ಲಾಹೋರ್: ಪಾಕಿಸ್ಥಾನದ ವನಿತಾ ಕ್ರಿಕೆಟ್ ತಾರೆ, ಮಾಜಿ ನಾಯಕಿ ಸನಾಮಿರ್ ತಮ್ಮ ಒಂದೂವರೆ ದಶಕದ ಕ್ರಿಕೆಟ್ ಬದುಕಿಗೆ ಶನಿವಾರ ವಿದಾಯ ಹೇಳಿದರು.
ಆಲ್‌ರೌಂಡರ್ ಆಗಿದ್ದ 34 ವರ್ಷದ ಸನಾ ಮಿರ್ ಒಟ್ಟು 226 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 2009-2017ರ ಅವಧಿಯ 137 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
“ಕಳೆದ ಒಂದೂವರೆ ದಶಕದ ಕಾಲ ದೇಶಕ್ಕಾಗಿ ಕ್ರಿಕೆಟ್ ಸೇವೆ ಸಲ್ಲಿಸುವ ಅವಕಾಶ ನೀಡಿದ ಪಿಸಿಬಿಗೆ ನಾನು ಆಭಾರಿ. ಇದು ನನಗೆ ಲಭಿಸಿದ ಗೌರವ. ಈ ಸಂದರ್ಭದಲ್ಲಿ ಸಹ ಆಟಗಾರ್ತಿಯರಿಗೆ, ಸಹಾಯಕ ಸಿಬಂದಿಗೆ, ತರಬೇತುದಾರರಿಗೆ, ಕುಟುಂಬಕ್ಕೆ ಮತ್ತು ನನ್ನನ್ನು ಬೆಂಬಲಿಸಿದ ಅಪಾರ ಅಭಿಮಾನಿ ವರ್ಗಕ್ಕೆ ಕೃತಜ್ಞತೆಗಳು. ಇವರ ನೆರವಿಲ್ಲದೆ ನನಗೆ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕ್ರಿಕೆಟ್ ಜೀವನ ನನಗೆ ಸಂಪೂರ್ಣ ತಪ್ತಿ ಕೊಟ್ಟಿದೆ’ ಎಂದು ಸನಾ ಮಿರ್ ವಿದಾಯದ ಸಂದರ್ಭದಲ್ಲಿ ಹೇಳಿದ್ದಾರೆ.
ಸನಾ ಸಾಧನೆ
120 ಏಕದಿನ ಪಂದ್ಯಗಳಿಂದ 1,630 ರನ್ ಬಾರಿ ಸಿದ ಸನಾ ಮಿರ್, ತಮ್ಮ ಆಫ್ ಸ್ಪಿನ್ ಬೌಲಿಂಗ್ ಮೂಲಕ 151 ವಿಕೆಟ್ ಹಾರಿಸಿದ್ದಾರೆ. ಹಾಗೆಯೇ 106 ಟಿ20 ಪಂದ್ಯಗಳನ್ನಾಡಿದ್ದು, 802 ರನ್ ಹಾಗೂ 89 ವಿಕೆಟ್ ಸಂಪಾದಿಸಿದ್ದಾರೆ. ಏಕದಿನದಲ್ಲಿ 32ಕ್ಕೆ 5 ಹಾಗೂ ಟಿ20ಯಲ್ಲಿ 13ಕ್ಕೆ 4 ವಿಕೆಟ್ ಕೆಡವಿದ್ದು ಅತ್ಯುತ್ತಮ ಸಾಧನೆಯಾಗಿದೆ.