Advertisement

ಪಲ್ಲಕ್ಕಿ ಉತ್ಸವ; ಸಿಂಧೂರ ಲಕ್ಷ್ಮಣ ಸಾಹಸಗಾಥೆ

06:00 AM Oct 26, 2018 | Team Udayavani |

ಕನ್ನಡದಲ್ಲಿ ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಈಗ ಸಿಂಧೂರ ಲಕ್ಷ್ಮಣ ಕುರಿತ ಚಿತ್ರವೊಂದು ಸೆಟ್ಟೇರುತ್ತಿದೆ.

Advertisement

ಪಲ್ಲಕ್ಕಿ ರಾಧಾಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ “ಶೂರ ಸಿಂಧೂರ ಲಕ್ಷ್ಮಣ’ ಎಂದು ಹೆಸರಿಟ್ಟಿದ್ದಾರೆ. ಹದಿನೆಂಟನೆ ಶತಮಾನದ ಅಂತ್ಯದಲ್ಲಿ ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದ ಆರಂಭದಲ್ಲಿರುವ ಸಿಂಧೂರ ಊರಿನ ಲಕ್ಷ್ಮಣ ಎಂಬ ದೇಶಭಕ್ತನ ಕುರಿತಾದ ಚಿತ್ರವಿದು. ಈ ಚಿತ್ರ ಮಾಡುವ ಮುನ್ನ,ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ, ಕಳೆದ ಹತ್ತು ವರ್ಷಗಳಿಂದಲೂ ರಾಜ್ಯಾದ್ಯಂತ ಸಂಚರಿಸಿ,ಲಕ್ಷ್ಮಣನ ಕುರಿತು ಅನೇಕ ವಿಷಯ ಸಂಗ್ರಹಿಸಿ, ಸಂಶೋಧನೆ ನಡೆಸಿ, ಇದೀಗ ಚಿತ್ರ ಮಾಡಲು ತಯಾರಾಗಿದ್ದಾರೆ. ಈ ಚಿತ್ರದಲ್ಲಿ ಕಿಶೋರ್‌ ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಚಿತ್ರಕ್ಕೆ ನಾನಾ ಶಿವಶಂಕರ್‌ ದೇವನಹಳ್ಳಿ ನಿರ್ಮಾಪಕರು.

ಚಿತ್ರದ ಬಗ್ಗೆ ಹೇಳಿಕೊಳ್ಳುವ ಪಲ್ಲಕ್ಕಿ ರಾಧಾಕೃಷ್ಣ, “ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಬಾಗೇಪಲ್ಲಿ ಗಡಿಭಾಗ ಸೇರಿದಂತೆ ಉತ್ತರಕರ್ನಾಟಕದ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗುವುದು.

ಸಿಂಧೂರ ಲಕ್ಷ್ಮಣ ಅವರನ್ನು ಮಹಾರಾಷ್ಟ್ರ ಸರ್ಕಾರ ದರೋಡೆಕೋರ ಎಂದು ಬಿಂಬಿಸಿದೆ. ಆದರೆ, ಕರ್ನಾಟಕ ಸರ್ಕಾರ ಅವನೊಬ್ಬ ದೇಶಭಕ್ತ ಎಂಬುದನ್ನು ಸಾರಿದೆ. ಇಲ್ಲಿ ಕ್ರಾಂತಿಕಾರಿ ವಿಷಯಗಳೊಂದಿಗೆ,ದೇಶಪ್ರೇಮ ಎಷ್ಟಿತ್ತು ಎಂಬುದನ್ನು ಹೇಳಹೊರಟಿದ್ದೇನೆ.ಇಲ್ಲಿ ಕಮರ್ಷಿಯಲ್‌ ಅಂಶಗಳ ಜೊತೆಗೆ ಮನರಂಜನೆಯೂ ಇರಲಿದೆ.

ಇಂತಹ ಚಿತ್ರ ಮಾಡುವಾಗ, ಅವಧಿ ಹೆಚ್ಚು ಇರಲೇಬೇಕು. 2.50 ಗಂಟೆ ಅವಧಿಯೊಳಗೆ ಸಾಧ್ಯವಾದಷ್ಟು ಸಿಂಧೂರ ಲಕ್ಷ್ಮಣನ ಸಾಹಸವನ್ನು ತೋರಿಸುವ ಪ್ರಯತ್ನ ಮಾಡುತ್ತೇನೆ. ಚಿತ್ರದಲ್ಲಿ ಸಾಯಿಕುಮಾರ್‌, ರವಿಶಂಕರ್‌, ಗಿರೀಶ್‌ ಗಲಿವರ್‌, ಸೀನು ಮಾಕಾಳಿ,
ಸೀಮಾ ಬಿಸ್ವಾಸ್‌, ಅನುಪಮ್‌ ಖೇರ್‌,ದೊಡ್ಡಣ್ಣ ಮತ್ತು ಚರಣ್‌ರಾಜ್‌ ಇತರರು ನಟಿಸಲಿದ್ದಾರೆ’ ಎಂದು ವಿವರ ಕೊಡುತ್ತಾರೆ ಪಲ್ಲಕ್ಕಿ.
ನಿರ್ಮಾಪಕ ಶಿವಶಂಕರ್‌ ಅವರಿಗೆ ಕಥೆ ಕೇಳಿ, ರಾಜ್ಯದ ಜನರಿಗೆ ಆ ವೀರನ ಪರಿಚಯ ಮಾಡಿಕೊಡಬೇಕು ಎಂಬ ಆಸೆಯಿಂದ ನಿರ್ಮಾಣಕ್ಕಿಳಿದಿದ್ದಾರಂತೆ.ಚಿತ್ರಕ್ಕೆ ಗಂಗಾಧರ್‌ ಕೂಡ ಸಾಥ್‌ ಕೊಡುತ್ತಿದ್ದಾರೆ. ಇನ್ನು, ಈ ಹಿಂದೆ “ದೇವನಹಳ್ಳಿ’ ಚಿತ್ರದಲ್ಲಿ ನಟಿಸಿದ್ದ ಜಗ್ಗಿ ಕೂಡ ಇಲ್ಲೊಂದು ಪಾತ್ರ ನಿರ್ವಹಿಸುತ್ತಿದ್ದಾರೆ. ಅಂದು ಗುಂಡು ಎಂಬ ಕಲಾವಿದ ರಚಿಸಿದ ಕುದುರೆ ಮೇಲಿರುವ ಶೂರ ಸಿಂಧೂರ ಲಕ್ಷ್ಮಣನ ಭಾವಚಿತ್ರ ಅನಾವರಣ ಮಾಡಲಾಯಿತು. ಅಂದು ಚಿತ್ರತಂಡಕ್ಕೆ ಶುಭಹಾರೈಸಲು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ಅವರು ಆಗಮಿಸಿದ್ದರು. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ. ಥ್ರಿಲ್ಲರ್‌ ಮಂಜು ಸಾಹಸ, ಗೌತಮ್‌ ಸಂಕಲನವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next