Advertisement
ಬೆಳಗ್ಗೆ 6.30ರಿಂದಲೇ ಪಾಕ್ ಸೇನೆಯು ನಿರಂತರವಾಗಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಸಿಡಿಸಿದ ಮೋರ್ಟಾರ್ ಶೆಲ್‌ವೊಂದು ಕರ್ಮಾರಾ ಪ್ರದೇಶದಲ್ಲಿರುವ ಯೋಧನ ಮನೆಯ ಮೇಲೆ ಬಿದ್ದಿದ್ದು, ರಜೆಯಲ್ಲಿದ್ದ ಯೋಧ ಮೊಹಮ್ಮದ್ ಶೌಕತ್, ಅವರ ಪತ್ನಿ ಸಫಿಯಾ ಬೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಹೆಣ್ಣು ಮಕ್ಕಳಾದ ಜೈದಾ ಕೌಸರ್(6), ರೊಬಿನಾ ಕೌಸರ್(12) ಮತ್ತು ನಾಜಿಯಾ ಬಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕ್ ದಾಳಿಗೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡಿದೆ.
ಶನಿವಾರದ ಕದನ ವಿರಾಮ ಉಲ್ಲಂಘನೆ ಬಳಿಕ ಎಂದಿನಂತೆ ಭಾರತದತ್ತ ಬೊಟ್ಟು ಮಾಡಿರುವ ಪಾಕಿಸ್ಥಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಡೆಪ್ಯುಟಿ ಹೈಕಮಿಷನರ್ ಜೆ.ಪಿ. ಸಿಂಗ್ ಅವರನ್ನು ಕರೆಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದೆ. ಜತೆಗೆ, ಭಾರತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವುದು ನಾವಲ್ಲ. ಪಾಕಿಸ್ಥಾನಿ ಪಡೆಗಳ ಗುಂಡಿನ ದಾಳಿಗೆ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. ಪ್ರಸಕ್ತ ವರ್ಷ ಪಾಕ್‌ನಿಂದ 223 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದ್ದು, 50 ನುಸುಳುವಿಕೆ ಯತ್ನ ನಡೆದಿದೆ ಎಂದು ಹೇಳುವ ಮೂಲಕ ಜೆ.ಪಿ. ಸಿಂಗ್ ಪಾಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.