ಇಸ್ಲಾಮಾಬಾದ್/ನವದೆಹಲಿ: ಭಾರತದ ನೆಲಕ್ಕೆ ನುಗ್ಗಿ ಹುಚ್ಚು ಸಾಹಸ ಮಾಡಲು ಪ್ರಯತ್ನಿಸಿದ್ದಕ್ಕೆ ತಕ್ಕ ಬೆಲೆ ತೆತ್ತಿರುವ ಪಾಕಿಸ್ತಾನ ಈಗ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ (ಡಿಜಿಎಂಒ) ಮೂಲಕ ಮಾತುಕತೆಗೆ ಮುಂದಾಗಿದೆ.
ಗಮನಾರ್ಹ ಅಂಶವೆಂದರೆ 4 ವರ್ಷಗಳ ಬಳಿಕ ನೆರೆಯ ರಾಷ್ಟ್ರ ಇಂಥ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಪಾಕಿಸ್ತಾನದ “ದ ಡಾನ್’ ಪತ್ರಿಕೆ ವರದಿ ಮಾಡಿದೆ. ಇಂಥ ಕ್ರಮದ ಮೂಲಕ ಭಾರತದ ಜತೆಗಿನ ಬಿಕ್ಕಟ್ಟಿನ ಪ್ರಮಾಣ ತಗ್ಗಿಸಲು ಮುಂದಾಗಿದೆ. ಪಾಕಿಸ್ತಾನದ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಭೆಯ ಬಳಿಕ ಇಂಥ ಪ್ರಸ್ತಾಪ ಮಾಡಿದ್ದಾರೆ ಎಂದು ಪತ್ರಿಕೆ ಹೇಳಿಕೊಂಡಿದೆ. ಕಳೆದ ನವೆಂಬರ್‌ನಲ್ಲಿ ಪಾಕಿಸ್ತಾನವೇ ಕೋರಿಕೆ ಸಲ್ಲಿಸಿದ್ದರಿಂದ ದೂರವಾಣಿ ಮೂಲಕ ಡಿಜಿಎಂಒಗಳ ಮಾತುಕತೆ ನಡೆಸಲಾಗಿತ್ತು.
ಈ ನಡುವೆ ಭಾರತ ಪಾಕಿಸ್ತಾನಕ್ಕೆ ಬೆದರಿಕೆ ಹುಟ್ಟಿಸುವ ರಾಷ್ಟ್ರವಲ್ಲ ಎಂದು ಅಮೆರಿಕ ಪ್ರತಿಪಾದಿಸಲು ಯತ್ನಿಸುತ್ತಿದೆ ಎಂದು ನೆರೆಯ ರಾಷ್ಟ್ರದ ರಕ್ಷಣಾ ಸಚಿವ ಖುರ್ರಂ ದಸ್ತಗಿರ್ ಖಾನ್ ಹೇಳಿದ್ದಾರೆ. ಆದರೆ ಅಮೆರಿಕ ಭಾರತ ಎಲ್‌ಒಸಿಯಾದ್ಯಂತ ನಡೆಸುತ್ತಿರುವ ದೌರ್ಜನ್ಯವನ್ನು ಅಮೆರಿಕ ಮನಗಂಡಿಲ್ಲ ಎಂದಿದ್ದಾರೆ.
ಸೇನೆ ವಿರುದ್ಧ ಸಾಮಾಜಿಕ ಜಾಲತಾಣ ಬಳಕೆ: ಭಾರತೀಯ ಸೇನೆ ವಿರುದ್ಧ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ. ಭೂಸೇನೆಯ 70ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿÉ ಮಾತಾಡಿ, ಈ ಬಗ್ಗೆ ಹೆಚ್ಚಿನ ಜಾಗರೂಕತೆಯಿಂದ ಇರಬೇಕಾಗಿದೆ ಎಂದು ಹೇಳಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುಕೋರರಿಗೆ ಪಾಕಿಸ್ತಾನ ನಿರಂತರವಾಗಿ ನೆರವು ನೀಡುತ್ತಾ ಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರೈಫಲ್ ಖರೀದಿಗೆ ಖರೀದಿ ಮಂಡಳಿ ಒಪ್ಪಿಗೆ : ಸೇನೆಗೆ ಅಗತ್ಯವಾಗಿರುವ ಅಸಾಲ್ಟ್ ರೈಫಲ್‌ಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಒಪ್ಪಿಗೆ ನೀಡಿದೆ. ಅದಕ್ಕಾಗಿ ಒಟ್ಟು 3,547 ಕೋಟಿ ರೂ. ವೆಚ್ಚವಾಗಲಿದೆ. ಆದ್ಯತೆಯ ಮೇರೆಗೆ ಅದನ್ನು ಖರೀದಿಸಲಾಗು ವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.