ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರವಾಗಿರುವ ನಡುವೆಯೇ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಜೋರಾಗಿದೆ. ಪಾಕಿಸ್ತಾನಿ ರೂಪಾಯಿ ಮೌಲ್ಯ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕುಸಿದಿದೆ.
ಬುಧವಾರ ಡಾಲರ್ ಎದುರು 236.02 ರೂ. ಇದ್ದ ಮೌಲ್ಯ ಗುರುವಾರ 240.5 ರೂ.ಗೆ ಕುಸಿದಿದೆ. ಅರ್ಥಾತ್ 4.48 ರೂ. ಕುಸಿತ. ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆಯೇ ಈ ಸ್ಥಿತಿಗೆ ಕಾರಣ, ಸರ್ಕಾರ ರೂಪಾಯಿ ಮೌಲ್ಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ರಾಜಕಾರಣಿಗಳು, ನಾಯಕರೆಲ್ಲ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲಷ್ಟೇ ಆಸ್ಥೆ ವಹಿಸುತ್ತಿದ್ದಾರೆಂದು ವಿದೇಶಿ ವಿನಿಮಯ ಸಂಸ್ಥೆಗಳ ಕಾರ್ಯದರ್ಶಿ ಝಫರ್ ಪರಾಚ ದೂರಿದ್ದಾರೆ.
ಕೂಡಲೇ ಚುನಾವಣೆ ನಡೆಸಿ: ಕೆಲವು ತಿಂಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಸ್ಥಾನ ಕಳೆದುಕೊಂಡ; ತೆಹ್ರೀಕ್ ಇ ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್, ತಕ್ಷಣವೇ ಸಂಸತ್ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ. ದೇಶದಲ್ಲಿ ರಾಜಕೀಯ, ಆರ್ಥಿಕ ಅಸ್ಥಿರತೆಗೆ ಪರಿಹಾರ ಸಿಗಬೇಕಾದರೆ ತಕ್ಷಣವೇ ಚುನಾವಣೆ ನಡೆಯಬೇಕು. ಹಾಗೆಯೇ ವಿದ್ಯುನ್ಮಾನ ಮತಯಂತ್ರ ಬಳಸಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪಾಕ್‌ಗೆ ಕ್ಷಿಪಣಿಗಳ ಬಿಡಿಭಾಗ ಪೂರೈಸಲು ಚೀನಾ ವಿಫಲ!:
ಚೀನಾದಿಂದ ಪಾಕಿಸ್ತಾನ ರಕ್ಷಣಾ ಸಾಧನಗಳನ್ನು ಖರೀದಿಸುವುದು ಮಾಮೂಲಿ. ಈಗ ಅದೇ ಸಂಗತಿ ಪಾಕಿಸ್ತಾನಕ್ಕೆ ಮುಳುವಾಗಿದೆ! ತಾನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿರುವ ಕ್ಷಿಪಣಿಗಳಿಗೆ ಅಗತ್ಯ ಬಿಡಿಭಾಗಗಳನ್ನು ಕಳುಹಿಸಲು ಚೀನಾಕ್ಕೆ ಆಗುತ್ತಿಲ್ಲ. ಇದು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತನ್ನ ವೈಮಾನಿಕ ಸರಹದ್ದನ್ನು ಕಾಪಾಡಿಕೊಳ್ಳಲು ಆಗದ ಸ್ಥಿತಿಗೆ ಪಾಕ್ ತಲುಪಿದೆ. ಹೀಗೆಂದು ಡಿಫೆಸಾ ಆನ್‌ಲೈನ್ ವೆಬ್‌ಸೈಟ್ ವರದಿ ಮಾಡಿದೆ.