Advertisement
ಯುದ್ಧ ಆರಂಭವಾದ ಬೆನ್ನಲ್ಲೇ ಭಾನುವಾರ ಲೆಬನಾನ್‌ನ ಹೆಜ್ಬುಲ್ಲಾ ಉಗ್ರರು ಹಮಾಸ್‌ಗೆ ಬೆಂಬಲ ಸೂಚಿಸಿ ಇಸ್ರೇಲ್ ಮೇಲೆ ಸಶಸ್ತ್ರ ದಾಳಿ ಶುರುವಿಟ್ಟುಕೊಂಡಿದ್ದಾರೆ. ಇದಕ್ಕೆ ತಕ್ಕ ತಿರುಗೇಟು ನೀಡಿರುವ ಇಸ್ರೇಲ್ ಸೇನೆ, ಸೋಮವಾರ ಲೆಬನಾನ್‌ನ ಭೂಪ್ರದೇಶದ ಮೇಲೆ ದಾಳಿ ಮಾಡಿದೆ. ಇಸ್ರೇಲ್ ವಾಯುಪಡೆಯ ಸಮರ ಹೆಲಿಕಾಪ್ಟರ್‌ಗಳು ಲೆಬನಾನ್ ಅನ್ನು ಟಾರ್ಗೆಟ್ ಮಾಡಿದ್ದಲ್ಲದೇ, ಗಡಿ ದಾಟಿ ಬಂದ ಬಂದೂಕುಧಾರಿಗಳನ್ನೂ ಹತ್ಯೆಗೈದಿದೆ.
ಈ ನಡುವೆ, ಇಸ್ರೇಲ್‌ಗೆ ಯುದ್ಧನೌಕೆಗಳು ಸೇರಿದಂತೆ ಸೇನಾ ನೆರವು ನೀಡುತ್ತಿರುವ ಅಮೆರಿಕಕ್ಕೆ ಲೆಬನಾನ್‌ನ ಹೆಜ್ಬುಲ್ಲಾ ಉಗ್ರ ಸಂಘಟನೆ ಬೆದರಿಕೆ ಸಂದೇಶ ಕಳುಹಿಸಿದೆ. “ಈ ಸಂಘರ್ಷದಲ್ಲಿ ಮೂಗು ತೂರಿಸಲು ಯತ್ನಿಸಿದರೆ, ನಿಮ್ಮ ಮೇಲೂ ದಾಳಿ ನಡೆಸಬೇಕಾಗುತ್ತದೆ. ಪ್ಯಾಲೆಸ್ತೀನ್ ಉಕ್ರೇನ್ ಅಲ್ಲ ಎಂಬುವುದನ್ನು ಮರೆಯದಿರಿ. ಇದರಲ್ಲಿ ಮಧ್ಯಪ್ರವೇಶ ಮಾಡಿದರೆ, ಲೆಬನಾನ್‌ನಲ್ಲಿರುವ ಅಮೆರಿಕನ್ನರನ್ನು ಸುಮ್ಮನೆ ಬಿಡಲ್ಲ’ ಎಂದು ಹೆಜ್ಬುಲ್ಲಾ ಎಚ್ಚರಿಕೆ ನೀಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪ್ರತಿಕ್ರಿಯಿಸಿರುವ ರಷ್ಯಾ, “ಈ ಯುದ್ಧದಲ್ಲಿ ಮೂರನೆಯವರ ಪಾತ್ರವಿರುವ ಬಗ್ಗೆ ಶಂಕೆಯಿದ್ದು, ಇದು ಕಳವಳಕಾರಿ’ ಎಂದಿದೆ.
