ಪಾಕಿಸ್ತಾನದ ಪದಭ್ರಷ್ಟ ಪ್ರಧಾನಿ ನವಾಜ್ ಷರೀಫ್ ಅಲ್ಲಿನ ಪತ್ರಿಕೆ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಸಂಚಲನಕ್ಕೆ ಕಾರಣವಾಗಿವೆ. ಷರೀಫ್ ಈಗ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಒಬ್ಬ ಮಾಜಿ ಪ್ರಧಾನಿಯಾಗಿ ಅವರು ಹೇಳಿದ ಸತ್ಯಗಳು ಪಾಕಿಸ್ತಾನದ ಮುಖವಾಡವನ್ನು ಕಳಚಿ ಹಾಕಿದೆ. ನಿರ್ದಿಷ್ಟವಾಗಿ 2008ರಲ್ಲಿ ಮುಂಬಯಿ ನಗರದ ಮೇಲಾದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಷರೀಫ್ ಹೇಳಿದ ಮಾತು ಇಷ್ಟು ಕಾಲ ಭಾರತ ಪ್ರತಿಪಾದಿಸುತ್ತಿದ್ದ ವಾದವನ್ನು ಎತ್ತಿ ಹಿಡಿದಿದೆ. ಮುಂಬಯಿ ಮೇಲೆ ದಾಳಿ ಮಾಡಿರುವುದು ಪಾಕಿಸ್ತಾನದ ಉಗ್ರರೇ ಎನ್ನುವುದನ್ನು ಷರೀಫ್ ನೇರವಾಗಿಯೇ ಒಪ್ಪಿಕೊಂಡಿದ್ದಾರೆ. ಗಡಿ ದಾಟಿ ಹೋದ ಉಗ್ರರು ಮುಂಬಯಿಯಲ್ಲಿ ಅಷ್ಟೊಂದು ಮಂದಿಯನ್ನು ಸಾಯಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ ಎಂದಿದ್ದಾರೆ ಷರೀಫ್.
ಅಂತೆಯೇ ತನ್ನ ದೇಶದಲ್ಲಿ ಹುಲುಸಾಗಿ ಬೆಳೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳ ಕುರಿತೂ ಮಾತನಾಡಿದ್ದಾರೆ. ಸಯೀದ್ ಹಫೀಜ್, ಅಜರ್ ಮೊಹಮ್ಮದ್ ಮತ್ತಿತರ ಉಗ್ರರು ಸ್ಥಾಪಿಸಿರುವ ಉಗ್ರ ಸಂಘಟನೆಗಳ ಹೆಸರು ಉಲ್ಲೇಖೀಸದಿದ್ದರೂ ಇಂಥ ಉಗ್ರ ಸಂಘಟನೆಗಳಿಂದಾಗಿ ಅಂತ ರಾಷ್ಟ್ರೀಯವಾಗಿ ಪಾಕಿಸ್ತಾನ ಏಕಾಂಗಿಯಾಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅಧಿಕಾರ ಹೋದ ಬಳಿಕವಾದರೂ ಷರೀಫ್ ಜಗತ್ತೇ ಹೇಳುತ್ತಿದ್ದ ಮಾತನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆಯನ್ನು ತೋರಿಸಿರುವುದು ಸ್ವಾಗತಾರ್ಹ. ಷರೀಫ್ ತಪ್ಪೊಪ್ಪಿಗೆ ಹೇಳಿಕೆಯಿಂದ ಈಗ ಭಾರತಕ್ಕೆ ಆಗಬೇಕಾದದ್ದೇನೂ ಇಲ್ಲ. ಆದರೆ ಒಬ್ಬ ಮಾಜಿ ಪ್ರಧಾನಿಯೇ ನಾವು ಹೇಳುತ್ತಿದ್ದ ಮಾತನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ಹಾಗೆ ನೋಡಿದರೆ ಷರೀಫ್ ಹೇಳಿರುವುದರಲ್ಲಿ ಹೊಸತೇನೂ ಇಲ್ಲ. ಮುಂಬಯಿ ದಾಳಿಯ ರೂವಾರಿಗಳು ಪಾಕಿಸ್ತಾನದವರು ಎನ್ನುವುದು ಎಂದೋ ಸಾಬೀತಾಗಿರುವ ವಿಷಯ. ಕೆಲ ವರ್ಷದ ಹಿಂದೆ ಇನ್ನೋರ್ವ ಮಾಜಿ ಪ್ರಧಾನಿ ಮುಷರಫ್ ಕೂಡ ಪರೋಕ್ಷವಾಗಿ ಇದನ್ನು ಒಪ್ಪಿದ್ದರು. ಆದರೆ ಸೇನಾ ಹಿನ್ನೆಲೆಯಿಂದ ಬಂದು ಚುನಾಯಿತ ಸರಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೇರಿದ ಮಿಲಿಟರಿ ಜನರಲ್ ಹೇಳಿದ ಮಾತಿಗಿಂತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾಗಿ ಪ್ರಧಾನಿಯಾಗಿದ್ದ ವ್ಯಕ್ತಿ ಹೇಳಿರುವ ಮಾತಿಗೆ ಹೆಚ್ಚು ತೂಕವಿದೆ ಎನ್ನುವ ಕಾರಣಕ್ಕೆ ಷರೀಫ್ ಮಾತು ಮುಖ್ಯವಾಗುತ್ತದೆ.
2008, ನ. 26ರಂದು ರಾತ್ರಿ 10 ಉಗ್ರರು ಮುಂಬಯಿಗೆ ನುಗ್ಗಿ ಬಂದು ಮೂರು ದಿನ ಅಟ್ಟಹಾಸ ಮೆರೆದು, 160 ಮಂದಿಯನ್ನು ಸಾಯಿಸಿ, ಸಾವಿರಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ ಘಟನೆಯನ್ನು ನಾವು ಎಂದಿಗೂ ಮರೆಯುವುದು ಸಾಧ್ಯವಿಲ್ಲ. ದಾಳಿಯಾದ ಮರುಕ್ಷಣವೇ ಇದರ ರೂವಾರಿಗಳು ಪಾಕಿಸ್ತಾನಿ ಉಗ್ರರು ಎಂದು ಗೊತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಭಾರತ ಪಾಕಿಗೆ ಮೂಟೆಗಟ್ಟಲೆ ಸಾಕ್ಷ್ಯಾಧಾರಗಳನ್ನು ಹಸ್ತಾಂತರಿಸಿದೆ. ಆದರೆ ಹತ್ತು ವರ್ಷವಾಗಿದ್ದರೂ ಈ ಪ್ರಕರಣದ ವಿಚಾರಣೆ ರಾವಲ್ಪಿಂಡಿಯ ನ್ಯಾಯಾಲಯದಲ್ಲಿ ಕುಂಟುತ್ತಾ ಸಾಗಿದೆ.
ಈ ಸಂದರ್ಶನದಲ್ಲಿ ಪಾಕಿಸ್ತಾನದ ಹದಗೆಟ್ಟ ಸ್ಥಿತಿಯ ಕುರಿತು ಷರೀಫ್ಗಿರುವ ಕಳವಳವೂ ವ್ಯಕ್ತವಾಗಿದೆ. ಅದರಲ್ಲೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ಥಾನದ ಮಾತಿಗೆ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ ಎನ್ನುವ ವಾಸ್ತವವನ್ನು ಅವರು ಒಪ್ಪಿಕೊಂಡಿದ್ದಾರೆ.
ಒಂದರ್ಥದಲ್ಲಿ ಇದು ಪಾಕಿಸ್ತಾನವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಏಕಾಂಗಿಯಾಗಿಸಲು ನಾವು ಮಾಡಿದ ಪ್ರಯತ್ನಗಳಿಗೆ ಸಿಕ್ಕಿದ ಯಶ ಎನ್ನಬಹುದು. ಕಡೆಗೂ ಸ್ವತಹ ಪಾಕಿಸ್ತಾನಕ್ಕೆ ಉಗ್ರವಾದವನ್ನು ಬೆಂಬಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜ್ಞಾನೋದಯವಾಗಿರುವುದು ಸ್ವಾಗತಾರ್ಹ. ಇನ್ನಾದರೂ ಆ ದೇಶ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಿ ತನ್ನಲ್ಲಿರುವ ಉಗ್ರರನ್ನು ಮಟ್ಟ ಹಾಕುವ ನಿರ್ಧಾರ ಕೈಗೊಂಡರೆ ಅವರಿಗೆ ಮಾತ್ರವಲ್ಲದೆ ಇಡೀ ಜಗತ್ತಿನ ಶಾಂತಿಗೆ ನೀಡುವ ಬಹುದೊಡ್ಡ ಕೊಡುಗೆಯಾಗುತ್ತದೆ. ಅಭಿವೃದ್ಧಿ ಮತ್ತು ಭಯೋತ್ಪಾದನೆ ಜತೆಜತೆಯಾಗಿ ಹೋಗುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಇದೇ ವೇಳೆ ಕಾಶ್ಮೀರದಲ್ಲಿನ ಹಿಂಸೆ ಕೊನೆಯಾಗಿ ಶಾಂತಿ ನೆಲೆಯಾಗಬೇಕಾದರೂ ಪಾಕಿಸ್ತಾನ ಉಗ್ರವಾದಕ್ಕೆ ವಿದಾಯ ಹೇಳುವ ಜರೂರತ್ತಿದೆ. ಈ ನೆಲೆಯಲ್ಲಿ ಅಲ್ಲಿನ ನಾಯಕರು ಕಾರ್ಯೋನ್ಮುಖರಾಗಲು ಷರೀಫ್ ಮಾತುಗಳು ಸ್ಫೂರ್ತಿಯಾಗಲಿ.