ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಷಣ ಅದೆಷ್ಟು ತೀಕ್ಷ್ಣವಾಗಿ ಪಾಕಿಸ್ಥಾನವನ್ನು ಚುಚ್ಚಿದೆಯೆಂದರೆ, ಭಾರತದ ವಿರುದ್ಧ ಪ್ರತ್ಯಾರೋಪ ಮಾಡುವ ಭರದಲ್ಲಿ ಆ ದೇಶದ ಸ್ಥಿತಿ ಮೇಲೆ ನೋಡಿ ಉಗುಳಿದಂತಾಗಿದೆ. ನಾವು ವಿಜ್ಞಾನಿಗಳು, ವಿದ್ವಾಂಸರು, ವೈದ್ಯರು, ಎಂಜಿನಿಯರ್‌ಗಳನ್ನು ಉತ್ಪಾದಿಸಿದ್ದೇವೆ. ನೀವು ಏನನ್ನು ಉತ್ಪಾದಿಸಿದ್ದೀರಿ? ಕೇವಲ ಭಯೋತ್ಪಾದಕರು, ಭಯೋತ್ಪಾದನಾ ಶಿಬಿರಗಳು, ಲಷ್ಕರ್-ಎ-ತಯ್ಯಬ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದಿನ್ ಮತ್ತು ಹಕ್ಕಾನಿ ನೆಟ್‌ವರ್ಕ್‌ಗಳನ್ನು ಮಾತ್ರ ಸೃಷ್ಟಿಸಿದ್ದೀರಿ. ನಮ್ಮನ್ನು ಜಗತ್ತು ಮಾಹಿತಿ ತಂತ್ರಜ್ಞಾನದ ಸೂಪರ್ ಪವರ್ ಎಂದು ಪರಿಗಣಿಸುತ್ತದೆ, ನಿಮಗೆ ಭಯೋತ್ಪಾದನೆಯ ರಫ್ತು ಕಾರ್ಖಾನೆ ಎಂಬ ಕುಖ್ಯಾತಿಯಿದೆ. ಇಡೀ ಜಗತ್ತಿಗೆ ಹಿಂಸೆ, ಸಾವು ಮತ್ತು ಅಮಾನವೀಯತೆಯನ್ನು ರಫ್ತು ಮಾಡುವುದಷ್ಟೇ ನಿಮ್ಮ ಸಾಧನೆ. ನಿಮ್ಮಿಂದ ಮಾನವೀಯತೆಯ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಮಾನವ ಹಕ್ಕು ಉಲ್ಲಂಘನೆಯ ಆರೋಪ ಮಾಡಿದ್ದ ಪಾಕ್‌ಗೆ ಚೆನ್ನಾಗಿ ನೀರಿಳಿಸಿದ್ದಾರೆ ಸುಷ್ಮಾ ಸ್ವರಾಜ್. ನೀವು ಬೇರೇನೂ ಮಾಡುವುದು ಬೇಡ ಸುಮ್ಮನೆ ಕುಳಿತು ಆತ್ಮಾವಲೋಕ ಮಾಡಿಕೊಳ್ಳಿ. ನಿಮ್ಮ ವೈಫಲ್ಯ ನಿಮಗೆ ಅರ್ಥವಾಗುತ್ತದೆ ಎಂಬ ಕಿವಿಮಾತನ್ನು ಇದೇ ಸಂದರ್ಭದಲ್ಲಿ ಹೇಳಿದ್ದರು.
ಸಾಮಾನ್ಯವಾಗಿ ಮಹಾಧಿವೇಶನದಲ್ಲಿ ಉತ್ತರಿಸುವ ಹಕ್ಕಿನಡಿ ಉತ್ತರಿಸಲು ಕೆಳ ಹಂತದ ರಾಜತಾಂತ್ರಿಕ ಅಧಿಕಾರಿಯನ್ನು ಕಳುಹಿಸುವುದು ವಾಡಿಕೆ. ಆದರೆ ಭಾರತದ ಆರೋಪ ಪಾಕಿಸ್ಥಾನವನ್ನು ಯಾವ ಪರಿ ವಿಚಲಿತಗೊಳಿಸಿದೆ ಎಂದರೆ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿರುವ ಹಿರಿಯ ರಾಜತಾಂತ್ರಿಕೆ ಮದೀಹ ಲೋಧಿಯನ್ನು ಉತ್ತರಿಸಲು ಕಳುಹಿಸಿತು. ಆದರೆ ಲೋಧಿ ಇಲ್ಲಿ ಮಾಡಿಕೊಂಡಿರುವ ಎಡವಟ್ಟಿನಿಂದ ಇಡೀ ಜಗತ್ತಿನೆದುರು ಪಾಕಿಸ್ಥಾನದ ಮಾನ ಹರಾಜಾಗಿದೆ.ಕಾಶ್ಮೀರದಲ್ಲಿ ಭಾರತದ ಸೇನೆ ನಾಗರಿಕರ ಮೇಲೆ ದೌರ್ಜನ್ಯ ಎಸಗುತ್ತಿದೆ. ಅಲ್ಲಿ ನಡೆಯುತ್ತಿರುವುದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ಎಂದು ಆರೋಪಿಸಿದ ಲೋಧಿ ಇದಕ್ಕೆ ಸಾಕ್ಷಿ ಎಂದು ಮುಖ ತುಂಬ ಗಾಯಗಳಿದ್ದ ಯುವತಿಯ ಚಿತ್ರವೊಂದನ್ನು ಪ್ರದರ್ಶಿಸಿ ಇದು ಭಾರತದ ಸೇನೆಯ ಪೆಲೆಟ್ ಗನ್‌ನಿಂದ ಗಾಯಗೊಂಡಿರುವ ಯುವತಿ ಎಂದು ಹೇಳಿದ್ದಾರೆ. ಆದರೆ ಲೋಧಿ ತೋರಿಸಿದ್ದು ಪ್ಯಾಲೆಸ್ತೀನ್ ಯುವತಿಯ ಚಿತ್ರವನ್ನು ಎನ್ನುವುದನ್ನು ಭಾರತ ತಕ್ಷಣವೇ ಬಯಲು ಮಾಡಿದೆ. ಮೂರು ವರ್ಷದ ಹಿಂದೆ ಇಸ್ರೇಲ್ ವಾಯುದಾಳಿಯ ಸಂದರ್ಭದಲ್ಲಿ ಚೂಪಾದ ಲೋಹದ ತುಂಡುಗಳು ಚುಚ್ಚಿ ಮುಖದ ತುಂಬ ಗಾಯಗಳಾಗಿದ್ದ ಈ ಯುವತಿಯ ಚಿತ್ರವನ್ನು ಹೀದಿ ಲೆವಿನ್ ಎಂಬ ಪತ್ರಕರ್ತೆ ತೆಗೆದಿದ್ದರು.
ಲೋಧಿ ಮಾಜಿ ಪತ್ರಕರ್ತೆ. ಪಾಕಿಸ್ಥಾನದ ಪ್ರಮುಖ ಪತ್ರಿಕೆ ದ ನೇಶನ್‌ನ ಸ್ಥಾಪಕ ಸಂಪಾದಕಿ, ಹಾಗೂ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಸಂಪಾದಕರಾದ ಏಶ್ಯಾದ ಮೊದಲ ಮಹಿಳೆ ಎಂಬ ಹಿರಿಮೆಗಳನ್ನು ಬೆನ್ನಿಗಂಟಿಸಿಕೊಂಡಿದ್ದಾರೆ. ಆದರೆ ಇಂತಹ ಪತ್ರಕರ್ತೆ ಯಾವುದೇ ಪರಿಶೀಲನೆ ಮಾಡಿಕೊಳ್ಳದೆ ಯಾವುದೋ ಒಂದು ಚಿತ್ರವನ್ನು ತೋರಿಸಿ ಇದು ಕಾಶ್ಮೀರದ ಸ್ಥಿತಿ ಎಂದು ಹೇಳಿ ನಗೆಪಾಟಲಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಲೋಧಿ ವಿಶ್ವಸಂಸ್ಥೆಯ ಸಭ್ಯತೆಯ ಎಲ್ಲೆಯನ್ನು ಮೀರಿ ತನ್ನ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್, ಬಿಜೆಪಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನೂ ಪರೋಕ್ಷವಾಗಿ ಟೀಕಿಸುವ ಕೀಳು ಮಟ್ಟಕ್ಕಿಳಿದಿದ್ದಾರೆ. ಅದರಲ್ಲೂ ಈ ಟೀಕೆಗೆ ಭಾರತದ ಸ್ವಘೋಷಿತ ವಿಚಾರವಾದಿಗಳು ಬಳಸುವ ಮತಾಂಧ, ಮೂಲಭೂತವಾದಿ ಮುಂತಾದ ಶಬ್ದಗಳನ್ನು ಬಳಸಿದ್ದಾರೆ. ರಾಜಕೀಯ ವ್ಯವಸ್ಥೆ ಆಯಾ ದೇಶದ ಆಂತರಿಕ ವಿಷಯವಾಗಿದ್ದು, ಆ ಕುರಿತು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮಾತನಾಡುವ ಹಕ್ಕು ಪಾಕಿಸ್ಥಾನಕ್ಕೆ ಇಲ್ಲ. ಸ್ವತಃ ಮತಾಂಧ ಉಗ್ರರವನ್ನು ಸಾಕಿ ಸಲಹುತ್ತಿರುವ ಪಾಕಿಸ್ಥಾನ ಧರ್ಮ ನಿರಪೇಕ್ಷತೆ ಮತ್ತು ಜಾತ್ಯಾತೀತ ತತ್ವವನ್ನು ಮೂಲದ್ರವ್ಯವಾಗಿ ಹೊಂದಿರುವ ದೇಶವನ್ನು ಮತಾಂಧ ಎನ್ನುವುದು ಹಾಸ್ಯಾಸ್ಪದ ವಿಚಾರ. ಹಸಿಹಸಿ ಸುಳ್ಳು ಹೇಳಿರುವ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭಾಧ್ಯತೆ ವಿಶ್ವಸಂಸ್ಥೆಯ ಮೇಲಿದೆ. ಆ ದೇಶದ ಸದಸ್ಯತ್ವವನ್ನು ರದ್ದು ಮಾಡಲು ಭಾರತ ವಿಶ್ವಸಂಸ್ಥೆಯ ಮೇಲೆ ಒತ್ತಡ ಹಾಕಬೇಕು.