Related Articles
ಯುದ್ಧದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಸೋಮವಾರ ತುರ್ತು ಸಭೆ ನಡೆಸಿದೆ. ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಎಲ್ಲ 15 ಸದಸ್ಯ ರಾಷ್ಟ್ರಗಳೂ ಖಂಡಿಸಬೇಕು ಎಂದು ಅಮೆರಿಕ ಈ ಸಭೆಯಲ್ಲಿ ಮನವಿ ಮಾಡಿದೆ. ಆದರೆ, ಭದ್ರತಾ ಮಂಡಳಿಯು ತತ್‌ಕ್ಷಣಕ್ಕೆ ಯಾವುದೇ ನಿರ್ಣಯ ಕೈಗೊಳ್ಳದೇ ಸಭೆಯನ್ನು ಮುಗಿಸಿದೆ.
Advertisement
ಇಸ್ರೇಲ್‌ಗೆ ಭಾರತೀಯ-ಅಮೆರಿಕನ್ನರ ಬೆಂಬಲ: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ, ವಿವೇಕ್ ರಾಮಸ್ವಾಮಿ ಸೇರಿದಂತೆ ಭಾರತೀಯ ಅಮೆರಿಕನ್ ಗಣ್ಯರು ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದಾರೆ. ಇಂದು ಇಸ್ರೇಲ್‌ಗೆ ಉಂಟಾದ ಸ್ಥಿತಿ ಮುಂದೆ ಅಮೆರಿಕಕ್ಕೂ ಬರಬಹುದು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಇಸ್ರೇಲ್ ಪರ ನಿಲ್ಲಬೇಕು ಎಂದು ಇವರೆಲ್ಲರೂ ಹೇಳಿದ್ದಾರೆ. ಅದಾನಿ ಪೋರ್ಟ್ ಉದ್ಯೋಗಿಗಳು ಸುರಕ್ಷಿತ
ಇದೇ ವೇಳೆ, ಇಸ್ರೇಲ್‌ನ ಹೈಫಾ ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಎಲ್ಲ ಉದ್ಯೋಗಿಗಳೂ ಸುರಕ್ಷಿತವಾಗಿದ್ದಾರೆ ಎಂದು ಅದಾನಿ ಪೋರ್ಟ್ಸ್ ಆ್ಯಂಡ್ ಎಸ್‌ಇಝೆಡ್ ಲಿ. ಹೇಳಿದೆ. ಯುದ್ಧವು ದಕ್ಷಿಣ ಇಸ್ರೇಲ್‌ನಲ್ಲಿ ನಡೆಯುತ್ತಿದ್ದು, ಹೈಫಾ ಬಂದರು ಉತ್ತರದಲ್ಲಿರುವ ಕಾರಣ ಸದ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದೂ ಕಂಪನಿ ತಿಳಿಸಿದೆ. ವಿದ್ಯಾರ್ಥಿಗಳ ವಿರುದ್ಧ ಕೇಸ್:
ಈ ನಡುವೆ, ಇಸ್ರೇಲ್-ಹಮಾಸ್ ಯುದ್ಧದ ಬೆನ್ನಲ್ಲೇ ಪ್ಯಾಲೆಸ್ತೀನಿಯರ ಪರವಾಗಿ ಮೆರವಣಿಗೆ ನಡೆಸಿದ ಅಲಿಗಡ ಮುಸ್ಲಿಂ ವಿವಿಯ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಸೋಮವಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇರಾನ್ ಮಾಸ್ಟರ್‌ಮೈಂಡ್?
ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಿಢೀರ್ ದಾಳಿಯ ಹಿಂದೆ ಇರಾನ್‌ನ ಮಾಸ್ಟರ್‌ಮೈಂಡ್ ಕೆಲಸ ಮಾಡಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಅತ್ಯುತ್ತಮ ತರಬೇತಿ ಪಡೆದಿರುವ ಸೇನೆಯೊಂದು ನಡೆಸುವ ಮಾದರಿಯಲ್ಲೇ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ. ಅಂದರೆ, ಈ ವ್ಯವಸ್ಥಿತ ದಾಳಿಯನ್ನು ರೂಪಿಸಲು ಇರಾನ್‌ನ ಭದ್ರತಾ ಸಂಸ್ಥೆಗಳು ಹಮಾಸ್‌ಗೆ ನೆರವಾಗಿದೆ. ಕಳೆದ ವಾರ ಬೇರುತ್‌ನಲ್ಲಿ ನಡೆದ ರಹಸ್ಯ ಸಭೆಯಲ್ಲಿ ದಾಳಿಗೆ ಇರಾನ್ ಹಸಿರು ನಿಶಾನೆ ತೋರಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ, ಹಮಾಸ್ ದಾಳಿಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂದು ಇರಾನ್ ಸೋಮವಾರ ಸ್ಪಷ್ಟಪಡಿಸಿದೆ. ಸಂಧಾನಕ್ಕೆ ಕತಾರ್ ಎಂಟ್ರಿ
ಉಗ್ರರ ಒತ್ತೆಯಲ್ಲಿರುವ ಇಸ್ರೇಲ್‌ನ ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಕತಾರ್ ಸಂಧಾನಕಾರನಾಗಿ ಎಂಟ್ರಿಯಾಗಿದೆ. ಇಸ್ರೇಲ್ ಜೈಲಿನಲ್ಲಿರುವ 36 ಮಂದಿ ಪ್ಯಾಲೆಸ್ತೀನಿ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಿಸಿ, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡುವಂತೆ ಹಮಾಸ್ ಉಗ್ರರೊಂದಿಗೆ ಕತಾರ್ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಇಸ್ರೇಲ್ ಮತ್ತು ಹಮಾಸ್ ಪಟ್ಟುಬಿಡದ ಕಾರಣ ಸಂಧಾನದಲ್ಲಿ ಇನ್ನೂ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡುಬಂದಿಲ್ಲ. ಈ ನಡುವೆ, ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿ ಒತ್ತೆಯಲ್ಲಿದ್ದ ನಾಲ್ವರು ಇಸ್ರೇಲಿಗರೇ ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಸ್ವತಃ ಅಖಾಡಕ್ಕೆ ಧುಮುಕಿದ ಇಸ್ರೇಲ್ ಮಾಜಿ ಪ್ರಧಾನಿ
ದೇಶ ಯುದ್ಧದ ಪರಿಸ್ಥಿತಿಯನ್ನು ಅನುಭವಿಸುತ್ತಿರುವಾಗ ರಾಷ್ಟ್ರದ ಪರವಾಗಿ ಇಸ್ರೇಲ್ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಸ್ವತಃ ಯುದ್ಧದ ಅಖಾಡಕ್ಕೆ ಧುಮುಕಿದ್ದಾರೆ. ಇಸ್ರೇಲಿ ಯೋಧರಿಗೆ ಧೈರ್ಯ ತುಂಬಿದ ಅವರು, ಸ್ವತಃ ಬಂದೂಕು ಹಿಡಿದು ಯುದ್ಧದಲ್ಲಿ ಪಾಲ್ಗೊಂಡಿದ್ದಾರೆ. ಯುದ್ಧದ ಸನ್ನಿವೇಶದಲ್ಲಿ ನಾಗರಿಕರು ಮೀಸಲು ಕರ್ತವ್ಯದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ನಲ್ಲಿ ಅವಕಾಶವಿದೆ. ಇನ್ನೊಂದೆಡೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಜಾ ಪಟ್ಟಿಯಲ್ಲಿರುವ ನಾಗರಿಕರು ಹಮಾಸ್ ಉಗ್ರರಿರುವ ಸ್ಥಳಗಳಿಂದ ಹೊರಹೋಗುವಂತೆ ಕರೆ ನೀಡಿದ್ದಾರೆ. ದಾಳಿಗಳು ತೀವ್ರಗೊಳ್ಳಲಿದ್ದು, ಶೀಘ್ರ ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಭಾರತಕ್ಕೆ ತೆರಳುವವನಿದ್ದ!
