ಬೆಂಗಳೂರು: ನೇಪಾಳದಿಂದ ಭಾರತಕ್ಕೆ ಬಂದಿದ್ದ ಇಬ್ಬರು ಯುವಕರು, ಓರ್ವ ಯುವತಿ ಸೇರಿದಂತೆ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಸಿಸಿಬಿ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕಳೆದ 9 ತಿಂಗಳಿನಿಂದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ವಾಸವಾಗಿದ್ದರು. ಅಷ್ಟೇ ಅಲ್ಲ ಪಾಕಿಸ್ತಾನದ ಪ್ರಜೆಗಳಾಗಿದ್ದ ಮೂವರು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿಯನ್ನು ಪಡೆದಿರುವುದಾಗಿ ಸಿಸಿಬಿ ಮೂಲಗಳು ಹೇಳಿವೆ.
ಬಂಧಿತರನ್ನು ಕಿರೋನ್ ಗುಲಾಮ್ ಅಲಿ, ಶಂಶೀರ್ ಶಂಶುದ್ದೀನ್ ಹಾಗೂ ಸಮೀರಾ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಯಾವ ಉದ್ದೇಶದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ, ಅವರ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ. ಸದ್ಯ ಸಿಸಿಬಿ ಹಾಗೂ ಕುಮಾರಸ್ವಾಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾಲ್ವರ ಬಂಧನ: ಪೊಲೀಸ್ ಆಯುಕ್ತ
ಮೂವರು ಪಾಕ್ ಹಾಗೂ ಓರ್ವ ಕೇರಳ ವ್ಯಕ್ತಿಯ ಬಂಧನ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಅವರನ್ನೆಲ್ಲ ಬಂಧಿಸಲಾಗಿದೆ ಎಂದು ಹೇಳಿದರು.
ಕತಾರ್ ನಿಂದ ಮಸ್ಕತ್ ಗೆ ಬಂದು ಅಲ್ಲಿಂದ ಕಾಠ್ಮಂಡುಗೆ ಬಂದಿದ್ದರು. ನೇಪಾಳದಿಂದ ಪಾಟ್ನಾಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ಕೇರಳ ಮೂಲದ ವ್ಯಕ್ತಿ ಮೂವರು ಪಾಕ್ ಪ್ರಜೆಗಳನ್ನು ಬೆಂಗಳೂರಿಗೆ ಕರೆ ತಂದಿರುವುದಾಗಿ ಸೂದ್ ವಿವರಿಸಿದ್ದಾರೆ.