Advertisement
ಇದೇ ವೇಳೆ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಪಾಕ್ ವಿರುದ್ಧದ ಸೇನಾ ಕ್ರಮಕ್ಕೆ ಸಂಬಂಧಿಸಿದಂತೆ ಕಠಿನ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಯುದ್ಧಪೀಡಿತ ಪ್ರದೇಶದಂತಾಗಿರುವ ಕಾಶ್ಮೀರದಲ್ಲಿ ಸರಕಾರದ ನಿರ್ದೇಶ ಪಡೆದು ಕ್ರಮ ಕೈಗೊಳ್ಳುವಷ್ಟು ಸಮಯ ಸೇನೆಗೆ ಇಲ್ಲ. ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ನಿಯಂತ್ರಣ ರೇಖೆಯಲ್ಲಿ ನುಸುಳುಕೋರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ಥಾನ ಸೇನಾ ಬಂಕರ್‌ಗಳ ಮೇಲೆ ಭಾರತೀಯ ಸೇನೆ ಕಠಿನ ಕ್ರಮ ಕೈಗೊಂಡಿರುವುದು ಹಾಗೂ ಪ್ರತಿ ಚಿತಾವಣೆಗೂ ಭಾರತದ ಕಡೆಯಿಂದ ಭಾರೀ ಎದುರೇಟು ಸಿಗುತ್ತಿರುವುದು ಪಾಕ್‌ಗೆ ನುಂಗಲಾರದ ತುತ್ತಾಗಿದೆ.
ಅಮೆರಿಕ ಪಾಕ್‌ಗೆ ನೀಡುತ್ತಿದ್ದ ವಾರ್ಷಿಕ 1,230 ಕೋಟಿ ಮಿಲಿಟರಿ ನೆರವು ಸಹಿತ ಒಟ್ಟು 2227 ಕೋಟಿ ರೂ.ಗಳ ಹಣಕಾಸು ನೆರವನ್ನು ಕಡಿತಗೊಳಿಸಲು ಮುಂದಾಗಿದೆ. ಇದರ ಬದಲಿಗೆ ಈ ನೆರವನ್ನು ‘ಸಾಲ’ ಎಂದು ನೀಡಲು ಚಿಂತಿಸಿದೆ. ಈ ಕುರಿತ ಶಿಫಾರಸನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರ ತನ್ನ ಬಜೆಟ್‌ನಲ್ಲಿ ಪ್ರಸ್ತಾವಿಸಿದೆ. ಪಾಕ್ ಭಯೋತ್ಪಾದನಾ ನಿಗ್ರಹದಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ಅದಕ್ಕೆ ವಾರ್ಷಿಕ 1,230 ಕೋಟಿ ರೂ. ಮಿಲಿಟರಿ ನೆರವನ್ನು ಅಮೆರಿಕ ನೀಡುತ್ತಿತ್ತು. ಒಂದು ವೇಳೆ ಮಿಲಿಟರಿ ಮತ್ತು ಹಣಕಾಸು ನೆರವು ಅಮೆರಿಕದಿಂದ ನಿಂತು, ಅದು ಸಾಲರೂಪದಲ್ಲಿ ಸಿಕ್ಕರೆ, ಹಣಕಾಸು ವಿಚಾರದಲ್ಲಿ ಪಾಕ್ ಸ್ಥಿತಿ ಬಿಗಡಾಯಿಸಲಿದೆ ಎನ್ನಲಾಗಿದೆ.
Related Articles
ಸಿಯಾಚಿನ್ ಭಾಗದಲ್ಲಿ ಪಾಕ್‌ನ ಯಾವುದೇ ಯುದ್ಧ ವಿಮಾನಗಳು ಭಾರತದ ವಾಯು ಪ್ರದೇಶಕ್ಕೆ ಪ್ರವೇಶ ಮಾಡಿಯೇ ಇಲ್ಲ ಎಂದು ಭಾರತೀಯ ವಾಯುಪಡೆ ಹೇಳಿದೆ. ಈ ಮೂಲಕ ಭಾರತದ ವಾಯುಸರಹದ್ದಿನೊಳಕ್ಕೆ ಪಾಕ್ ಯುದ್ಧ ವಿಮಾನಗಳು ನುಗ್ಗಿವೆ ಎಂಬ ವರದಿಯನ್ನು ಅದು ಅಲ್ಲಗಳೆದಿದೆ.
Advertisement