ಇಸ್ರೇಲ್‌ನ ಸಂಗೀತ ಉತ್ಸವದಲ್ಲಿ ಭಾಗಿಯಾಗಿದ್ದ ಅಮೆರಿಕದ ಹರ್ಷ ಗೋಲ್ಬರ್ಗ್ ಪೊಲಿನ್(23) ಹಮಾಸ್ ದಾಳಿಯ ಬಳಿಕ ಕಾಣೆಯಾಗಿದ್ದಾನೆ. ಪೋಷಕರಿಗೆ ಅವನು ಮಾಡಿದ ಕೊನೆಯ ಸಂದೇಶ ಹೊರತುಪಡಿಸಿ ಆತನ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಸಂಗೀತೋತ್ಸವದ ವೇಳೆ ಉಗ್ರರು ದಾಳಿ ನಡೆಸಿದ ಸಮಯದಲ್ಲಿ ಪೊಲೀನ್ ತನ್ನ ಹೆತ್ತವರಿಗೆ, “ಐ ಲವ್ ಯೂ, ಐ ಆ್ಯಮ್ ಸಾರಿ’ ಎಂಬ ಸಂದೇಶ ಕಳುಹಿಸಿದ್ದ. ಅನಂತರ ಅವನಿಂದ ಯಾವುದೇ ಸಂದೇಶವಾಗಲೀ, ಕರೆಯಾಗಲೀ ಬಂದಿಲ್ಲ ಎಂದು ಹೆತ್ತವರು ಅಳಲು ತೋಡಿಕೊಂಡಿದ್ದಾರೆ. “ಪ್ರವಾಸವನ್ನು ಹೆಚ್ಚು ಇಷ್ಟಪಡುವ ಪೊಲಿನ್, ಭಾರತಕ್ಕೆ ಬರಲು ಯೋಜನೆ ರೂಪಿಸಿಕೊಂಡಿದ್ದ’ ಎಂದು ಪೊಲಿನ್ ತಂದೆ ತಿಳಿಸಿದ್ದಾರೆ. ಉಗ್ರರು ಒಳಗಿದ್ದಾರೆ ಎನ್ನುತ್ತಲೇ ಫೋನ್ ಕಟ್ ಆಯಿತು!
ಅಜ್ಜಿಯನ್ನು ಭೇಟಿಯಾಗಲೆಂದು ಗಾಜಾ ಸಮೀಪದ ನಗರಕ್ಕೆ ತೆರಳಿದ್ದ ಇಸ್ರೇಲ್‌ನ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನು ಉಗ್ರರು ಅಪಹರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮಹಿಳೆಯ ಪತಿ ಯೋನಿ ಆ್ಯಶರ್, “ಶನಿವಾರ ಪತ್ನಿ ನನಗೆ ಕರೆ ಮಾಡಿದ್ದಳು. ಉಗ್ರರು ಮನೆಯೊಳಗೇ ಇದ್ದಾರೆ’ ಎಂದು ಆಕೆ ಹೇಳುತ್ತಲೇ ಫೋನ್ ಡಿಸ್‌ಕನೆಕ್ಟ್ ಆಯಿತು. ಅನಂತರ ನಾನು ಆಕೆಯ ಗೂಗಲ್ ಅಕೌಂಟ್ ಮೂಲಕ ಫೋನ್ ಎಲ್ಲಿದೆ ಎಂದು ಟ್ರ್ಯಾಕ್ ಮಾಡಿದಾಗ, ಗಾಜಾದ ಖಾನ್ ಯೂನಿಸ್ ಎಂಬ ಸ್ಥಳದಲ್ಲಿರುವುದು ಪತ್ತೆಯಾಯಿತು. ಇದಾದ ಬಳಿಕ, ನನ್ನ ಪತ್ನಿ, ಮಕ್ಕಳು ಮತ್ತು ಅತ್ತೆಯನ್ನು ಟ್ರಕ್‌ವೊಂದರಲ್ಲಿ ಕೂರಿಸಿ ಉಗ್ರರು ಕರೆದೊಯ್ಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು ಎಂದು ಹೇಳಿದ್ದಾರೆ. “ನನ್ನ ಮಕ್ಕಳು ಇನ್ನೂ 5 ಮತ್ತು 3 ವರ್ಷದವರು. ಏನೂ ಗೊತ್ತಿಲ್ಲದ ಮುಗ್ಧರು ಅವರು. ನಾನು ಹಮಾಸ್ ಉಗ್ರರಲ್ಲಿ ಕೇಳುವುದಿಷ್ಟೆ – ದಯವಿಟ್ಟು ನನ್ನ ಹೆಂಡತಿ, ಮಕ್ಕಳಿಗೆ ಏನೂ ಮಾಡಬೇಡಿ. ಬೇಕಿದ್ದರೆ ನಾನು ನಿಮ್ಮೊಂದಿಗೆ ಬರಲು ಸಿದ್ಧನಿದ್ದೇನೆ. ಅವರನ್ನು ಬಿಟ್ಟುಬಿಡಿ’ ಎಂದು ಆ್ಯಶರ್ ಗೋಗರೆದಿದ್ದಾರೆ. ಯುದ್ಧದ ಎಫೆಕ್ಟ್: ಕುಸಿದ ಸೆನ್ಸೆಕ್ಸ್
ಇಸ್ರೇಲ್-ಹಮಾಸ್ ಯುದ್ಧದ ಕರಿನೆರಳು ಮುಂಬಯಿ ಷೇರುಪೇಟೆ ಮೇಲೆಯೂ ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು, ಕಚ್ಚಾ ತೈಲ ಬೆಲೆ ಏರಿಕೆ ಸೇರಿದಂತೆ ಜಾಗತಿಕ ವಿದ್ಯಮಾನಗಳಿಗೆ ಹೆದರಿ ಹೂಡಿಕೆದಾರರು ಷೇರುಗಳ ಮಾರಾಟದಲ್ಲಿ ತೊಡಗಿದ ಪರಿಣಾಮ, ಸೋಮವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 483.24 ಅಂಕ ಕುಸಿದು, 65,512.39ರಲ್ಲಿ ವಹಿವಾಟು ಅಂತ್ಯವಾಯಿತು. ನಿಫ್ಟಿ 141.51 ಅಂಕ ಇಳಿಕೆಯಾಗಿ, ದಿನಾಂತ್ಯಕ್ಕೆ 19,512.35ಕ್ಕೆ ತಲುಪಿತು. ಹಣಕಾಸು, ಬ್ಯಾಂಕಿಂಗ್ ಮತ್ತು ಇಂಧನ ಕ್ಷೇತ್ರದ ಷೇರುಗಳು ಹೆಚ್ಚು ಕುಸಿತ ಕಂಡವು. ನೆರವು ಸ್ಥಗಿತಗೊಳಿಸಿದ ಐರೋಪ್ಯ ಒಕ್ಕೂಟ
ಪ್ಯಾಲೆಸ್ತೀನ್‌ಗೆ ನೀಡಬೇಕಿದ್ದ 691 ದಶಲಕ್ಷ ಯೂರೋ ನೆರವನ್ನು ಐರೋಪ್ಯ ಒಕ್ಕೂಟ ತಡೆಹಿಡಿದಿದೆ. ಇಸ್ರೇಲ್ ವಿರುದ್ಧದ ಕ್ರೌರ್ಯಕ್ಕೆ ಪ್ರತಿಯಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ಯಾಲೆಸ್ತೀನ್‌ಗೆ ಎಲ್ಲ ನೆರವನ್ನೂ ಸ್ಥಗಿತಗೊಳಿಸುತ್ತಿದ್ದೇವೆ, ಎಲ್ಲ ಯೋಜನೆಗಳನ್ನೂ ತಡೆಹಿಡಿಯುತ್ತಿದ್ದೇವೆ, ಹೊಸ ಬಜೆಟ್ ಪ್ರಸ್ತಾವಗಳನ್ನೂ ಮುಂದೂಡುತ್ತಿದ್ದೇವೆ ಎಂದು ಘೋಷಿಸಿದೆ. ಜರ್ಮನಿ, ಆಸ್ಟ್ರಿಯಾ ಕೂಡ ಪ್ಯಾಲೆಸ್ತೀನ್‌ಗೆ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿರುವುದಾಗಿ ಸೋಮವಾರ ಘೋಷಿಸಿವೆ. ಉಗ್ರರ ರಕ್ತದಾಹಕ್ಕೆ ಸುಂದರ ಕುಟುಂಬವೇ ನಿರ್ನಾಮ!
ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ರಕ್ತದಾಹಕ್ಕೆ ಬಲಿಯಾದವರ ಒಂದೊಂದು ಕಥೆಯೂ ಬೆಚ್ಚಿಬೀಳಿಸುವಂತಿದೆ. ಶಬ್ಬೊàಸ್ ಎಂಬಲ್ಲಿ ಒಂದಿಡೀ ಕುಟುಂಬವನ್ನು ಉಗ್ರರು ಭೀಕರವಾಗಿ ಕೊಂದು ಹಾಕಿದ್ದಾರೆ. ಅಪ್ಪ-ಅಮ್ಮ, 6 ವರ್ಷ ಪ್ರಾಯದ ಅವಳಿ ಹೆಣ್ಣುಮಕ್ಕಳು ಮತ್ತು 4 ವರ್ಷದ ಮಗನ ಮೇಲೆ ಗುಂಡಿನ ಮಳೆಗರೆದಿರುವ ಉಗ್ರರು, ಒಂದು ಸುಂದರ ಸಂಸಾರವನ್ನು ನಿರ್ನಾಮ ಮಾಡಿದ್ದಾರೆ. ಮತ್ತೂಂದು ಘಟನೆಯಲ್ಲಿ, ಇಟಾಯಿ ಮತ್ತು ಹದಾಸ್ ಎಂಬ ದಂಪತಿಯನ್ನೂ ಕೊಲ್ಲಲಾಗಿದೆ. ಅವರ 10 ತಿಂಗಳ ಅವಳಿ ಮಕ್ಕಳು ಮಾತ್ರ ಬದುಕುಳಿದಿದ್ದಾರೆ. ಈ ಅವಳಿಗಳು 12-14 ಗಂಟೆಗಳ ಕಾಲ ಹೆತ್ತವರ ಮೃತದೇಹದ ಪಕ್ಕದಲ್ಲೇ ಕಾಲ ಕಳೆದಿದ್ದು, ಉಗ್ರರ ಕ್ರೌರ್ಯಕ್ಕೆ ಸಾಕ್ಷಿಯಾಗಿವೆ. ಜೆರುಸಲೇಂನತ್ತ ರಾಕೆಟ್ ದಾಳಿ
ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ತೀವ್ರಗೊಳಿಸಿರು ವಂತೆಯೇ ಸೋಮವಾರ ರಾತ್ರಿ ವೇಳೆಗೆ ಹಮಾಸ್ ಉಗ್ರರು ಜೆರುಸ ಲೇಂನತ್ತ ರಾಕೆಟ್‌ಗಳನ್ನು ಉಡಾವಣೆ ಮಾಡಿದ್ದಾರೆ. ಇಸ್ರೇಲ್‌ನ ತನ್ನ ದಕ್ಷಿಣ ಕರಾವಳಿಯಲ್ಲಿರುವ ತಮರ್ ತೈಲ ಕ್ಷೇತ್ರದಲ್ಲಿನ ಉತ್ಪಾದನೆ ಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಯುದ್ಧ ಬಿರುಸುಗೊಂಡ ಹಿನ್ನೆಲೆ ಅರಬ್ ಲೀಗ್‌ನ ವಿದೇಶಾಂಗ ಸಚಿವರು ಬುಧವಾರ ಸಭೆ ಕರೆದಿದ್ದಾರೆ. ಏಕೈಕ ಆಸ್ಪತ್ರೆಯೂ ಬಂದ್
ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಗಾಜಾದ ಬೇತ್ ಹೆನೌನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಆಸ್ಪತ್ರೆಯೂ ಬಂದ್ ಆಗಿದೆ. ರಾಕೆಟ್, ಕ್ಷಿಪಣಿಗಳ ಮಳೆಯೇ ಸುರಿಯುತ್ತಿರುವ ಕಾರಣ, ಆಸ್ಪತ್ರೆ ಕಟ್ಟಡಕ್ಕೆ ಹಾನಿ ಯಾಗಿದೆ. ಅಲ್ಲದೇ, ವೈದ್ಯರು