Advertisement

‘ಅಭಿನಂದನ್‌’ಬಳಸಿ ಭಾರತ ತಂಡವನ್ನು ಹೀಗಳೆದ ಪಾಕ್‌ ಟಿವಿ

01:48 AM Jun 12, 2019 | Team Udayavani |

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುವುದು ಜೂ. 16ರಂದು. ಇದಕ್ಕೂ ಮೊದಲೇ ಪಾಕಿಸ್ಥಾನದ ಮಾಧ್ಯಮಗಳು ಈ ಪಂದ್ಯ ಕಾವೇರುವಂತೆ ಮಾಡಲು ಶ್ರಮಿಸುತ್ತಿವೆ.

Advertisement

ಪಾಕ್‌ ಟಿವಿ ವಾಹಿನಿಯೊಂದು ಜೂ.16ರ ಪಂದ್ಯಕ್ಕೆ ಪೂರ್ವಭಾವಿ ಯಾಗಿ ಜಾಹೀರಾತನ್ನು ಬಿಡುಗಡೆ ಗೊಳಿಸಿದ್ದು, ಇದರಲ್ಲಿ ಬಾಲಾಕೋಟ್ ವಾಯುದಾಳಿ ಸಂದರ್ಭದಲ್ಲಿ ಅಕಸ್ಮಾತ್‌ ಗಡಿ ದಾಟಿ ಪಾಕ್‌ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದ ವಾಯುಪಡೆಯ ಪೈಲಟ್ ಅಭಿನಂದನ್‌ ಅವರನ್ನು ಹೋಲುವ ಪಾತ್ರವೊಂದನ್ನು ಬಳಸಿಕೊಂಡಿದೆ.

ಹೀಗೆ ಸಾಗುತ್ತದೆ ಜಾಹೀರಾತು…
‘ಜಾಝ್ ಟಿವಿ’ ಕ್ಲಿಪಿಂಗ್‌ನಲ್ಲಿ ಅಭಿನಂದನ್‌ರಂತೆ ಹುರಿಮೀಸೆ ಇಟ್ಟುಕೊಂಡು ಭಾರತದ ಕ್ರಿಕೆಟ್ ದಿರಿಸಿನಲ್ಲಿರುವ ವ್ಯಕ್ತಿಯೋರ್ವ, ಸಿಕ್ಕಿ ಬಿದ್ದ ಸಂದರ್ಭದಲ್ಲಿ ಅಭಿನಂದನ್‌ ಚಹಾ ಕುಡಿದ ಶೈಲಿಯಲ್ಲೇ ಚಹಾ ಕುಡಿಯುತ್ತಿರುತ್ತಾನೆ. ಇನ್ನೊಬ್ಬ ವ್ಯಕ್ತಿ ಅವನಲ್ಲಿ ಭಾರತದ ವಿರುದ್ಧ ಆಡುವ ಕುರಿತು ಪ್ರಶ್ನಿಸುತ್ತಾನೆ. ಇದಕ್ಕೆ ಅಭಿನಂದನ್‌ ಪಾತ್ರಧಾರಿ ‘ನಾನದನ್ನು ಹೇಳುವ ಅಗತ್ಯವಿಲ್ಲ’ ಎನ್ನುತ್ತಾನೆ. ಅವರ ಇಂಗ್ಲಿಷ್‌ ದಕ್ಷಿಣ ಭಾರತದವರ ಶೈಲಿಯಲ್ಲಿದೆ. ಅನಂತರ ವ್ಯಕ್ತಿ ಚಹಾ ಹೇಗಿದೆ ಎಂದು ಕೇಳುತ್ತಾನೆ. ಆಗ ಅಭಿನಂದನ್‌ ಪಾತ್ರಧಾರಿ, ನಿಜಕ್ಕೂ ಚೆನ್ನಾಗಿದೆ ಎಂದು ಹೇಳಿ ಚಹಾ ಕಪ್‌ ಎತ್ತಿಕೊಂಡು ಹೊರಡುತ್ತಾನೆ.

ಆಗ ಆ ವ್ಯಕ್ತಿ ಅಭಿನಂದನ್‌ ಪಾತ್ರಧಾರಿಯನ್ನು ತಡೆದು ನಿಲ್ಲಿಸಿ ‘ಏಕ್‌ ಸೆಕೆಂಡ್‌ ರುಕೋ! ‘ಕಪ್‌’ ಕಹಾಂ ಲೇಕೆ ಜಾ ರಹೆ ಹೋ’ (ಒಂದು ಸೆಕೆಂಡ್‌ ನಿಲ್ಲು, ಕಪ್‌ ಎಲ್ಲಿಗೆ ಎತ್ತಿಕೊಂಡು ಹೋಗುತ್ತಿರುವೆ?) ಎಂದು ಹೇಳುತ್ತಾನೆ. ಇಲ್ಲಿ ಕಪ್‌ ಎಂದರೆ ವಿಶ್ವಕಪ್‌ ಎಂದು ಅರ್ಥ.

ಭಾರತ ತಂಡವನ್ನು ಹೀಗಳೆಯುವ ಉದ್ದೇಶದಿಂದಲೇ ಈ ಜಾಹೀರಾತನ್ನು ತಯಾರಿಸಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next