ಹೊಸದಿಲ್ಲಿ : ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಮೂಹಗಳನ್ನು ಮಟ್ಟ ಹಾಕುವ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕೆಂದು ಅಂತಾರಾಷ್ಟ್ರೀಯ ಸಮುದಾಯ ತನ್ನಮೇಲೆ ಒತ್ತಡ ಹಾಕುತ್ತಿರುವುದಕ್ಕೆ ಡೋಂಟ್ ಕೇರ್ ಎನ್ನುತ್ತಿರುವ ಪಾಕಿಸ್ಥಾನ, ಭಾರತದ ಮೇಲೆರಗುವ ಹೊಸ ಗೇಮ್ ಪ್ಲಾನ್ ಹಾಕಿಕೊಂಡಿರುವುದನ್ನು ಭಾರತೀಯ ಗುಪ್ತಚರ ದಳ ಬಹಿರಂಗಗೊಳಿಸಿದೆ.
ಭಾರತದ ಮೇಲೆ ಜೈಶ್ ಎ ಮೊಹಮ್ಮದ್ ಮತ್ತು ತಾಲಿಬಾನ್ ಉಗ್ರ ಸಂಘಟನೆಗಳು ಜತೆಗೂಡಿ ಭಯೋತ್ಪಾದಕ ದಾಳಿ ನಡೆಸುವುದಕ್ಕೆ ಪಾಕಿಸ್ಥಾನ ಇದೀಗ ಕುಮ್ಮಕ್ಕು ನೀಡುತ್ತಿರುವುದಾಗಿ ಗೊತ್ತಾಗಿದೆ.
ಭಾರತದ ಮೇಲೆ ಜೈಶ್ ಮತ್ತು ತಾಲಿಬಾನ್ ಉಗ್ರ ಸಂಘಟನೆಗಳು ಜತೆಗೂಡಿ ವಿನಾಶಕಾರಿ ಉಗ್ರ ದಾಳಿ ನಡೆಸಬೇಕೆನ್ನುವುದೇ ಪಾಕಿಸ್ಥಾನದ ಹೊಸ ಗೇಮ್ ಪ್ಲಾನ್ ಆಗಿರುವುದು ಬಯಲಾಗಿದೆ.
ಈ ಹೊಸ ಗೇಮ್ ಪ್ಲಾನ್ ಅನುಷ್ಠಾನ ಮಾಡುವುದಕ್ಕೆ ಪಾಕಿಸ್ಥಾನದ ಕುಪ್ರಸಿದ್ಧ ಗುಪ್ತಚರ ದಳ ಐಎಸ್‌ಐ ಈಗ ಹೊಸ ಮಾರ್ಗೋಪಾಯಗಳನ್ನು ಅನ್ವೇಷಿಸುತ್ತಿರುವುದಾಗಿ ಭಾರತೀಯ ಗುಪ್ತ ಚರ ದಳ ತಿಳಿಸಿದೆ. ಇದಕ್ಕಾಗಿ ತನ್ನಲ್ಲಿನ ಈ ಎರಡು ವಿಶ್ವ-ಕುಖ್ಯಾತ ಉಗ್ರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಯತ್ನಗಳನ್ನು ಐಎಸ್‌ಐ ಮಾಡುತ್ತಿದೆ ಎನ್ನಲಾಗಿದೆ.
ವಿಶೇಷವೆಂದರೆ ಭಾರತ, ಪಾಕಿಸ್ಥಾನದ ಬಾಲಾಕೋಟ್ ನಲ್ಲಿನ ಜೈಶ್ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್ ದಾಳಿ ನಡೆಸುವುದಕ್ಕೆ ಮುನ್ನವೇ ಜೈಶ್, ತಾಲಿಬಾನ್ ಮತ್ತು ಹಕಾನಿ ಉಗ್ರ ಜಾಲದ ಟಾಪ್ ಕಮಾಂಡರ್‌ಗಳು ಪಾಕಿಸ್ಥಾನದಲ್ಲಿ ರಹಸ್ಯ ಸಭೆ ನಡೆಸಿದ್ದವು ಎಂದು ಈಗ ಗೊತ್ತಾಗಿದೆ.
ಈ ರಹಸ್ಯ ಸಭೆಯಲ್ಲಿ ಜೈಶ್, ತಾಲಿಬಾನ್ ಮತ್ತು ಹಕ್ಕಾನಿ ಉಗ್ರ ಜಾಲಗಳು ಜತೆಗೂಡಿ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲಿ ಜಿಹಾದ್ ನಡೆಸಲು ತೀರ್ಮಾನಿಸಿದ್ದವು.
ಭಾರತೀಯ ಗುಪ್ತ ಚರ ದಳ ನೀಡಿರುವ ಈ ಬಹುಮುಖ್ಯ ಮಾಹಿತಿಯನ್ನು ಅನುಸರಿಸಿ ಭಾರತೀಯ ಸೇನಾಪಡೆಯ ಮೂರು ವಿಭಾಗಗಳು ದೇಶದ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದು ಉಗ್ರರು ನಡೆಸಬಹುದಾದ ಸಮುಂದರೀ ಜಿಹಾದ್ ಬಗ್ಗೆಯೂ ಎಚ್ಚರ ವಹಿಸಿವೆ ಎಂದು ಮೂಲಗಳು ತಿಳಿಸಿವೆ.