ಸೇರಿದಂತೆ ಸಿಬಂದಿಗೆ ಹಾಗೂ ರೋಗಿ ಗಳಿಗೆ ಆಸ್ಪತ್ರೆಯ ಒಳಗೆ ಬರಲೂ, ಹೊರಗೆ ಹೋಗಲೂ ಆಗುತ್ತಿಲ್ಲ. ಹೀಗಾಗಿ ಸೇವೆಯನ್ನೇ ಸ್ಥಗಿತಗೊಳಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ಭಾರತೀಯರಿಗೆ ಬಂಕರ್‌ಗಳೇ ಆಶ್ರಯ
ಇಸ್ರೇಲ್‌ನಲ್ಲಿ 18,000ಕ್ಕೂ ಹೆಚ್ಚು ಭಾರತೀಯರು ವಾಸವಿದ್ದಾರೆ. ಈ ಪೈಕಿ 9,000 ಮಂದಿ ವಿದ್ಯಾರ್ಥಿಗಳು. ಎಲ್ಲ ಭಾರತೀಯರು ಸುರಕ್ಷಿತವಾಗಿದ್ದು, ಕೆಲವರು ಬಂಕರ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. “ಪ್ರತಿಯೊಬ್ಬರೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ. ದಿನದ 24 ಗಂಟೆಯೂ ನಾವು ಲಭ್ಯರಿದ್ದೇವೆ. ಅವರಿಗೆ ಎಲ್ಲ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್‌ನಲ್ಲಿರುವ ಭಾರತೀಯರ ಪೈಕಿ ನರ್ಸ್ ಗಳು, ಟೆಕಿಗಳು ಮತ್ತು ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇದನ್ನು ಹೊರತುಪಡಿಸಿ, ಭಾರತ ಮೂಲದ ಸುಮಾರು 85,000 ಯಹೂದಿಯರು ಇಸ್ರೇಲ್‌ನಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಿಜೋರಾಂ ಮತ್ತು ಮಣಿಪುರದಿಂದ ಹೆಚ್ಚಿನ ಸಂಖ್ಯೆಯ ಯಹೂದಿಯರು ಇಸ್ರೇಲ್‌ಗೆ ವಲಸೆ ಹೋಗಿದ್ದಾರೆ. “ಈ ಮಟ್ಟಕ್ಕೆ ಹಮಾಸ್ ದಾಳಿಯನ್ನು ನಾವು ನಿರೀಕ್ಷಿಸಿರಲಿಲ್ಲ. ಈಗ ಇಸ್ರೇಲ್‌ನಲ್ಲಿ ರಜೆಯ ದಿನಗಳು. ನಾವು ಸುರಕ್ಷಿತವಾಗಿದ್ದೇವೆ. 7-8 ಗಂಟೆಗಳು ನಾವು ಬಂಕರ್‌ನಲ್ಲಿದ್ದೆವು. ಇದೀಗ ಸುರಕ್ಷಿತ ಸ್ಥಳಗಳಲ್ಲಿ ರೂಮ್‌ಗಳಲ್ಲಿ ವಾಸವಿದ್ದೇವೆ. ವಾಟ್ಸ್‌ಆ್ಯಪ್ ಮೂಲಕ ಭಾರತೀಯ ರಾಯಭಾರ ಕಚೇರಿಯು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದೆ’ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.