ಕರಾಚಿ: ಪಾಕಿಸ್ಥಾನದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಪಾಕಿಸ್ಥಾನ ಸರಕಾರ ಪುನಃ ಕಿರುಕುಳ ಕೊಡಲಾರಂಭಿಸಿದೆ. ಯಾವುದೇ ಭಾರತೀಯ ಅಧಿಕಾರಿಗಳಿಗೆ ಹೊಸ ಅಡುಗೆ ಅನಿಲ ಸಂಪರ್ಕ ನೀಡದಂತೆ ತಡೆಯೊಡ್ಡಲಾಗಿದ್ದು, ಹಿರಿಯ ಅಧಿಕಾರಿಗಳಿಗೆ ಇಂಟರ್ನೆಟ್ ಸೌಕರ್ಯಕ್ಕೆ ಕೊಕ್ ನೀಡಲಾಗಿದೆ.
ಜತೆಗೆ, ಹೈಕಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ನಿವಾಸ ಹಾಗೂ ಕಚೇರಿಗಳಿಗೆ ಅನಿಯಮಿತವಾಗಿ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಡಿಸೆಂಬರ್‌ನ ಮೊದಲ ವಾರದಲ್ಲಿ, ಭಾರತೀಯ ಹೈಕಮಿಷನರ್ ಕಚೇರಿಯೊಳಕ್ಕೆ ಕೆಲವು ವ್ಯಕ್ತಿಗಳು ಅನುಮತಿ ಯಿಲ್ಲದೆ ಪ್ರವೇಶ ಮಾಡಿರುವ ಘಟನೆಗಳೂ ನಡೆದಿದ್ದು ಆತಂಕ ಸೃಷ್ಟಿಸಿದೆ. ಈ ಕುರಿತು ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತ ನಿರ್ಧರಿಸಿದೆ.
ಇದೇ ವರ್ಷದ ಆರಂಭದಲ್ಲಿ ಪಾಕಿಸ್ಥಾನದಲ್ಲಿರುವ ಭಾರತೀಯ ರಾಜತಾಂತ್ರಿಕ ಸಿಬ್ಬಂದಿಯ ಕೆಲವು ಸಲವತ್ತುಗಳಿಗೆ ಪಾಕ್ ಸರಕಾರ ಕತ್ತರಿ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಸರಕಾರವೂ ಹೊಸದಿಲ್ಲಿಯಲ್ಲಿರುವ ಪಾಕಿಸ್ಥಾನದ ರಾಜತಾಂತ್ರಿಕ ಸಿಬ್ಬಂದಿಗೆ ನೀಡಲಾಗುತ್ತಿದ್ದ ಸವಲತ್ತುಗಳಿಗೆ ತಡೆಯೊಡ್ಡಿತ್ತು. ಈ ವಿಚಾರದ ಬಗ್ಗೆ ಚರ್ಚೆ ನಡೆದು, ನಂತರ ಎರಡೂ ದೇಶಗಳ ರಾಜತಾಂತ್ರಿಕ ಸಿಬ್ಬಂದಿಯನ್ನು ಉತ್ತಮವಾಗಿ ನಡೆಸಿಕೊಳ್ಳುವುದಾಗಿ ಉಭಯ ದೇಶಗಳು ಮಾ. 31ರಂದು ಘೋಷಿಸಿದ್ದವು. ಆದರೀಗ, ಪಾಕಿಸ್ಥಾನ ಪುನಃ ಕ್ಯಾತೆ ತೆಗೆದಿದ್ದು ಭಾರತಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಿದೆ.