ಅಟ್ಟಾರಿ (ಪಂಜಾಬ್): ಭಾರತೀಯ ಸೇನೆ 2016ರ ಸೆಪ್ಟrಂಬರ್ ತಿಂಗಳಲ್ಲಿ “ನಿರ್ದಿಷ್ಟ ದಾಳಿ’ ನಡೆಸಿದ್ದ ವೇಳೆ ಪ್ರಮಾದವಶಾತ್ ಗಡಿನಿಯಂತ್ರಣ ರೇಖೆ ದಾಟಿದ್ದ ಮಹಾರಾಷ್ಟ್ರ ಮೂಲದ ಯೋಧ ಚಂದು ಬಾಬುಲಾಲ್ ಚವಾಣ್‌ರನ್ನು ಪಾಕಿಸ್ಥಾನ ಬಿಡುಗಡೆಗೊಳಿಸಿದೆ. ಅವರು ಅಟ್ಟಾರಿ-ವಾಘಾ ಗಡಿಯಿಂದ ಭಾರತಕ್ಕೆ ವಾಪಸಾದರು. ಚಂದುವನ್ನು ವಶಕ್ಕೆ ಪಡೆದ ಬಿಎಸ್‌ಎಫ್ ಅವರನ್ನು ಸೇನೆಗೆ ಒಪ್ಪಿಸಿತು. ಸದ್ಯ ಚಂದುವನ್ನು ರಹಸ್ಯ ತಾಣಕ್ಕೆ ರವಾನಿಸಲಾಗಿದೆ.
ಕಳೆದ ವರ್ಷ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದ್ದ ಸೀಮಿತ ದಾಳಿಯನ್ನು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿ ನೂರಾರು ಉಗ್ರರ ಸಾವಿಗೆ ಕಾರಣವಾಗಿತ್ತು. ದಾಳಿ ಮುಗಿದು ಹಿಂದಿರುಗುವ ವೇಳೆ ಚಂದು ಕಣ್ತಪ್ಪಿನಿಂದ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಮರಳಿ ವಶಕ್ಕೆ ಪಡೆಯಲು ಭಾರತೀಯ ವಿದೇಶಾಂಗ ಸಚಿವಾಲಯ ಸತತ ಯತ್ನ ನಡೆಸಿತ್ತು.
ತನ್ನನ್ನು ಮತ್ತೆ ವಶಕ್ಕೆ ಪಡೆಯಲು ಅವಿರತ ಯತ್ನ ನಡೆಸಿದ ಭಾರತೀಯ ಸೇನೆ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಚಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಸಜ್ಜನಿಕೆಯಿಂದ ಮರಳಿಸಿದ್ದೇವೆ: ಯೋಧರನ್ನು ಮರಳಿ ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಪಾಕಿಸ್ಥಾನ ಸೇನೆಯ ಮೇಜರ್ ಜನರಲ್ ಆಸಿಫ್ ಗಫೂರ್, ಭಾರತೀಯ ಯೋಧನನ್ನು ನಾವು ಹಿಂದಿರುಗಿಸಿದ್ದು ನೆರೆಹೊರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕೆಂಬ ಸಜ್ಜನಿಕೆ ಯಿಂದ ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಕ್ ಸೇನೆ ವ್ಯತಿರಿಕ್ತ ಹೇಳಿಕೆ!
ಆದರೆ ಚಂದುವನ್ನು ಬಿಡುಗಡೆ ಮಾಡುವ ವೇಳೆ ಪಾಕಿಸ್ಥಾನ ಸೇನೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದೆ. ಚಂದು ತನ್ನ ಸೇನಾ ನಾಯಕರ ಧೋರಣೆಗಳಿಂದ ನೊಂದಿದ್ದರು. ಆದ್ದರಿಂದಲೇ ಗಡಿ ದಾಟಿದ್ದರು. ಅವರನ್ನು ಭಾರತಕ್ಕೆ ಮರಳುವಂತೆ ಮನವೊಲಿಸಲಾಗಿದೆ ಎಂದಿದೆ.