವನೆ, ದೋಷಗಳ ಪರಿಹಾರಕ್ಕೆ ಸೂಕ್ತವಾಗಿದೆ. ಹೋಮದಲ್ಲಿ ಶಂಖಚಕ್ರ ಬಿಸಿಮಾಡಿ ದೇಹದಲ್ಲಿ ಹಚ್ಚಿಸಿಕೊಳ್ಳುವ ಒಳ್ಳೆಯ ಸಂಪ್ರದಾಯವಾಗಿ ನಮ್ಮಲ್ಲಿ ಬೆಳೆದು ಬಂದ ಸಂಸ್ಕೃತಿ ಇದಾಗಿದೆ. ಯುವ ಪೀಳಿಗೆಯಲ್ಲಿ ಇಂತಹ ಪದ್ಧತಿ, ಸಂಸ್ಕೃತಿ ತಿಳಿಸಿಕೊಡುವ ಕೊರತೆ ನಮ್ಮಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ವಿಚಾರದ ಕೊರತೆ, ಮಾಧ್ಯಮಗಳು ತಿಳಿಸುವಂತಹದ್ದು ಎಷ್ಟು ಪರಿಣಾಮಕಾರಿ ಅನ್ನುವುದು ಸವಲಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಕಾರ್ಯಕಾರಿ ಸಮಿತಿಯ ಸದಸ್ಯ ರಾಮ ವಿಠಲ ಕಲ್ಲೂರಾಯ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗೆr, ರಾಘವೇದ್ರ ಭಟ್, ಡಾ| ಎಸ್.ಎಂ ಆಳ್ವ, ಕರುಣಾಕರ ಶೆಟ್ಟಿ ಇಸ್ಕಾನ್, ಲತೀಶ್ ಶೆಟ್ಟಿ ಗೋಕುಲ, ಡಾ| ಬಾಲಕೃಷ್ಣ ಆಳ್ವ, ಡಾ| ಶೈರಿ ಬಿ.ಆಳ್ವ ಸೇರಿದಂತೆ ನೂರಾರು ಭಕ್ತರು ಆಗಮಿಸಿ ಮುದ್ರಾಧಾರಣೆ ಮಾಡಿಸಿಕೊಂಡರು. ಮಾ| ಕೃಷಾಂಗ್ ಆಳ್ವ ಶ್ಲೋಕ ಪಠಿಸಿದರು.
ಪರ್ಯಾಯ ಸಂಚಾರಕ್ಕೆ ಮುಂಬಯಿ ಮಹಾನಗರಕ್ಕಾಗಮಿಸಿದ ಪಲಿಮಾರು ಮಠಾಧೀಶರು ಸೋಮವಾರ ಮತ್ತು ಮಂಗಳವಾರ ದಿನಪೂರ್ತಿಯಾಗಿ ಸಾಂತಾಕ್ರೂಜ್ ಪೇಜಾವರ ಮಠದಲ್ಲಿÉದ್ದು, ವಿವಿಧ ಪೂಜೆಗಳನ್ನು ನಡೆಸಿ ನೆರೆದ ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವಂತೆ ಶಾಖಾ ಹಿರಿಯ ಪ್ರಬಂಧಕ ಪ್ರಕಾಶ ಆಚಾರ್ಯ ರಾಮಕುಂಜ ಇದೇ ಸಂದರ್ಭದಲ್ಲಿ ತಿಳಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್