ಚಿತ್ರರಂಗದಲ್ಲಿ ತೆರೆಮೇಲೆ ಸಿಗುವಷ್ಟು ಮನ್ನಣೆ, ತೆರೆಮರೆಯಲ್ಲಿ ಕೆಲಸ ಮಾಡುವ ತಂತ್ರಜ್ಞರಿಗೆ ಸಿಗುವುದಿಲ್ಲ ಎನ್ನುವುದು ವಾಸ್ತವ ಸತ್ಯ. ಒಂದು ಚಿತ್ರ ಯಶಸ್ವಿಯಾಗಬೇಕಾದರೆ, ಅದರ ಕಲಾವಿದರಷ್ಟೇ, ತೆರೆಯ ಹಿಂದೆ ಕೆಲಸ ಮಾಡಿರುವ ತಂತ್ರಜ್ಞರೂ ಮುಖ್ಯವಾಗುತ್ತಾರೆ ಎಂಬ ವಾಸ್ತವ ಸತ್ಯವನ್ನು ಅನೇಕ ವೇಳೆ ಚಿತ್ರರಂಗಕ್ಕಾಗಲಿ, ಪ್ರೇಕ್ಷಕರ ಗಮನಕ್ಕಾಗಲಿ ಬರುವುದೇ ಇಲ್ಲ.
ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸದ್ದಿಲ್ಲದೆ ತಾನಾಯಿತು, ತನ್ನ ಕೆಲಸವಾಯಿತು ಅಂತಿರುವ ಚಿತ್ರರಂಗದ ಸಂಗೀತ ಮಾಂತ್ರಿಕರೊಬ್ಬರು ತನ್ನ ಕೆಲಸಗ ಳಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ, ಅವರ ಹೆಸರು ಪಳನಿ ಸೇನಾಪತಿ.
ಸೌಂಡ್ ಇಂಜಿನಿಯರ್ ಆಗಿ ಚಿತ್ರರಂಗದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಪಳನಿ ಸೇನಾಪತಿ ಇಂದು ಕನ್ನಡ ಚಿತ್ರರಂಗದ ಬೇಡಿಕೆಯ ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಕನ್ನಡ, ಇಂಗ್ಲೀಷ್, ಹಿಂದಿ, ಬೆಂಗಾಲಿ, ಮರಾಠಿ, ಮಲೆಯಾಳಂ, ತೆಲುಗು, ತುಮಿಳು ಹೀಗೆ ಬೇರೆ ಬೇರೆ ಭಾಷೆಗಳ ಸುಮಾರು 900ಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿರುವ ಪಳನಿ ಸೇನಾಪತಿ, ಬಾಲಿವುಡ್‌ನ ಲಕ್ಷೀಕಾಂತ್ ಪ್ಯಾರಲಾಲ್, ಇಸ್ಮೆ ೖಲ್ ದರ್ಬಾರ್, ಟಾಲಿವುಡ್‌ನ ಇಳಯರಾಜ, ದೇವ, ಕೀರವಾಣಿ, ರಾಜ್ ಕೋಟಿ, ಹಂಸಲೇಖಾ ಸೇರಿದಂತೆ ಭಾರತೀಯ ಚಿತ್ರರಂಗದ ಈಗಿನ ಬಹುತೇಕ ಎಲ್ಲಾ ಸಂಗೀತ ದಿಗ್ಗಜರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇದೆ.
ಇನ್ನು ಕಳೆದ ವರ್ಷ ತೆಲುಗಿನಲ್ಲಿ ‘ಅನುಕೋನಿ ಓ ಕಥಾ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಪಳನಿ ಅಲ್ಲಿಯೂ ಸೈ ಎನಿಸಿಕೊಂಡಿದ್ದರು. ಈ ಚಿತ್ರದ ಹಾಡುಗಳು ಟಾಲಿವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದು, ತೆಲುಗಿನಲ್ಲಿ ಹಲವು ಅವಕಾಶಗಳನ್ನು ತಂದುಕೊಡುತ್ತಿವೆ. ಈಗಾಗಲೇ ಪಳನಿ ಸೇನಾಪತಿ ಸಂಗೀತ ಸಂಯೋಜಿಸಿರುವ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಮ್ಯೂಸಿಕ್ ಆಲ್ಬಂ ಮತ್ತು ಜೀಸಸ್ ಆಲ್ಬಂಗಳಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸದ್ಯ ಶಿರಡಿ ಸಾಯಿಬಾಬ ಕುರಿತಂತೆ 45 ನಿಮಿಷದ 108 ಶ್ಲೋಕಗಳ ಧ್ವನಿಸಾಂದ್ರಿಕೆಯನ್ನು ಸಿದ್ದಪಡಿಸಲು ಯೋಜನೆ ಹಾಕಿಕೊಂಡಿದ್ದಾರೆ. ಇದರಿಂದಿಗೆ ಕನ್ನಡದಲ್ಲಿ ಮುಂಬರಲಿರುವ ‘ಸದ್ಗುಣ ಸಂಪನ್ನ ಮಾದವ’ ಸೇರಿದಂತೆ ಐದು ಚಿತ್ರಗಳು, ಮೂರು ಮರಾಠಿ ಭಾಷೆಯ ಚಿತ್ರಗಳಿಗೂ ಪಳನಿ ಅವರ ಸಂಗೀತ ಸಂಯೋಜನೆಯಿದೆ. ಈ ವರ್ಷಾಂತ್ಯದಲ್ಲಿ ಪಳನಿ ಸಂಗೀತದ ಎರಡು-ಮೂರು ಚಿತ್ರಗಳು ತೆರೆಗೆ ಬರಲಿದ್ದು, ಕೇಳುಗರಿಗೆ ಪಳನಿ ಸಂಗೀತ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಹಾಡುಗಳು ಹೊರಬಂದ ಮೇಲಷ್ಟೇ ಗೊತ್ತಾಗಲಿದೆ.•