Advertisement

ಮುಷರಫ್‌ ಸಾವನ್ನಪ್ಪಿದ 1 ವರ್ಷದ ಬಳಿಕ ಗಲ್ಲುಶಿಕ್ಷೆ ಎತ್ತಿಹಿಡಿದ ಪಾಕ್‌ ಸುಪ್ರೀಂಕೋರ್ಟ್!

03:40 PM Jan 10, 2024 | Team Udayavani |

ಇಸ್ಲಾಮಾಬಾದ್:‌ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಮಿಲಿಟರಿ ಆಡಳಿತಗಾರ ದಿವಂಗತ ಜನರಲ್‌ ಪರ್ವೇಜ್‌ ಮುಷರಫ್‌ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನ್‌ ಸುಪ್ರೀಂಕೋರ್ಟ್‌ ಬುಧವಾರ (ಜನವರಿ 10) ಎತ್ತಿಹಿಡಿದಿದೆ.

Advertisement

ಇದನ್ನೂ ಓದಿ:ಭಾರತ $35 ಟ್ರಿಲಿಯನ್ ಆರ್ಥಿಕತೆಯಾಗುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ: ಮುಕೇಶ್ ಅಂಬಾನಿ

ಸರ್ವಾಧಿಕಾರಿ ಮುಷರ್ರಫ್‌ 1999ರ ಕಾರ್ಗಿಲ್‌ ಯುದ್ಧದ ಹಿಂದಿನ ಸೂತ್ರಧಾರಿಯಾಗಿದ್ದ. ಪಾಕಿಸ್ತಾನದ ಕೊನೆಯ ಮಿಲಿಟರಿ ಆಡಳಿತಗಾರ ಪರ್ವೇಜ್‌ ಮುಷರಫ್‌ ದೀರ್ಘಕಾಲದ ಅನಾರೋಗ್ಯದಿಂದ 2023ರ ಫೆಬ್ರವರಿ 5ರಂದು ಕೊನೆಯುಸಿರೆಳೆದಿದ್ದ.

79 ವರ್ಷದ ಮುಷರಫ್‌ ದುಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2016ರಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಬಿ)ನಲ್ಲಿ ವಾಸ್ತವ್ಯ ಹೂಡಿದ್ದರು. ಪಾಕಿಸ್ತಾನದಲ್ಲಿ ಮುಷರಫ್‌ ವಿರುದ್ಧ ಹಲವಾರು ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಮುಷರಫ್‌ ಸ್ವಯಂ ಆಗಿ ಗಡಿಪಾರುಗೊಂಡಿದ್ದರು.

ಪಾಕಿಸ್ತಾನ ಸುಪ್ರೀಂಕೋರ್ಟ್‌ ನ ಚೀಫ್‌ ಜಸ್ಟೀಸ್‌ ಖ್ವಾಝಿ ಫಾಯೇಝ್‌ ಇಸಾ ಮತ್ತು ಜಸ್ಟೀಸ್‌ ಮನ್ಸೂರ್‌ ಅಲಿ ಶಾ, ಜಸ್ಟೀಸ್‌ ಅಮಿನುದ್ದೀನ್‌ ಖಾನ್‌, ಜಸ್ಟೀಸ್‌ ಅಥಾರ್‌ ಮಿನಲ್ಲಾ ಅವರನ್ನೊಳಗೊಂಡ ನಾಲ್ವರ ಸದಸ್ಯರ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು.

Advertisement

2007ರ ನವೆಂಬರ್‌ ನಲ್ಲಿ ಜನರಲ್‌ ಪರ್ವೇಜ್‌ ಮುಷರಫ್‌ ಪಾಕಿಸ್ತಾನದಲ್ಲಿ ಅಸಂವಿಧಾನಿಕವಾಗಿ ಎಮರ್ಜೆನ್ಸಿ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದು, ಇದು ದೇಶದ್ರೋಹ ಎಂಬುದಾಗಿ ಆರೋಪಿಸಿ ಪಾಕಿಸ್ತಾನ್‌ ಮುಸ್ಲಿಮ್‌ ಲೀಗ್‌ (ನವಾಜ್)‌ ಪಾಕ್‌ ವಿಶೇಷ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ವಿಶೇಷ ಕೋರ್ಟ್‌ 2019ರ ಡಿಸೆಂಬರ್‌ 17ರಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಏತನ್ಮಧ್ಯೆ ವಿಶೇಷ ಕೋರ್ಟ್‌ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮುಷರಫ್‌ ಸುಪ್ರೀಂಕೋರ್ಟ್‌ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಪಾಕ್‌ ಸುಪ್ರೀಂಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ತೀರ್ಪನ್ನು ನೀಡಿದೆ. ಆದರೆ ಕಕ್ಷಿದಾರ ಮುಷರಫ್‌ ಸಾವನ್ನಪ್ಪಿರುವುದರಿಂದ ಈ ಆದೇಶ ಜಾರಿ ನಿಷ್ಪ್ರಯೋಜಕ ಎಂದು ಘೋಷಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next